ಸಂಧ್ಯಾ ಸುರಕ್ಷಾ, ವೃದ್ದಾಪ್ಯ ಯೋಜನೆ: 23.19 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಿದ ಸರ್ಕಾರ

Published : Jun 17, 2025, 10:47 AM ISTUpdated : Jun 17, 2025, 10:49 AM IST
Village Old Woman Getting Pension

ಸಾರಾಂಶ

ರಾಜ್ಯದಲ್ಲಿ ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಯೋಜನೆಗಳಡಿ 23.19 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ.

ಬೆಂಗಳೂರು : ರಾಜ್ಯದಲ್ಲಿ ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಯೋಜನೆಗಳಡಿ ಒಟ್ಟು 23.19 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ನಿಯಮಾನುಸಾರ ಭೌತಿಕವಾಗಿ ಪರಿಶೀಲನೆ ನಡೆಸಿ ಅನರ್ಹ ಫಲಾನುಭವಿಗಳ ಪಿಂಚಣಿ ರದ್ದುಪಡಿಸಲು ಕ್ರಮ ವಹಿಸುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.

ಈ ಸಂಬಂಧ ಕಂದಾಯ ಇಲಾಖೆಯ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ(ಎಸ್‌ಎಸ್‌ಪಿ) ಆಯುಕ್ತರಾದ ಹೊನ್ನಾಂಬ ಎಸ್‌. ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಸಾಮಾಜಿಕ ಭದ್ರತೆಯ ವಿವಿಧ ಮಾಸಿಕ ಪಿಂಚಣಿ ಯೋಜನೆಗಳ ಪೈಕಿ ವೃದ್ಧಾಪ್ಯ ಯೋಜನೆಗಳಡಿ 21.87 ಲಕ್ಷ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ 31.33 ಲಕ್ಷ ಫಲಾನುಭವಿಗಳಿದ್ದಾರೆ.

ಈ ಫಲಾನುಭವಿಗಳ ವಿವರಗಳನ್ನು ಅವರ ಕುಟುಂಬ ದತ್ತಾಂಶದ ಮಾಹಿತಿಯೊಂದಿಗೆ ಹೊಂದಾಣಿಕೆ ಮಾಡಿದಾಗ ನಿಗದಿತ ವಯೋಮಿತಿಗಿಂತ ಕಡಿಮೆ ವಯಸ್ಸಿನವರು, ಆದಾಯ ಮಿತಿ ಮೀರಿದವರು, ಎಪಿಎಲ್‌ ಪಡಿತರ ಚೀಟಿದಾರರು, ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ವೇತನ ಪಡೆಯುತ್ತಿರುವ ಕುಟುಂಬದವರೂ ಪಿಂಚಣಿ ಸೌಲಭ್ಯ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ವೃದ್ಧಾಪ್ಯ ವೇತನ ಯೋಜನೆಯಡಿ ಇಂಥ ಸುಮಾರು 9.04 ಲಕ್ಷ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಸುಮಾರು 14.15 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಅನರ್ಹ ಫಲಾನುಭವಿಗಳ ಗ್ರಾಮವಾರು, ತಾಲೂಕುವಾರು ಮತ್ತು ಜಿಲ್ಲಾವಾರು ವಿವರಗಳನ್ನು ಎಲ್ಲಾ ತಹಸೀಲ್ದಾರರಿಗೆ ಒದಗಿಸಲಾಗಿದೆ. ಅಂಥ ಫಲಾನುಭವಿಗಳ ವಿವರಗಳನ್ನು ಕಡಿಮೆ ವಯೋಮಾನ, ಆದಾಯ ಮಿತಿ, ಆದಾಯ ತೆರಿಗೆ ಪಾವತಿ ಮತ್ತು ಎಚ್‌ಆರ್‌ಎಂಎಸ್‌ ಮಾನದಂಡಗಳನ್ವಯ ಭೌತಿಕವಾಗಿ ಪರಿಶೀಲಿಸಿ ಅನರ್ಹ ಫಲಾನುಭವಿಗಳ ಪಿಂಚಣಿ ರದ್ದುಪಡಿಸಲು ನಿಯಮಾನುಸಾರ ಅಗತ್ಯ ಕ್ರಮ ವಹಿಸಲು ಹಾಗೂ ಅಂತಹ ಅನರ್ಹ ಫಲಾನುಭವಿಗಳ ವಿವರಗಳ ಕುರಿತು ಆದಷ್ಟು ಬೇಗ ಇಲಾಖೆಗೆ ಮಾಹಿತಿ ಒದಗಿಸಬೇಕು ಸಂಬಂಧಿಸಿದ ಎಲ್ಲಾ ತಹಸೀಲ್ದಾರರು ಮತ್ತು ಅಧೀನ ಸಿಬ್ಬಂದಿಗೆ ನಿರ್ದೇಶನ ನೀಡುವಂತೆ ಕೆಎಸ್‌ಎನ್‌ಎಂಡಿಸಿ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಏನಿದು ಸಾಮಾಜಿಕ ಭದ್ರತಾ ಯೋಜನೆ?:

ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮೈತ್ರಿ, ಮನಸ್ವಿನಿ, ಆ್ಯಸಿಡ್‌ ದಾಳಿಗೊಳಗಾದ ಮಹಿಳೆಯರ ಸಹಾಯಧನ, ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಮಿತವೇತನ ಹೀಗೆ ಒಟ್ಟು 9 ಯೋಜನೆಗಳಡಿ 75 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಪಿಂಚಣಿ ನೀಡುತ್ತಿದೆ. ಇದಕ್ಕಾಗಿ ಸರ್ಕಾರ ವಾರ್ಷಿಕ 780 ಕೋಟಿ ರು. ಅನುದಾನ ನೀಡುತ್ತಿದೆ.

ಈ ಪೈಕಿ 53 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಸಂಧ್ಯಾಸುರಕ್ಷಾ ಮತ್ತು ವೃದ್ಧಾಪ್ಯವೇತನ ಯೋಜನೆಯಡಿ ಬರುತ್ತಾರೆ. ಇವರಿಗೆ ಮಾಸಿಕ ತಲಾ 600ರಿಂದ 1200 ರು. ಪಿಂಚಣಿ ನೀಡಲಾಗುತ್ತದೆ. 23 ಲಕ್ಷ ಅನರ್ಹ ಫಲಾನುಭವಿಗಳ ಪಿಂಚಣಿ ರದ್ದತಿಯಿಂದ ಸರ್ಕಾರಕ್ಕೆ ಸುಮಾರು 250 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