ಕರ್ನಾಟಕ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ಹುಲಿಗಳ ಸಮೀಕ್ಷೆ 2024 ವರದಿ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ 393 ಹುಲಿಗಳಿವೆ. ಹಿಂದಿನ ಸಾಲಿಗೆ ಹೋಲಿಸಿದರೆ ಈ ಬಾರಿ ಹುಲಿ ಸಂಖ್ಯೆ ಕಡಿಮೆಯಾಗಿದೆ.
ಬೆಂಗಳೂರು (ಮಾ.28): ಕರ್ನಾಟಕ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ಹುಲಿಗಳ ಸಮೀಕ್ಷೆ 2024 ವರದಿ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ 393 ಹುಲಿಗಳಿವೆ. ಹಿಂದಿನ ಸಾಲಿಗೆ ಹೋಲಿಸಿದರೆ ಈ ಬಾರಿ ಹುಲಿ ಸಂಖ್ಯೆ ಕಡಿಮೆಯಾಗಿದೆ. 2023ರ ನವೆಂಬರ್‌ನಿಂದ 2024ರ ಫೆಬ್ರವರಿವರೆಗೆ ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟ, ಕಾಳಿ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದಾಗ ಒಟ್ಟು 393 ಹುಲಿಗಳ ಇರುವಿಕೆ ಪತ್ತೆಯಾಗಿದೆ.
ಇದು 2023ಕ್ಕೆ ಹೋಲಿಸಿದರೆ (ಆ ಸಾಲಿನಲ್ಲಿ ಇದೇ ಸಂರಕ್ಷಿತ ಅರಣ್ಯಗಳಲ್ಲಿ 408 ಹುಲಿಗಳ ಇರುವಿಕೆ ಪತ್ತೆಯಾಗಿತ್ತು) 15 ಹುಲಿಗಳ ಸಂಖ್ಯೆ ಕುಸಿದಿದೆ. ಹುಲಿ ಸಮೀಕ್ಷೆಗಾಗಿ ರಾಜ್ಯದ ಈ 5 ಹುಲಿ ಸಂರಕ್ಷಿತ ಪ್ರದೇಶದಲ್ಲಿ 2,160 ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದ್ದು, 61 ಲಕ್ಷ ವನ್ಯಜೀವಿ ಚಿತ್ರಗಳನ್ನು ಪಡೆಯಲಾಗಿತ್ತು. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಾಂಶ ಮೂಲಕ ಹುಲಿ ಚಿತ್ರಗಳನ್ನು ಪ್ರತ್ಯೇಕಿಸಿ, ಪ್ರತಿ ಹುಲಿ ಪಟ್ಟೆಗಳನ್ನಾಧರಿಸಿ ಹುಲಿಗಳ ಸಂಖ್ಯೆ ಲೆಕ್ಕ ಹಾಕಲಾಗಿದೆ. ಅದರ ಆಧಾರದ ಮೇಲೆ ವಾರ್ಷಿಕ ವರದಿ ಸಿದ್ಧಪಡಿಸಿ, ಬಿಡುಗಡೆ ಮಾಡಲಾಗಿದೆ.
ಎಚ್‌ಡಿಕೆ, ರೆಡ್ಡಿ ಪ್ರಾಸಿಕ್ಯೂಷನ್ ಕಡತ ವಾಪಸ್ ಕಳಿಸಿದ ಗೌರ್‍ನರ್: ಕನ್ನಡದಿಂದ ಅನುವಾದಿಸಿದ್ದ ಲೋಕಾಯುಕ್ತ!
ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆ ಕಡಿಮೆ: 2014ರಿಂದ ಹುಲಿ ಸಮೀಕ್ಷೆ ಮಾಡಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2014ರಲ್ಲಿ 261 ಇದ್ದಂತಹ ಹುಲಿಗಳ ಸಂಖ್ಯೆ 2018ಕ್ಕೆ472ಕ್ಕೆ ಹೆಚ್ಚಳವಾಗಿತ್ತು. ಅದಾದ ನಂತರದಿಂದ ಹುಲಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2020ರಲ್ಲಿ 403, 2022ರಲ್ಲಿ 417, 2023ರಲ್ಲಿ 408 ಹುಲಿಗಳು ಪತ್ತೆಯಾಗಿರುವ ಕುರಿತು ವರದಿಯಲ್ಲಿ ತಿಳಿಸಲಾಗಿತ್ತು. ಅದೇ 2024ರಲ್ಲಿ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹುಲಿಗಳ ಸಂಖ್ಯೆ 393ಕ್ಕೆ ಇಳಿಕೆಯಾಗಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ)ದ ಮಾರ್ಗಸೂಚಿ ಹಾಗೂ ಅಖಿಲ ಭಾರತ ಹುಲಿ ಗಣತಿ ಭಾಗವಾಗಿ ಎಲ್ಲ ರಾಜ್ಯಗಳ ಹುಲಿ ವಾಸಸ್ಥಾನ ಪ್ರದೇಶಗಳಲ್ಲಿ ಪ್ರತಿ 4 ವರ್ಷಕ್ಕೊಮ್ಮೆ ಹುಲಿ, ಆನೆ ಸೇರಿ ಇನ್ನಿತರ ವನ್ಯಜೀವಿಗಳ ಗಣತಿ ನಡೆಸಲಾಗುತ್ತದೆ. ಅದರ ಜತೆಗೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿ ಮತ್ತು ಸಸ್ಯಹಾರಿ ಪ್ರಾಣಿಗಳ ವಾರ್ಷಿಕ ಮೇಲ್ವಿಚಾರಣೆಯ ಭಾಗವಾಗಿ, ಎನ್‌ಟಿಸಿಎ ಪ್ರತಿವರ್ಷ ಎಲ್ಲ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ಸಲಹೆ ನೀಡಿದೆ.
ಇಂದು ಯತ್ನಾಳ್ ಬಣದ ಸಭೆ ಕುತೂಹಲ: ಉಚ್ಚಾಟನೆ ವಾಪಸ್‌ಗಾಗಿ ವರಿಷ್ಠರಿಗೆ ಮೊರೆ ಹೋಗುವ ಕುರಿತು ಚರ್ಚೆ
2023ರ ವರದಿಯಂತೆ 563 ಹುಲಿಗಳು: ಎನ್‌ಟಿಸಿಎ ಪ್ರತಿ 4 ವರ್ಷಕ್ಕೊಮ್ಮೆ ದೇಶಾದ್ಯಂತ ಹುಲಿ ಗಣತಿ ನಡೆಸುತ್ತದೆ. ಅದರಂತೆ 2023ರಲ್ಲಿ ಬಿಡುಗಡೆಯಾದ ಹುಲಿ ಗಣತಿಯಲ್ಲಿ ಮಧ್ಯಪ್ರದೇಶದಲ್ಲಿ ಅತಿಹೆಚ್ಚು 785 ಹುಲಿಗಳಿರುವ ಕುರಿತು ವರದಿಯಾಗಿತ್ತು. ಅದೇ ಸಂರಕ್ಷಿತ ಅರಣ್ಯಗಳು ಸೇರಿ ರಾಜ್ಯದ ಎಲ್ಲ ಅರಣ್ಯ ಪ್ರದೇಶದಲ್ಲಿ 563 ಹುಲಿಗಳಿವೆ ಎಂದು ತಿಳಿಸಲಾಗಿತ್ತು. ಇದು ದೇಶದಲ್ಲೇ ಎರಡನೇ ಅತಿಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿತ್ತು. ಆದರೆ, ರಾಜ್ಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಜ್ಯ ಅರಣ್ಯ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಮಾತ್ರ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಪತ್ತೆಯಾಗಿದೆ.