ಹಿಂದೆ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ, ಈಗ ಘಟಿಕೋತ್ಸವ ಪ್ರಮಾಣ ಪತ್ರ ಹಗರಣ ಹೀಗೆ ಅಕ್ರಮಗಳಿಂದಲೇ ಮುಜುಗರಕ್ಕೀಡಾಗುತ್ತಿರುವ ಬಳ್ಳಾರಿಯ ಶ್ರೀಕೃಷ್ಣ ವಿಜಯನಗರ ವಿಶ್ವವಿದ್ಯಾಲಯ ಶಿಕ್ಷಣದ ಗುಣಮಟ್ಟದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುವಲ್ಲಿ ದೂರ ಉಳಿದ ಆರೋಪ ಎದುರಿಸುತ್ತಲೇ ಇದೆ.
ಮಂಜುನಾಥ ಕೆ.ಎಂ.
ಬಳ್ಳಾರಿ (ಮಾ.28): ಹಿಂದೆ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ, ಈಗ ಘಟಿಕೋತ್ಸವ ಪ್ರಮಾಣ ಪತ್ರ ಹಗರಣ ಹೀಗೆ ಅಕ್ರಮಗಳಿಂದಲೇ ಮುಜುಗರಕ್ಕೀಡಾಗುತ್ತಿರುವ ಬಳ್ಳಾರಿಯ ಶ್ರೀಕೃಷ್ಣ ವಿಜಯನಗರ ವಿಶ್ವವಿದ್ಯಾಲಯ ಶಿಕ್ಷಣದ ಗುಣಮಟ್ಟದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುವಲ್ಲಿ ದೂರ ಉಳಿದ ಆರೋಪ ಎದುರಿಸುತ್ತಲೇ ಇದೆ. ಹಿಂದುಳಿದ ಜಿಲ್ಲೆ ಬಳ್ಳಾರಿ ಜನರ ಉನ್ನತ ಶಿಕ್ಷಣದ ಕನಸು ನನಸಾಗಿಸುವ ಆಶಯ ಹೊತ್ತು ಆರಂಭಗೊಂಡ ವಿವಿಯ ಹಗರಣಗಳಿಂದಲೇ ಸುದ್ದಿಯಾಗುತ್ತಿದೆ. ವಿವಿಯಲ್ಲಿ ಖಾಲಿಯಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗಾಗಿ ಕಳೆದ 2019ರಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಪರೀಕ್ಷೆಗಳನ್ನೂ ನಡೆಸಲಾಗಿತ್ತು. ಆದರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮದ ಆರೋಪಗಳು ಕೇಳಿ ಬಂದ ಹಿನ್ನೆಲೆ ಪ್ರಕ್ರಿಯೆ ಸ್ಥಗಿತಗೊಂಡಿತು.
ಈವರೆಗೂ ಹುದ್ದೆಗಳ ನೇಮಕಾತಿ ಪ್ರಕ್ರಿಯಿಯೆ ಚಾಲನೆ ಸಿಕ್ಕಿಲ್ಲ. ಪರಿಣಾಮ ಕನ್ನಡ ವಿಭಾಗದಲ್ಲೂ ಕಾಯಂ ಬೋಧಕರಿಲ್ಲದೆ ಅತಿಥಿ ಬೋಧಕರನ್ನೇ ಆಶ್ರಯಿಸುವಂತಾಗಿದೆ. ಇನ್ನು, ಇತ್ತೀಚೆಗೆ ಬೆಳಕಿಗೆ ಬಂದ ನಕಲಿ ಘಟಿಕೋತ್ಸವ ಪ್ರಮಾಣಪತ್ರಗಳ ವಿತರಣೆ ಪ್ರಕರಣ ತೀವ್ರ ಮುಜುಗರಕ್ಕೀಡು ಮಾಡಿದೆ. ಸಾವಿರಾರು ನಕಲಿ ಪ್ರಮಾಣಪತ್ರ ನೀಡಲಾಗಿದ್ದು, ಒಂದೂವರೆ ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇನ್ನೂ ಪ್ರಮಾಣಪತ್ರಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ. ಮಾ.28ರಂದು ಜರುಗುವ ಸಿಂಡಿಕೇಟ್ ಸಭೆಯಲ್ಲಿ ಅವ್ಯವಹಾರ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವ ನಿರ್ಣಯಿಸುವ ಸಾಧ್ಯತೆಯಿದೆ.
