ವಿಜ್ಞಾನಿ ಕಸ್ತೂರಿ ರಂಗನ್, ಪಂಡಿತ್ ರಾಜೀವ್ ತಾರನಾಥ್ ಅವರಿಗೆ ಪ್ರತಿಷ್ಠಿತ ಬಸವ ಶ್ರೀ ಪ್ರಶಸ್ತಿ

By Suvarna NewsFirst Published Oct 1, 2021, 12:21 PM IST
Highlights
  • ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಹಾಗೂ ಸರೋವ್ ವಾದಕ ಪಂಡಿತ್ ರಾಜೀವ್ ತಾರನಾಥ್ ಅವರಿಗೆ ಪ್ರತಿಷ್ಠಿತ ಬಸವ ಶ್ರೀ ಪ್ರಶಸ್ತಿ 
  •  ಮುರುಘಾಮಠದ  ಶಿವಮೂರ್ತಿ ಮುರುಘಾಶರಣರು ಪ್ರಶಸ್ತಿ ಘೋಷಣೆ

ಚಿತ್ರದುರ್ಗ (ಸೆ.01):  ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ (Kasturi Rangan) ಹಾಗೂ ಸರೋವ್ ವಾದಕ ಪಂಡಿತ್ ರಾಜೀವ್ ತಾರನಾಥ್ (Rajeev Tharanath) ಅವರಿಗೆ ಪ್ರತಿಷ್ಠಿತ ಬಸವ ಶ್ರೀ ಪ್ರಶಸ್ತಿ (Basavashri award) ಒಲಿದಿದೆ.

ಚಿತ್ರದುರ್ಗದಲ್ಲಿ (Chitradurga) ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮುರುಘಾಮಠದ (Murugamutt) ಶಿವಮೂರ್ತಿ ಮುರುಘಾಶರಣರು ಪ್ರಶಸ್ತಿ ಘೋಷಣೆ ಮಾಡಿದರು. ಪ್ರಶಸ್ತಿ ಮೊತ್ತ ಐದು ಲಕ್ಷ ರುಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರಲಿದೆ. 

ಮುರುಘಾ ಶರಣರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಇದೇ ಅಕ್ಟೊಬರ್ 17 ರಂದು ನಡೆಯುವ ಸಮಾರಂಭದಲ್ಲಿ ಬಸವಕೇಂದ್ರ ಮುರುಘಾಮಠದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ :  ಅವರು ಸಾಂಪ್ರದಾಯಿಕ ಹಿಂದೂಸ್ತಾನಿ ಸಂಗೀತದಲ್ಲಿ ಅಗ್ರಗಣ್ಯರು. 1932ರಲ್ಲಿ ಜನಿಸಿ ತಾರಾನಾಥ್  ತಮ್ಮ 9ನೇ ವಯಸ್ಸಿನಿಂದಲೇ ಸಂಗೀತ ಕಚೇರಿ ಆರಂಭ ಮಾಡಿದರು. ಬಳಿಕ ಚಿಕ್ಕ ವಯಸ್ಸಿನಲ್ಲೇ ಆಕಾಶವಾಣಿಗೆ (All India Radio) ತಮ್ಮ ಹಾಡುಗಾರಿಕೆ ಶುರು ಮಾಡಿದರು.

ತಾರಾನಾಥರು ಸಾಹಿತ್ಯದಲ್ಲಿ ಪಿಎಚ್ಡಿ (PHD) ಪದವಿ ಪಡೆದಿದ್ದು ತಮಗಿದ್ದ ಇಂಗ್ಲಿಷ್ ಪ್ರಾಧ್ಯಪಕತನವನ್ನು ತ್ಯಜಿಸಿ ಸಂಗೀತವನ್ನು  ಅಭ್ಯಸಿಸಲು ಆರಂಭಿಸಿದರು.  ಅಲಿ ಅಕ್ಬರ್ ಖಾನ್ ಶಿಷ್ಯರಾದರು. ಬಳಿಕ  ಪಂಡಿತ್ ರವಿಶಂಕರ್, ಶ್ರೀಮತಿ ಅನ್ನಪೂರ್ಣಾದೇವಿ, ಪಂಡಿತ್ ನಿಖಿಲ್ ಬ್ಯಾನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನರ ಮಾರ್ಗದರ್ಶನವನ್ನು ಸಹಾ ರಾಜೀವ್ ತಾರಾನಾಥರು ಪಡೆದರು. 

ಚಿತ್ರಗಳು: ಸರ್ವ ಶರಣರ ಐತಿಹಾಸಿಕ ಸಮ್ಮೇಳನದಲ್ಲಿ ರಾಜಕೀಯ ನಾಯಕರ ಸಮಾಗಮ

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಲಾವಿಭಾಗದ ಮುಖ್ಯಸ್ಥರಾಗಿ 1995ರಿಂದ 2005ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ರಾಜೀವ ತಾರಾನಾಥರು ಇದೀಗ ಮೈಸೂರಿನಲ್ಲಿ ನೆಲೆಸಿದ್ದು ಅನೇಕರಿಗೆ  ಸಂಗೀತವನ್ನು ಧಾರೆ ಎರೆಯುತ್ತಿದ್ದಾರೆ.

