ಅಪ್ಪು ನಿಧನದ ಬಳಿಕ ಮೊದಲ ಹೇಳಿಕೆ ಕೊಟ್ಟ ಪತ್ನಿ: ಪತ್ರದ ಮೂಲಕ ಧನ್ಯವಾದ ತಿಳಿಸಿದ ಅಶ್ವಿನಿ

By Suvarna NewsFirst Published Nov 7, 2021, 11:24 PM IST
Highlights

* ಅಪ್ಪು ನಿಧನದ ಬಳಿಕ ಮೊದಲ ಹೇಳಿಕೆ ಕೊಟ್ಟ ಪತ್ನಿ ಅಶ್ವಿನಿ
* ಪತ್ರದ ಮೂಲಕ ಹೇಳಿಕೆ ನೀಡಿದ ಪುನೀತ್ ರಾಜ್‌ಕುಮಾರ್ ಪತ್ನಿ
* ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ದೊಡ್ಡತನ ಮೆರೆದ ದೊಡ್ಮನೆ ಸೊಸೆ

ಬೆಂಗಳೂರು, (ನ.07):  ಪವರ್ ಸ್ಟಾರ್  ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಹೀಗೆ ಅಕಾಲಿಕ ಮರಣಕ್ಕೆ ಒಳಗಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ನಿಧನದ ನೋವನ್ನು ಮರೆಯಲಾಗುತ್ತಿಲ್ಲ. ಅಪ್ಪು ಇಹಲೋಕ ತ್ಯಜಿಸಿ 10 ದಿನಗಳು ಕಳೆದಿದೆ.

 ಅಪ್ಪು ಅಭಿಮಾನಿಗಳು ಹಾಗೂ  ದೊಡ್ಮನೆ  ಕುಟುಂಬ ನೋವಿನಲ್ಲಿದೆ. ನಾಳೆ (ನ.8) ಪುನೀತ್ 11ನೇ ದಿನದ ತಿಥಿ ಕಾರ್ಯ ನಡೆಯಲಿದೆ. ಇದಕ್ಕೂ ಮುನ್ನ ಪುನೀತ್ ಪತ್ನಿ ಅಶ್ವಿನಿ ಇಂದು(ನ.07) ಪತ್ರದ ಮೂಲಕ ಹೇಳಿಕೆ ನೀಡಿದ್ದಾರೆ. ಮೊದಲ ಹೇಳಿಕೆಯಲ್ಲೇ ಪುನೀತ್ ಪತ್ನಿ ದೊಡ್ಡತನ ಮೆರೆದಿದ್ದಾರೆ.

Puneeth Rajkumar; ಬೆಂಗಳೂರಿನಿಂದ ಬೆಳಗಾವಿವರೆಗೆ  ಪುನೀತ್‌ಗಾಗಿ ಚಿತ್ರಮಂದಿರಗಳ ಕಂಬನಿ

ಹೌದು...ಅಪ್ಪು ನಿಧನ ಬಳಿಕ ಮೊದಲ ಬಾರಿಗೆ ಅಶ್ವಿನಿ ಅವರು ಪತ್ರದ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಧನ್ಯವಾದ ತಿಳಿಸಿ ಪತ್ರ ಕಳುಹಿಸಿದ್ದು, ಪುನೀತ್ ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರದ ವೇಳೆ ನೀಡಿದ ಸಹಕಾರಕ್ಕೆ ಧನ್ಯವಾದ ಹೇಳಿದ್ದಾರೆ.

ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಅವರನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡಬೇಕಿತ್ತು. ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿ, ಮೆರವಣಿಗೆ ಹಾಗೂ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸಾಕಷ್ಟು ಪೊಲೀಸ್ ನಿಯೋಜಿಸಿ, ಕಾನೂನು ಸುವ್ಯವಸ್ಥೆಗೆ ಎಲ್ಲಿಯೂ ಧಕ್ಕೆ ಆಗದಂತೆ ನೋಡಿಕೊಂಡಿದ್ದೀರಿ. ನಮ್ಮ ಇಡೀ ಕುಟುಂಬ ಹಾಗೂ ಎಲ್ಲ ಅಭಿಮಾನಿಗಳ ಪರವಾಗಿ ನಿಮಗೆ ಮತ್ತು ಎಲ್ಲ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪತ್ರ ಮುಖೇನ ಅಶ್ವಿನಿ ಪುನೀತ್ ರಾಜ್​​ಕುಮಾರ್ ಧನ್ಯವಾದ ಹೇಳಿದ್ದಾರೆ.

ಪುನೀತ್ ರಾಜ್‌ಕುಮಾರ್ 11ನೇ ದಿನದ ಕಾರ್ಯ
ಇನ್ನು ನ.8ರಂದು ನಡೆಯಲಿರುವ ಪುನೀತ್ ರಾಜ್ ಕುಮಾರ್ 11 ನೇ ದಿನದ ಕಾರ್ಯಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ನಾಳೆ ಮಧ್ಯಾಹ್ನ 11 ಗಂಟೆಗೆ ಸದಾಶಿವನಗರದ ನಿವಾಸದಿಂದ ಕಂಠೀರವ ಸ್ಟುಡಿಯೋಗೆ ಅಪ್ಪು ಕುಟುಂಬಸ್ಥರು ತೆರಳಲಿದ್ದಾರೆ. ಅಪ್ಪುಗೆ ಇಷ್ಟವಾದ ಊಟವನ್ನ ಸಾಮಾಧಿ ಮುಂದೆ ಇಟ್ಟು ಪೂಜೆ ಮಾಡಲಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತ ಬಳಗಕ್ಕೆ ಮಾತ್ರ ಕಂಠೀರವದಲ್ಲಿ ಪೂಜೆಗೆ ಅವಕಾಶ ನೀಡಲಾಗಿದೆ. ಇನ್ನು ಮಂಗಳವಾರ 12 ಗಂಟೆಗೆ  ಅನ್ನ ಸಂತರ್ಪಣೆ ಇರಲಿದೆ.

ರಾಜ್ಯದಲ್ಲಿ ಪುನೀತ್ ರಾಜಕುಮಾರ್ ಹಾಗೂ ಸಂಚಾರಿ ವಿಜಯ್ ನೇತ್ರದಾನ ಮಾಡಿದ ನಂತರ ಜನರಲ್ಲಿ ಈ ಕುರಿತು ಜಾಗೃತಿ ಹೆಚ್ಚಾಗಿದೆ. ಪರಿಣಾಮವಾಗಿ, ನೇತ್ರದಾನಕ್ಕೆ ಮುಂದಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. 

ಚಿನ್ನದಂತಹ ವ್ಯಕ್ತಿತ್ವ ಹೊಂದಿದ್ದ ಅಪ್ಪು ಅವರ ನಿಧನದ ಸತ್ಯವನ್ನು ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳು ದೂರದ ಊರುಗಳಿಂದ ಬಂದು ಸಮಾಧಿ ದರ್ಶನ ಮಾಡುತ್ತಿದ್ದಾರೆ.
 

click me!