* ಡ್ರಗ್ಸ್, ಬೆಟ್ಟಿಂಗ್, ನಕಲಿ ಆಸ್ತಿಪತ್ರ ಸೃಷ್ಟಿಯಂತಹ ಮನೆಹಾಳು ದಂಧೆ ಕಡಿವಾಣ ಹಾಕಿ
* ವಿದೇಶಿಯರ ಉಪಟಳ ನಿಯಂತ್ರಿಸಿ
* ಅಕ್ರಮ ಚಟುವಟಿಕೆಗಳು ಆಯಾ ಠಾಣಾ ವ್ಯಾಪ್ತಿಯ ಅಧಿಕಾರಿಗಳೇ ಹೊಣೆ
ಬೆಂಗಳೂರು(ಅ.01): ಭೂ ಮಾಫಿಯಾ, ಬಡ್ಡಿ ವ್ಯವಹಾರ ಹೀಗೆ ಮನೆ ಹಾಳು ದಂಧೆ ನಡೆಸುವವರ ಜತೆ ಪೊಲೀಸರ ಸ್ನೇಹವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ರಾಜ್ಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ(Araga Jnanendra) ಎಚ್ಚರಿಕೆ ನೀಡಿದ್ದಾರೆ.
ನಗರ ಪೊಲೀಸ್(Police) ಆಯುಕ್ತರ ಕಚೇರಿಯಲ್ಲಿ ಗುರುವಾರ ನಡೆದ ಎಸಿಪಿ ಮೇಲ್ಮಟ್ಟದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಕ್ರಮ ಚಟುವಟಿಕೆಗಳು ನಡೆದರೆ ಆಯಾ ಠಾಣಾ ವ್ಯಾಪ್ತಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.
ನಗರದಲ್ಲಿ ಡ್ರಗ್ಸ್(Drugs), ಇಸ್ಪೀಟ್ ಕ್ಲಬ್, ಕ್ಯಾಸಿನೋ, ಸ್ಕೀಲ್ ಗೇಮ್, ಬೆಟ್ಟಿಂಗ್(Betting) ಹಾಗೂ ಬಡ್ಡಿ ವ್ಯವಹಾರ ಮಾತ್ರವಲ್ಲದೆ ಅಮಾಯಕ ಜನರ ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಬಳಿಕ ರೌಡಿಗಳ ಮೂಲಕ ಬೆದರಿಸಿ ಭೂಮಿ ಕಬಳಿಸುವ ಮನೆಹಾಳು ದಂಧೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಈ ರೀತಿ ಕೃತ್ಯಗಳಿಗೆ ಸಂಪೂರ್ಣವಾಗಿ ವಿರಾಮ ಬೀಳಬೇಕು. ಇಂಥ ದಂಧೆಕೋರರ ಜತೆ ಪೊಲೀಸರು ಶಾಮೀಲಾಗಿದ್ದರೆ ಸಹಿಸುವುದಿಲ್ಲವೆಂದು ಸಭೆಯಲ್ಲಿ ತಿಳಿಸಿರುವುದಾಗಿ ಸಚಿವರು ಹೇಳಿದರು.
ಮಾನವೀಯತೆ ಮರೆತ್ರಾ ಬೆಳಗಾವಿ ಪೊಲೀಸರು?: ತಮ್ಮ ವಾಹನದಿಂದ ಅಪಘಾತ ಆದ್ರೂ ಡೋಂಟ್ ಕೇರ್
ವಿದೇಶಿಯರ ಉಪಟಳ ನಿಯಂತ್ರಿಸಿ:
ನಗರದಲ್ಲಿ ವಿದೇಶಿ ಪ್ರಜೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಪೊಲೀಸರು ನಿಗಾವಹಿಸಬೇಕು. ಹಾಗೆಯೇ ವೀಸಾ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಗಡೀಪಾರಿಗೆ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಸಭೆಗೂ ಮುನ್ನ ಆಯುಕ್ತರ ಕಚೇರಿಯ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ 100) ಹಾಗೂ ಸಾಮಾಜಿಕ ತಾಲಜಾಲ ನಿರ್ವಹಣಾ ವಿಭಾಗಗಳಿಗೆ ಭೇಟಿ ನೀಡಿ ಗೃಹ ಸಚಿವರು ಮಾಹಿತಿ ಪಡೆದರು. ಈ ಸಭೆಯಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.