*ಕೇಸ್ ಏರಿಕೆಯಾದರೆ 1-2 ವಾರದಲ್ಲಿ ತೀರ್ಮಾನಕ್ಕೆ ಚಿಂತನೆ
*ತಾಲೂಕು ಮಟ್ಟದಲ್ಲಿ ಮಾತ್ರ ಶಾಲೆ ಸ್ಥಗಿತಕ್ಕೆ ಸರ್ಕಾರ ಒಲವು
*ಲಾಕ್‌ಡೌನ್ ಘೋಷಣೆಯಾದರಷ್ಟೆರಾಜ್ಯಾದ್ಯಂತ ಬಂದ್
ಬೆಂಗಳೂರು (ಜ.4): ರಾಜ್ಯದಲ್ಲಿ ಕೆಲ ವಾರಗಳಿಂದ ಕೋವಿಡ್ 19 ಮತ್ತು ಒಮಿಕ್ರೋನ್ (Omicron) ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು ಇದೇ ವೇಗದಲ್ಲಿ ಮುಂದುವರೆದರೆ ಒಂದೆರಡು ವಾರದಲ್ಲಿ ಶಾಲೆಗಳ (School) ಬಂದ್ ಮಾಡುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಉನ್ನತ ಮೂಲಗಳ ಪ್ರಕಾರ, ಶಾಲೆಗಳ ಬಂದ್ ನಿರ್ಧಾರ ಕೈಗೊಂಡರೂ ಒಮ್ಮೆಲೆ ರಾಜ್ಯಾದ್ಯಂತ ಶಾಲೆಗಳನ್ನು ಬಂದ್ ಮಾಡುವ ಸಾಧ್ಯತೆ ಬಹಳ ಕಡಿಮೆ. ಯಾವ್ಯಾವ ತಾಲೂಕುಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿವೆ ಹಾಗೂ ಹೆಚ್ಚಾಗುತ್ತಿವೆಯೋ ಅಂತಹ ತಾಲೂಕು ವ್ಯಾಪ್ತಿಯ ಶಾಲೆಗಳನ್ನು ಮೊದಲು ಬಂದ್ ಮಾಡಲಾಗುತ್ತದೆ.
ಮುಂದಿನ ಹಂತದಲ್ಲಿ ಸೋಂಕು ವ್ಯಾಪಿಸುತ್ತಾ ಹೋಗುವ ಇತರೆ ತಾಲೂಕುಗಳಲ್ಲಿ ಶಾಲೆ ಬಂದ್ ಮಾಡುತ್ತಾ ಹೋಗುವ ಚಿಂತನೆ ಸರ್ಕಾರದಲ್ಲಿದೆ. ಯಾವುದೇ ಪ್ರಕರಣಗಳು ವರದಿಯಾಗದ ತಾಲೂಕುಗಳಲ್ಲಿ ಶಾಲೆಗಳನ್ನು ಯಥಾವತ್ತಾಗಿ ನಡೆಸಲು ಕೂಡ ಲೆಕ್ಕಾಚಾರ ನಡೆಸಿದೆ. ಈ ಮಧ್ಯೆ, ಸರ್ಕಾರವೇನಾದರೂ ಏಕಾಏಕಿ ಲಾಕ್‌ಡೌನ್ (Lockdown) ನಿರ್ಧಾರಕ್ಕೆ ಬಂದರೆ ಇಡೀ ರಾಜ್ಯದಲ್ಲಿ ಶಾಲೆಗಳು ತಂತಾನೆ ಬಂದ್ ಆಗಲಿವೆ.
