ಸಂತೋಷ್‌ ಪಾಟೀಲ್‌ ಕೇಸ್‌: ಬೆಳಗಾವಿಯಲ್ಲಿ ತನಿಖೆ ಪೂರ್ಣ

By Kannadaprabha News  |  First Published Apr 24, 2022, 7:07 AM IST

* 50 ಮಂದಿ ವಿಚಾರಣೆ ಬಳಿಕ ಉಡುಪಿ ಪೊಲೀಸರು ವಾಪಸ್‌

* ಸಂತೋಷ್‌ ಪಾಟೀಲ್‌ ಕೇಸ್‌: ಬೆಳಗಾವಿಯಲ್ಲಿ ತನಿಖೆ ಪೂರ್ಣ

* ಸಾಲ, ಬಾಕಿ ಹಣಕ್ಕೆ ಒತ್ತಡದಿಂದ ನಲುಗಿದ್ದರೆ ಸಂತೋಷ್‌?


ಬೆಳಗಾವಿ(ಏ.24): ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರ ತನಿಖಾ ತಂಡ ಬೆಳಗಾವಿಯಲ್ಲಿ ಒಂದು ವಾರದ ಕಾಲ ನಿರಂತರವಾಗಿ ತನಿಖೆ ನಡೆಸಿದೆ. ಸಂತೋಷ ಪಾಟೀಲ ಸಾವಿನ ರಹಸ್ಯ ಹೊತ್ತು ಪೊಲೀಸರ ತಂಡ ಉಡುಪಿಗೆ ಮರಳಿದೆ.

ಗುತ್ತಿಗೆದಾರ ಸಂತೋಷ ಪಾಟೀಲ ಹಿಂಡಲಗಾ ಗ್ರಾಮದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಂಪೂರ್ಣ ಸಾಕ್ಷಿ ಕಲೆಹಾಕಿರುವ ಇನ್‌ಸ್ಪೆಕ್ಟರ್‌ ಶರಣಗೌಡ ಪಾಟೀಲ ನೇತೃತ್ವದ ಉಡುಪಿ ಪೊಲೀಸರ ತಂಡ ಈ ಪ್ರಕರಣ ಸಂಬಂಧ ಐವತ್ತಕ್ಕೂ ಅಧಿಕ ಜನರನ್ನು ತನಿಖೆಗೆ ಒಳಪಡಿಸಿ, ಅಗತ್ಯ ಮಾಹಿತಿಯನ್ನು ಕಲೆ ಹಾಕಿದೆ.

Tap to resize

Latest Videos

ಅಲ್ಲದೇ ಸಂತೋಷ ಪಾಟೀಲ ಆತ್ಮಹತ್ಯೆಗೆ ಐದು ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಈ ಪೈಕಿ ಸಂತೋಷ ಪಾಟೀಲ ಹಿಂಡಲಗಾ ಗ್ರಾಮದಲ್ಲಿ ಕಾಮಗಾರಿ ಮಾಡಿದ ಬಳಿಕ ಬಿಲ್‌ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದ. ಜತೆಗೆ ಕಾಮಗಾರಿಗೂ ಮುನ್ನ ಮನೆ ಪತ್ರ ಅಡವಿಟ್ಟು ಸಾಲ ಪಡೆದಿದ್ದ ಎಂಬ ಮಾಹಿತಿ ತನಿಖೆಯಿಂದ ಬಯಲಿಗೆ ಬಂದಿದೆ ಎನ್ನಲಾಗಿದೆ. ಕಾಮಗಾರಿಗೆ ಹಣ ಹಾಕಿದ್ದ ತುಂಡು ಗುತ್ತಿಗೆದಾರರಿಂದ ಕೆಲ ದಿನಗಳಿಂದ ಹಣ ಕೊಡುವಂತೆ ಒತ್ತಡವನ್ನೂ ಹೇರುತ್ತಿದ್ದರು. ಇದರಿಂದ ಆತನ ಮಾನಸಿಕವಾಗಿ ಜರ್ಝರಿತನಾಗಿದ್ದ ಎನ್ನಲಾಗಿದೆ. ಅಲ್ಲದೆ ಸಚಿವರಾಗಿದ್ದ ವೇಳೆ ಕೆ.ಎಸ್‌.ಈಶ್ವರಪ್ಪ ಅವರು ಮಾನನಷ್ಟಮೊಕದ್ದಮೆ ಹಾಕಿದ ಬಳಿಕ ಸಂತೋಷ ಪಾಟೀಲ ತೀವ್ರ ಒತ್ತಡದಿಂದ ಬಳಲುತ್ತಿದ್ದ ಎನ್ನಲಾಗಿದೆ. ಬಡ್ಡಿ ಮೂಲಕ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕಿರಬಹುದು ಎಂಬ ಹಲವಾರು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಸಂತೋಷ ಪಾಟೀಲ ಕೈಗೊಂಡಿರುವ ಕಾಮಗಾರಿ ಕುರಿತು ದಾಖಲೆ, ಫೋಟೋಗಳನ್ನು ಪೊಲೀಸರಿಗೆ ಕುಟುಂಬಸ್ಥರು ನೀಡಿದ್ದಾರೆ. ತೀವ್ರ ಹಣಕಾಸಿನ ಒತ್ತಡ ಹಿನ್ನೆಲೆ ಊರೂರು ಸುತ್ತಾಡುತ್ತಿದ್ದ ಸಂತೋಷ ಪಾಟೀಲ ಅವರು ಆತ್ಮಹತ್ಯೆಗೂ ಮುನ್ನ ಕೆಲ ದಿನಗಳ ಮುನ್ನ ಊರೂರು ಅಲೆಯುತ್ತಿದ್ದರೆ? ಪತ್ನಿಯನ್ನು ತವರು ಮನೆ ಸವದತ್ತಿಯಲ್ಲಿ ಬಿಟ್ಟು ಹಣ ಹೊಂದಾಣಿಕೆಗೆ ಅಲೆಯುತ್ತಿದ್ದರೆ? ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಸಂಬಂಧಿಸಿದವರಿಂದ ಕಾಮಗಾರಿ ದಾಖಲೆ, ಫೋಟೋ, ಸಂತೋಷ ಆರ್ಥಿಕ ಸ್ಥಿತಿಗತಿ ದಾಖಲೆ, ಸಾಕ್ಷಿಗಳ ಹೇಳಿಕೆ, ಆಸ್ತಿ ದಾಖಲೆ ಎಲ್ಲವನ್ನೂ ಕಲೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಸಂತೋಷ ಪಾಟೀಲ ಅವರ ಕುಟುಂಬಸ್ಥರು, ಹಿಂಡಲಗಾ ಗ್ರಾಪಂ ಅಧ್ಯಕ್ಷರು, ಸದಸ್ಯರು, ಉಪಗುತ್ತಿಗೆದಾರರು, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯೂ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ತನಿಖೆಗೆ ಒಳಪಡಿಸಿದೆ.

click me!