Hijab Row: ಸಂಸ್ಕೃತ ವಿವಿಯಂತೆ ಕರ್ನಾಟಕದಲ್ಲಿ ಉರ್ದು ವಿಶ್ವವಿದ್ಯಾಲಯಕ್ಕೆ SDPI ಡಿಮಾಂಡ್!

By Suvarna News  |  First Published Feb 12, 2022, 1:46 PM IST

*ಬೆಳಗಾವಿಯಲ್ಲಿ SDPI ರಾಜ್ಯ ಸಮಿತಿ ಸದಸ್ಯ ಸಲೀಂ ಖಾನ್ ಸುದ್ದಿಗೋಷ್ಠಿ
*ಉತ್ತರ ಕರ್ನಾಟಕ ಭಾಗದಲ್ಲಿ ಉರ್ದು ಯೂನಿವರ್ಸಿಟಿ ಮಾಡುವಂತೆ ಒತ್ತಾಯ
*ವಿವಾದ ಬಗೆಹರಿಸುವ ಬದಲು ತೇಪೆ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆ
*ನಮ್ಮ ವಿರುದ್ದ ಆದೇಶ ಬಂದ್ರೇ ಕಾನೂನು ಹೋರಾಟ ಮಾಡುತ್ತೇವೆ: ಖಾನ್


ಬೆಳಗಾವಿ (ಫೆ. 12): ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್‌ ವಿವಾದದ ಮಧ್ಯೆ ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದಂತೆ ಉರ್ದು ಯೂನಿವರ್ಸಿಟಿಗೆ ಸ್ಥಾಪನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೇಡಿಕೆ ಇಟ್ಟಿದೆ. ದಕ್ಷಿಣ ಕನ್ನಡದ ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಹೊತ್ತಿಕೊಂಡ ಹಿಜಾಬ್‌-ಕೇಸರಿ ಕಿಡಿ ಇದೀಗ ಉತ್ತರ ದಕ್ಷಿಣವೆನ್ನದೆ ರಾಜ್ಯವ್ಯಾಪಿ ವ್ಯಾಪಿಸಿಕೊಂಡಿದೆ.  ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಭಾರೀ ಸದ್ದು ಮಾಡುತ್ತಿದೆ.ಈ ಮಧ್ಯೆ ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕದ ಯಾವುದಾದರೂ ಜಿಲ್ಲೆಯಲ್ಲಿ ಉರ್ದು ವಿವಿ ಘೋಷಿಸಬೇಕು ಎಂದು ಎಸ್‌ಡಿಪಿಐ ಮನವಿ ಮಾಡಿದೆ. 

ಶನಿವಾರ (ಫೆ. 12) ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಸಲೀಂ ಖಾನ್ ಉತ್ತರ ಕರ್ನಾಟಕ ಭಾಗದಲ್ಲಿ ಉರ್ದು ಯೂನಿವರ್ಸಿಟಿ ಮಾಡುವಂತೆ ಒತ್ತಾಯಿಸಿದ್ದಾರೆ.  "ಸಂಸ್ಕೃತ ವಿಶ್ವವಿದ್ಯಾಲಯ ಮಾಡಿರುವ ಸರ್ಕಾರಕ್ಕೆ ಉರ್ದು ವಿವಿ ಮಾಡುವುದು ದೊಡ್ಡದಲ್ಲ" ಎಂದು ಹೇಳಿದ್ದಾರೆ.  

Tap to resize

Latest Videos

ಇದನ್ನೂ ಓದಿ: Hijab Controversy: 'ಮುಸ್ಲಿಂರ ವಿರುದ್ಧ ಮೆರೆದಾಡಿದ್ರೆ ಮಟ್ಟ ಹಾಕ್ತೇವೆ': ರಘುಪತಿ ಭಟ್‌ಗೆ ಜೀವ ಬೆದರಿಕೆ

ಸರ್ಕಾರವೇ ಹೊಣೆ: ರಾಜ್ಯದಲ್ಲಿ ಹಿಜಾಬ್  ಕೇಸರಿ ಶಾಲು ಸಂಘರ್ಷ ವಿವಾದ ಬಗ್ಗೆ ಪ್ರತಿಕ್ರಯಿಸಿರುವ ಸಲೀಂ ಖಾನ್ ಹಿಜಾಬ್‌ ವಿವಾದಕ್ಕೆ ಸರ್ಕಾರವೇ ಹೊಣೆ ಎಂದಿದ್ದಾರೆ. "ಕೋರ್ಟ್ ಆದೇಶ ಬರುವವರೆಗೂ ಕಾದು ನೋಡುತ್ತಿದ್ದೇವೆ. ನಮ್ಮ ವಿರುದ್ದ ಆದೇಶ ಬಂದರೆ ಕಾನೂನು ಹೋರಾಟ ಮಾಡುತ್ತೇವೆ. ವಿವಾದ ಬಗೆಹರಿಸುವ ಬದಲು ತೇಪೆ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆ. ಅಂದು ಆರು ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದ್ರೇ ಇಡೀ ರಾಜ್ಯ ಶಾಂತವಾಗಿರುತ್ತಿತ್ತು. ಇದಕ್ಕೆಲ್ಲ ಮೂಲ ಕಾರಣವೇ ಬಿಜೆಪಿ ನಾಯಕರು, ಸಂಘ ಪರಿವಾರದವರು" ಎಂದು ಖಾನ್‌ ಆರೋಪಿಸಿದ್ದಾರೆ. 