ಹಲವೊಂದು ಪ್ರಖ್ಯಾತ ಚಲನಚಿತ್ರಗಳಿಗೂ (Movies) ಸಂಗೀತ ನೀಡಿರುವ ರಾಜೀವ್ ತಾರಾನಾಥರ ನಿರ್ದೇಶನದಲ್ಲಿ ಮೂಡಿಬಂದ ಪ್ರಮುಖ ಚಿತ್ರಗಳೆಂದರೆ ಕನ್ನಡದ ಸಂಸ್ಕಾರ, ಪಲ್ಲವಿ, ಅನುರೂಪ, ಶೃಂಗಾರ ಮಾಸ, ಪೇಪರ್ ಬೋಟ್, ಮಲಯಾಳಂನ ಕಾಂಚನ ಸೀತಾ ಮತ್ತು ಕಟವ್ ಮುಂತಾದವು.

ಪ್ರಶಸ್ತಿ :  ಅಖಿಲ ಭಾರತ ಸಂಗೀತ ನಾಟಕ ಅಕಾಡೆಮಿ ಗೌರವ, ಟಿ.ಚೌಡಯ್ಯ ಪ್ರಶಸ್ತಿ, ಕರ್ನಾಟಕ ರಾಜ್ಯದ ಹಲವಾರು ಪ್ರಶಸ್ತಿ ಗೌರವಗಳು ಹೀಗೆ ಅನೇಕ ಗೌರವಗಳು ರಾಜೀವ್ ತಾರಾನಾಥರನ್ನು ಅರಸಿಬಂದಿವೆ. 2013 ರಲ್ಲಿ ಪ್ರತಿಷ್ಟಿತ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ವತಿಯಿಂದ ನೀಡಲಾಗುವ "ರಾಷ್ಟ್ರೀಯ ಸಮ್ಮಾನ" ಗೌರವ ಅವರಿಗೆ ಲಭಿಸಿದೆ.

ಕಸ್ತೂರಿ ರಂಗನ್ 

ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್   ಅವರು ಕರ್ನಾಟಕದ  ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, ಇವರು 2003 ರವರೆಗೆ 9 ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  (ISRO)ದ ನೇತೃತ್ವ ವಹಿಸಿದ್ದರು. ಇವರು  ರಾಜ್ಯ ಸಭೆ ದಸ್ಯರಾಗಿಯು ಕಾರ್ಯ ನಿರ್ವಹಿಸಿದ್ದರು. ಇವರು ಇದೀಗ ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿದ್ದಾರೆ.

 ಪ್ರಶಸ್ತಿ : ಪದ್ಮಶ್ರೀ (1982), ಪದ್ಮಭೂಷಣ (1992) ಮತ್ತು ಪದ್ಮ ವಿಭೂಷಣ (2000).

ಕಸ್ತೂರಿ ರಂಗನ್ ವರದಿ : ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿತ್ತು. ಈ ಸಮಿತಿಯು 2011 ಆಗಸ್ಟ್‌ 31ರಂದು ತನ್ನ ವರದಿ ನೀಡಿತು. ಈ ವರದಿಯು ಮಾದವ ಗಾಡ್ಗೀಳ್‌ ವರದಿ ಎಂದೇ ಜನಪ್ರಿಯವಾಗಿದೆ.   ಪರಿಸರ ತಜ್ಞ ಮಾದವ ಗಾಡ್ಗೀಳ್‌ ಅವರ ನೇತೃತ್ವದ ಸಮಿತಿ ನೀಡಿದ ವರದಿ ಇದಾಗಿತ್ತು. ಈ ವರದಿಯ ಪ್ರಕಾರ ಪಶ್ಚಿಮ ಘಟ್ಟದ ಶೇ. 94 ರಿಂದ 97ರಷ್ಟು ಭೂ ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರ್ತಿಸಲಾಗಿತ್ತು.   ಈ ವರದಿ ಭಾರೀ ಆಕ್ರೋಶಕ್ಕೆ ಗುರಿಯಾಯ್ತು.

 ಬಳಿಕ ಕೇಂದ್ರ ಸರ್ಕಾರವು ಇಸ್ರೋ ಸಂಸ್ಥೆಯ ಮಾಜಿ ಮುಖ್ಯಸ್ಥ, ವಿಜ್ಞಾನಿ ಕಸ್ತೂರಿ ರಂಗನ್ ಅವರ ಸಾರಥ್ಯದಲ್ಲಿ ಮತ್ತೊಂದು ಸಮಿತಿ ರಚಿಸಿತು. ಈ ಸಮಿತಿಯು ಗಾಡ್ಗೀಳ್ ವರದಿಯಲ್ಲಿ ಇದ್ದಿರಬಹುದಾದ ಲೋಪ-ದೋಷಗಳನ್ನು, ಕುಂದುಕೊರತೆಗಳನ್ನು ನೀಗಿಸಿ ಒಂದು ವರದಿ ಸಿದ್ದಪಡಿಸಿತು. 2013 ಏಪ್ರಿಲ್ 15ರಂದು ಸಲ್ಲಿಕೆಯಾದ ಈ ವರದಿಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿತು. ಆದ್ರೆ ಇದೀಗ ಈ ವರದಿಯೂ ವಿವಾದಾಸ್ಪದವಾಗಿದೆ.  

click me!