ರಾಜ್ಯದಲ್ಲೇ ಅತಿ ಹೆಚ್ಚು 361 ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಚೆನ್ನಮ್ಮ ವಿವಿಯಲ್ಲಿ ತೀವ್ರ ಸಿಬ್ಬಂದಿ ಕೊರತೆ
ಅನುದಾನಕ್ಕೆ ಕೊರತೆ ಇಲ್ಲ: ಹಾಗೆ ನೋಡಿದರೆ ವಿವಿಯ ಭೌತಿಕ ಬೆಳವಣಿಗೆಗೆ ಬೇಕಾದ ಅನುದಾನಕ್ಕೇನೂ ಕೊರತೆಯಿಲ್ಲ. ಅನುದಾನ ಕೊಡಿ ಎಂದು ಸರ್ಕಾರದ ಕಡೆ ಕೈಯೊಡ್ಡುವ ಸ್ಥಿತಿ ಸದ್ಯಕ್ಕಂತೂ ಇಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದಿಂದ (ಕೆಎಂಇಆರ್‌ಸಿ) ಭೌತಿಕ ಬೆಳವಣಿಗೆಗೆ ಬೇಕಾದ ಪೂರಕ ಅನುದಾನ ಹರಿದು ಬರುತ್ತಿದೆ. ವಿಶ್ವವಿದ್ಯಾಲಯದ ಆಂತರಿಕ ಆದಾಯ ಹೆಚ್ಚಳದಲ್ಲಿ ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಈ ಹಣದಲ್ಲೇ ವಿವಿಯ ಭಾಗಶಃ ಖರ್ಚುವೆಚ್ಚಗಳು ತೂಗಿಸಲಾಗುತ್ತಿದೆ. ಆದರೆ, ಭೌತಿಕ ಅಭಿವೃದ್ಧಿಗೆ ಪೂರಕವಾದ ಸಮಸ್ಯೆಗಳು ವಿಶ್ವವಿದ್ಯಾಲಯವನ್ನು ಕಾಡುತ್ತಿದೆ. ಪ್ರಮುಖವಾಗಿ ಬೋಧಕ ಸಿಬ್ಬಂದಿ ಕೊರತೆ ಇಡೀ ವಿವಿಯ ಶೈಕ್ಷಣಿಕ ಪ್ರಗತಿಗೆ ಪೆಟ್ಟು ನೀಡಿದ್ದು ಗುಣಮಟ್ಟದ ಶಿಕ್ಷಣ ಸಿಗುವ ಭರವಸೆ ಹೊತ್ತು ಬರುವ ವಿದ್ಯಾರ್ಥಿಗಳಿಗೆ ನಿರಾಸೆ ಮೂಡಿಸಿದೆ. ವಿವಿಯ ಉನ್ನತ ಅಧಿಕಾರಿಗಳೇ ಹೇಳುವ ಪ್ರಕಾರ ಬೆಂಗಳೂರು ವಿವಿಗೆ ಹೋಲಿಸಿದರೆ, ಬಳ್ಳಾರಿ ವಿವಿ ಗುಣಮಟ್ಟದ ಶಿಕ್ಷಣದ ಮಾನದಂಡದಲ್ಲಿ ಶೇ.10ರಷ್ಟು ಪ್ರಗತಿಯನ್ನೂ ಸಾಧಿಸಿಲ್ಲ.
49 ಸಾವಿರ ವಿದ್ಯಾರ್ಥಿಗಳು: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ 10 ಸ್ನಾತಕೋತ್ತರ, 14 ಬಿಎಡ್ ಹಾಗೂ 50 ಪದವಿ ಕಾಲೇಜುಗಳು ಸೇರಿ ಒಟ್ಟು 74 ಕಾಲೇಜುಗಳು ಶ್ರೀಕೃಷ್ಣದೇವರಾಯ ವಿವಿಗೆ ಸಂಯೋಜನೆಗೊಂಡಿವೆ. ಈ ಪೈಕಿ ಸ್ನಾತಕೋತ್ತರದಲ್ಲಿ 3067, ಪದವಿ ಕಾಲೇಜುಗಳಲ್ಲಿ 42,859 ಹಾಗೂ ಬಿ.ಇಡಿ ಕಾಲೇಜುಗಳಲ್ಲಿ 3296 ಸೇರಿ ಒಟ್ಟು 49,222 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರತ್ಯೇಕ ವಿವಿ ಆರಂಭವಾದ ಬಳಿಕ ಈ ವಿವಿಯ ಒಂದಷ್ಟು ಕಾಲೇಜುಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿದೆ.