ಎಲ್ಲಿಯೂ ಆಗದ ವಿವಾದ ಉಡುಪಿಯಲ್ಲಾಗಿದ್ದೇಕೆ?: ಉಡುಪಿಯ ಕಾಪುನಲ್ಲಿನ ಎಸ್‌ಡಿಪಿಐ ಸದಸ್ಯರಿಂದ ವಿವಾದ ಸೃಷ್ಟಿ ಎಂಬ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಕ್ಕೆ ತಿರುಗೇಟು ನೀಡಿರಯವ ಎಸ್‌ಡಿಪಿಐ "ರಾಜ್ಯದ ನಾನಾ ಕಡೆಯಲ್ಲಿ ಎಸ್‌ಡಿಪಿಐ ಸದಸ್ಯರಿದ್ದಾರೆ. ಎಲ್ಲಿಯೂ ಆಗದ ವಿವಾದ ಅಲ್ಲಿ ಅಷ್ಟೇ ಆಗಿದ್ದು ಏಕೆ" ಎಂದು ಪ್ರಶ್ನಿಸಿದ್ದಾರೆ.  

ಇದನ್ನೂ ಓದಿ: Hijab Controversy: ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಸಂಘಟನೆಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಸೋಮಣ್ಣ

"ಗಲಭೆ ಯಾರು ಮಾಡಿದ್ದು ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗೊತ್ತಿದೆ. ನಮ್ಮ ಪಕ್ಷ ಬೆಳೆಯುವುದನ್ನ ನೋಡಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿ ಸಂಘ ಪರಿವಾರದ ವಿರುದ್ಧ ಯಾರು ಮಾತನಾಡುವರ‌ನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಯಾರು ಪ್ರಚೋದನೆಗೆ ಒಳಗಾಗಬಾರದು, ಮುಸ್ಲಿಮರು  ಶಾಂತಿಪ್ರಿಯರು" ಎಂದು ಸಲೀಂ ಖಾನ್ ಹೇಳಿದ್ದಾರೆ. 

ವಸ್ತ್ರ ಸಂಘರ್ಷಕ್ಕೆ ಸದ್ಯ ಬ್ರೇಕ್‌: ಇನ್ನು ವಿವಾದಿತ ಹಿಜಾಬ್‌-ಕೇಸರಿ ವಸ್ತ್ರ ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸುವವರೆಗೂ ಹಿಜಾಬ್‌-ಕೇಸರಿ ವಸ್ತ್ರ ಸೇರಿದಂತೆ ಯಾವುದೇ ಧಾರ್ಮಿಕ ಉಡುಪು ಧರಿಸದೆ ಶಾಲಾ​-ಕಾಲೇಜಿಗೆ ತೆರಳಬೇಕು. ಈ ವಿಚಾರದಲ್ಲಿ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡುವುದಾಗಿ ಹೈಕೋರ್ಟ್‌ನ ವಿಸ್ತೃತ ಪೀಠ ಗುರುವಾರ ವಿಚಾರಣೆ ವೇಳೆ ತಿಳಿಸಿದೆ. 

ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಫೆ.5ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಸ್ತೃತ ಪೀಠ ಈ ಆದೇಶ ನೀಡಿದೆ.

ಈ ಮಧ್ಯೆ ಹಿಜಾಬ್‌ ಹಾಗೂ ಕೇಸರಿ ಶಾಲು ವಿವಾದದಿಂದ ಬಂದ್‌ ಆಗಿದ್ದ ಪ್ರೌಢಶಾಲೆಗಳ ತರಗತಿಗಳು ಸೋಮವಾರದಿಂದ ಪುನಾರಂಭಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸೂಕ್ಷ್ಮ ಜಿಲ್ಲೆಗಳಲ್ಲಿನ ಪ್ರಮುಖ ಶಾಲೆಗಳಲ್ಲಿ ಪರಿಸ್ಥಿತಿ ಅವಲೋಕನ ಮತ್ತು ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಹೊಣೆಯನ್ನು ಸಂಬಂಧಪಟ್ಟಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ವಹಿಸಿದೆ.

click me!