ಏಕಾಏಕಿ ಎಲ್ಲ ಶಾಲೆಗಳನ್ನು ಬಂದ್ ಮಾಡಬೇಡಿ: ಸಚಿವ
ಶಾಲೆ ಬಂದ್ ಬಗ್ಗೆ ನಿರ್ಧಾರ ಕೈಗೊಳ್ಳುವುದಾದರೆ ಏಕಾಏಕಿ ಎಲ್ಲ ಶಾಲೆಗಳನ್ನು ಬಂದ್ ಮಾಡಬೇಡಿ. ತಾಲೂಕುಗಳನ್ನು ಘಟಕಗಳಾಗಿ ಪರಿಗಣಿಸಿ ಸೋಂಕು ಪ್ರಕರಣಗಳು ಹೆಚ್ಚಿರುವ ಅಥವಾ ಪಾಸಿಟಿವಿಟಿ ದರ ನಿಗದಿತ ಮಿತಿಗಿಂತ ಹೆಚ್ಚಿರುವ ತಾಲೂಕುಗಳಲ್ಲಿ ಶಾಲೆ ಬಂದ್‌ಗೆ ಕ್ರಮ ಕೈಗೊಂಡರೆ ಒಳ್ಳೆಯದು. ಇದರಿಂದ ಕೋವಿಡ್ ಪ್ರಕರಣಗಳಿಲ್ಲದ ಕಡೆಯಲ್ಲೂ ಶಾಲೆ ಬಂದ್ ಆಗಿ ಮಕ್ಕಳು ಕಲಿಕೆಯಿಂದ ವಂಚಿತರಾಗುವುದು ತಪ್ಪುತ್ತದೆ.
ಇದನ್ನೂ ಓದಿ: Corona Update ಕರ್ನಾಟಕದಲ್ಲಿ ಕೊರೋನಾ ಭಾರಿ ಹೆಚ್ಚಳ, ಹೀಗೆ ಮುಂದುವರಿದ್ರೆ ಲಾಕ್ ಫಿಕ್ಸ್!
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಅವಧಿಯಲ್ಲಿ ಸೋಂಕು ಇಲ್ಲದ ತಾಲೂಕುಗಳಲ್ಲೂ ಶಾಲೆ ಬಂದ್ ಮಾಡಿದ್ದರಿಂದ ಆ ಮಕ್ಕಳ ಕಲಿಕೆಗೂ ಸಮಸ್ಯೆಯಾಯಿತು. ಈ ರೀತಿಯ ತೀರ್ಮಾನ ಬೇಡ ಎಂದು ಖುದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಅವರೇ ಸರ್ಕಾರ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿಗೆ ಮನವಿ ಮಾಡಿದ್ದಾರೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿವೆ.
ತಜ್ಞರೂ ಅಭಿಪ್ರಾಯ ನೀಡಿದ್ದಾರೆ:
ಮಾಹಿತಿ ಪ್ರಕಾರ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರು ಕೂಡ ಈಗಾಗಲೇ ಸರ್ಕಾರಕ್ಕೆ ಶಾಲೆ ಬಂದ್ ವಿಚಾರದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದಾದರೆ ಮುಂದಿನ ಒಂದೆರಡು ವಾರದಲ್ಲಿ ಕೈಗೊಳ್ಳಿ. ಈ ಅವಧಿಯೊಳಗೆ ಸಾಧ್ಯವಾದಷ್ಟೂ15 ವರ್ಷದಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ವ್ಯಾಕ್ಸಿನ್ ನೀಡಲು ಕ್ರಮ ವಹಿಸಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Coronavirus Update: ಕೊರೋನಾ ಹೆಚ್ಚಳ, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ
ಸೋಂಕು ಪ್ರಕರಣಗಳಿಲ್ಲದ ಜಿಲ್ಲೆ, ತಾಲ್ಲೂಕುಗಳಲ್ಲಿ ಶಾಲೆ ಬಂದ್ ಮಾಡುವ ಅಗತ್ಯವಿಲ್ಲ. ಪರಿಸ್ಥಿತಿ ನೋಡಿಕೊಂಡು ಅಲ್ಲಿ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಬಹುದು ಎಂದು ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಮಂಗಳವಾರ ನಡೆಯುವ ಸಭೆಯಲ್ಲಿ ಶಾಲೆ ಬಂದ್ ವಿಚಾರ ಕೂಡ ಚರ್ಚೆಗೆ ಬರುವ ಸಾಧ್ಯತೆ ಇದೆ.
ಶಾಲೆ ಬಂದ್ ವಿಚಾರವಾಗಿ ತಜ್ಞರಿಂದ ದೂರವಾಣಿ ಮೂಲಕ ಅಭಿಪ್ರಾಯವನ್ನಷ್ಟೇ ಪಡೆದಿದ್ದೇನೆ. ಈ ವಿಚಾರದಲ್ಲಿ ಇಲಾಖೆಯಿಂದ ಯಾವುದೇ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಮಂಗಳವಾರ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ತಜ್ಞರು ತಮ್ಮ ಸಲಹೆ, ಅಭಿಪ್ರಾಯವನ್ನು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬಹುದು. ಮಕ್ಕಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.