ವಿವಿಗೆ ಬೋಧಕ, ಬೋಧಕೇತರರ ಕೊರಗು: ಬಳ್ಳಾರಿ ವಿವಿಯಲ್ಲಿ ಬೋಧನೆಗಾಗಿ ಒಟ್ಟು 139 ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ ಸದ್ಯ ವಿವಿಧ ವಿಭಾಗಗಳಲ್ಲಿ 85 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 54 ಹುದ್ದೆಗಳು ಭರ್ತಿಯಾಗಬೇಕಿದೆ. ಬೋಧಕೇತರ ಸಿಬ್ಬಂದಿ ಹುದ್ದೆಗಳು 100 ಮಂಜೂರಾಗಿದ್ದು, ಈ ಪೈಕಿ 33 ಸಿಬ್ಬಂದಿ ಮಾತ್ರ ಕಾಯಂ ನೌಕರರಿದ್ದಾರೆ. ಇನ್ನು 67 ಹುದ್ದೆ ಖಾಲಿಯಿವೆ. ಇದರಿಂದ ವಿವಿಯ ಶೈಕ್ಷಣಿಕ ಪ್ರಗತಿ, ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರಿದರೆ, ಬೋಧಕೇತರ ಹುದ್ದೆಗಳು ಭರ್ತಿಯಾಗದ ಹಿನ್ನೆಲೆಯಲ್ಲಿ ವಿವಿಯ ಆಡಳಿತದ ಮೇಲೂ ಪರಿಣಾಮ ಬೀರಿದೆ. ಈವರೆಗಿನ ಸರ್ಕಾರಗಳು ವಿವಿ ಆರಂಭಕ್ಕೆ ತೋರಿದ ಇಚ್ಛಾಶಕ್ತಿ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಗೆ ತೋರದಿರುವುದು ವಿವಿಯ ಶೈಕ್ಷಣಿಕ ಪ್ರಗತಿಯ ಮೇಲೆ ಪೆಟ್ಟು ಬಿದ್ದಂತಾಗಿದೆ. ಅತಿಥಿ ಉಪನ್ಯಾಸಕರು, ಗುತ್ತಿಗೆ ಆಧಾರಿತ ಸಿಬ್ಬಂದಿ ಮೇಲೆ ವಿವಿ ಸಂಪೂರ್ಣ ಅವಲಂಬಿತಗೊಂಡಿದೆ.
ಹಾಸ್ಟೆಲ್‌ಗಳಲ್ಲಿ ಸಮಸ್ಯೆ: ವಿವಿಯಲ್ಲಿ ವಸತಿ ನಿಲಯಗಳಿವೆಯಾದರೂ ಗುಣಮಟ್ಟದ ಊಟ, ಉಪಹಾರ ಸಮಸ್ಯೆಗಳಿವೆ. ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಪ್ರಕರಣಗಳು ಸಾಕಷ್ಟು ಬಾರಿ ನಡೆದಿವೆ. ಹಾಸ್ಟೆಲ್ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾಕಷ್ಟು ಕ್ರಮ ವಹಿಸಿದ್ದೇವೆ ಎಂದು ವಿವಿಯ ಅಧಿಕಾರಿಗಳು ಹೇಳಿಕೊಂಡರೂ ಇಲ್ಲಿನ ಸಮಸ್ಯೆಗಳಿಗೆ ಇತಿಶ್ರೀ ಹಾಡಲಾಗಿಲ್ಲ. ವಿದ್ಯಾರ್ಥಿಗಳು ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ಆಕ್ರೋಶ ಹೊರ ಹಾಕುತ್ತಲೇ ಇರುತ್ತಾರೆ.
ವಿವಿ ಪ್ರಸಾರಾಂಗಕ್ಕೆ ಕಟ್ಟಡವಿಲ್ಲ: ಯಾವುದೇ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗ ವಿವಿಯ ಹೃದಯವಿದ್ದಂತೆ ಎನ್ನಲಾಗುತ್ತದೆ. ಆದರೆ, ಬಳ್ಳಾರಿ ವಿವಿಯ ಪ್ರಸಾರಂಗಕ್ಕೆ ಆರಂಭದಿಂದಲೂ ಆದ್ಯತೆ ನೀಡಲಾಗಿಲ್ಲ. ಹೀಗಾಗಿ ಪ್ರಸಾರಾಂಗ ಕ್ರಿಯಾಶೀಲವಾಗಿಲ್ಲ. ಈ ಹಿಂದಿನ ಕುಲಪತಿ ಸಿದ್ದು ಅಲಗೂರು ಅವರ ಅವಧಿಯಲ್ಲಿ ಪ್ರಸಾರಾಂಗವನ್ನು ಬಲಗೊಳಿಸಲು ಆಸ್ಥೆ ತೋರಿಸಲಾಯಿತಾದರೂ ಒಂದಷ್ಟು ಪುಸ್ತಕ ಪ್ರಕಟಣೆಗೆ ಸೀಮಿತಗೊಂಡಿತು. ಆತಂಕ ಪ್ರಸಾರಾಂಗದಿಂದ ರೂಪಿಸಲಾದ ಪದವಿ ವಿದ್ಯಾರ್ಥಿಗಳ ಪಠ್ಯಗಳಲ್ಲಿ ನೂರಾರು ದೋಷಗಳು ಇರುವುದು ಪತ್ತೆಯಾಗಿತ್ತು. ಈ ಕುರಿತು ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು. ಪ್ರಸಾರಾಂಗಕ್ಕೆ ಸ್ವಂತ ಕಟ್ಟಡವಿಲ್ಲ. ವಿವಿಯ ಒಂದು ಕೋಣೆಯಲ್ಲಿ ಪುಸ್ತಕಗಳನ್ನು ಇಟ್ಟುಕೊಂಡು ಪ್ರಸಾರಾಂಗ ನಡೆಸಲಾಗುತ್ತಿದೆ.
ಆಂತರಿಕ ಆದಾಯವೇ ವಿವಿಯ ಬಲ: ಬಳ್ಳಾರಿ ವಿವಿಗೆ ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ಕಾಲೇಜುಗಳ ಸಂಯೋಜನಾ ಶುಲ್ಕ, ಪರೀಕ್ಷಾ ಶುಲ್ಕ, ಇತರೆ ಶುಲ್ಕಗಳು ಸೇರಿ ವಾರ್ಷಿಕ ₹36 ಕೋಟಿ ಮೀರಿ ಆದಾಯ ಬರುತ್ತಿದೆ. ಕಾಯಂ ಉಪನ್ಯಾಸಕರಿಗೆ ಸರ್ಕಾರ ಸಂಬಳ ನೀಡುತ್ತಿರುವುದು ಬಿಟ್ಟರೆ, ಉಳಿದ ಎಲ್ಲ ಖರ್ಚು ವೆಚ್ಚ ವಿವಿಯ ಆಂತರಿಕ ಆದಾಯದಲ್ಲಿಯೇ ನಿರ್ವಹಣೆಗೊಳಿಸಲಾಗುತ್ತಿದೆ. ವಿವಿಯಲ್ಲಿ 51 ಜನರು ಪಿಂಚಣಿದಾರರಿದ್ದು ವಾರ್ಷಿಕ ₹3.50 ಕೋಟಿಯಷ್ಟು ಪಿಂಚಣಿಗೆ ಹಣ ಬೇಕಾಗುತ್ತದೆ. ಆದರೆ, ಸರ್ಕಾರ ಕಳೆದ ವರ್ಷ ಬರೀ ₹1 ಲಕ್ಷ ರು. ನೀಡಿ ಕೈ ತೊಳೆದುಕೊಂಡಿದೆ. ಪಿಂಚಣಿ ಹಣಕ್ಕೂ ಆಂತರಿಕ ಆದಾಯದ ಮೂಲದ ಹಣವನ್ನೇ ಬಳಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ರಾಜ್ಯದ ಏಕೈಕ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯಗೆ ಸ್ವಂತ ಕಟ್ಟಡವಿಲ್ಲ!
ಬಳ್ಳಾರಿ ವಿವಿಯ ಪ್ರಗತಿಗೆ ಸರ್ಕಾರದಿಂದ ಹೆಚ್ಚಿನ ನೆರವು ಬೇಕಾಗಿದೆ. ತುರ್ತಾಗಿ ಬೋಧಕ-ಬೋಧಕೇತರ ಸಿಬ್ಬಂದಿ ನೇಮಕಾತಿ ನಡೆಯಬೇಕು. ಕಟ್ಟಡಗಳ ನಿರ್ಮಾಣ, ರಸ್ತೆಗಳು, ಯುಜಿಡಿ ನಿರ್ಮಾಣ, ಸೋಲಾರ್ ಮತ್ತಿತರ ಸೌಕರ್ಯಗಳಿಗೆ ಹಣಬೇಕಾಗಿದೆ. ಕೆಎಂಆರ್‌ಇಸಿ ₹43 ಕೋಟಿ ಹಾಗೂ ಕೆಕೆಆರ್‌ಡಿಬಿಯಿಂದ ₹23 ಕೋಟಿಗಳಿಗೆ ಪ್ರಸ್ತಾವ ಇಡಲಾಗಿದ್ದು, ಅನುಮೋದನೆಯಾಗಿದೆ. ಶೀಘ್ರ ಹಣ ಬರಲಿದೆ. ನನ್ನ ಅವಧಿಯಲ್ಲಿ ರಾಜ್ಯದಲ್ಲಿಯೇ ಮಾದರಿ ವಿವಿ ಮಾಡುವ ಕನಸಿದೆ. ಖಂಡಿತ ಅದನ್ನು ಮಾಡಿ ತೋರಿಸುವೆ.
- ಪ್ರೊ. ಮುನಿರಾಜು, ಕುಲಪತಿ, ಬಳ್ಳಾರಿ ವಿವಿ