Private Universities: ಖಾಸಗಿ ವಿವಿಗಳಿಂದ ಹೆಚ್ಚುವರಿ ಶುಲ್ಕ: ಉನ್ನತ ಶಿಕ್ಷಣ ಪರಿಷತ್‌ಗೆ KEA ಪತ್ರ; ಪತ್ರದಲ್ಲೇನಿದೆ?

Kannadaprabha News   | Kannada Prabha
Published : Jun 17, 2025, 10:14 AM ISTUpdated : Jun 17, 2025, 10:28 AM IST
KEA

ಸಾರಾಂಶ

ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳ ವಿರುದ್ಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಕೆಇಎ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ಗೆ ಪತ್ರ ಬರೆದು ಕಡಿವಾಣ ಹಾಕುವಂತೆ ಮನವಿ ಮಾಡಿದೆ.

ಬೆಂಗಳೂರು (ಜೂ.17) : ವೃತ್ತಿಪರ ಕೋರ್ಸುಗಳ ಪ್ರವೇಶಾತಿಯಲ್ಲಿ ಸರ್ಕಾರಿ ಕೋಟಾದ ಶೇ.40ರಷ್ಟು ಸೀಟುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಖಾಸಗಿ ವಿಶ್ವವಿದ್ಯಾಲಯಗಳು ನಿಯಮ ಬಾಹಿರವಾಗಿ ವಿಶ್ವವಿದ್ಯಾಲಯ ಶುಲ್ಕದ ಹೆಸರಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ಗೆ ಪತ್ರ ಬರೆದಿದೆ.

ಸರ್ಕಾರಿ ಕೋಟಾದ ಎಂಜಿನಿಯರಿಂಗ್‌, ವೈದ್ಯಕೀಯ, ದಂತ ವೈದ್ಯಕೀಯ ಸೇರಿ ಇನ್ನಿತರೆ ವೃತ್ತಿಪರ ಕೋರ್ಸುಗಳ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಹಾಗೂ ನೀಟ್‌ ರ್‍ಯಾಂಕಿಂಗ್‌ ಆಧಾರದಲ್ಲಿ ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ಹಂಚಿಕೆ ಮಾಡುತ್ತದೆ. ಈ ರೀತಿ ಹಂಚಿಕೆ ಮಾಡುವ ಸೀಟುಗಳಿಗೆ ಸರ್ಕಾರ ನಿಗದಿಪಡಿಸಿರುವ ಬೋಧನಾ ಶುಲ್ಕ ಮತ್ತು ಎಂಜಿನಿಯರಿಂಗ್‌ಗೆ ವಿಟಿಯು ನಿಗದಿಪಡಿಸಿರುವ ವಿಶ್ವವಿದ್ಯಾಲಯ ಶುಲ್ಕವನ್ನು ಪ್ರಾಧಿಕಾರವೇ ವಿದ್ಯಾರ್ಥಿಗಳಿಂದ ಪಡೆದು ಸಂಬಂಧಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಗೆ ಜಮೆ ಮಾಡುತ್ತದೆ. ಆದರೆ, ಕೆಲ ಖಾಸಗಿ ವಿಶ್ವವಿದ್ಯಾಲಯಗಳು ಈ ಸೀಟುಗಳಿಗೆ ದಾಖಲಾತಿ ಪಡೆಯಲು ಹೋದ ವಿದ್ಯಾರ್ಥಿಗಳಿಂದ ಸರ್ಕಾರ ನಿಗದಿಪಡಿಸಿರುವ ಶುಲ್ಕ ಮತ್ತು ವಿಟಿಯು ನಿಗದಿಪಡಿಸಿರುವ ಶುಲ್ಕ ಹೊರತುಪಡಿಸಿ ಹೆಚ್ಚುವರಿ ಶುಲ್ಕ ಹೇಳುತ್ತಿರುವುದಾಗಿ ದೂರುಗಳು ಬಂದಿವೆ ಎಂದು ತಿಳಿಸಿದೆ.

ಹೆಚ್ಚುವರಿ ಶುಲ್ಕ ಪಡೆಯುವುದು ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಯಂತ್ರಣ ಕಾಯ್ದೆ ಹಾಗೂ ಯುಜಿಸಿ ಮಾರ್ಗಸೂಚಿ ನಿಯಮಗಳ ವಿರುದ್ಧವಾಗಿದೆ. ಇದರಿಂದ ಬಡವರ್ಗದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಮತ್ತು ವಿಟಿಯು ನಿಗದಿಪಡಿಸಿರುವ ಶುಲ್ಕ ಹೊರತುಪಡಿಸಿ ಇನ್ಯಾವುದೇ ಶುಲ್ಕ ಪಡೆಯದಂತೆ ಸೂಕ್ತ ನಿರ್ದೇಶನ ನೀಡುವಂತೆ ಕೆಇಎ ಮನವಿ ಮಾಡಿದೆ.

ಅಲ್ಲದೆ, ಪ್ರತಿ ವರ್ಷ ರಾಜ್ಯ ಸರ್ಕಾರ ಖಾಸಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಬಗ್ಗೆ ಮಾಡಿಕೊಳ್ಳುವ ಒಪ್ಪದಂದ ವೇಳೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದೆಂಬ ಅಂಶವನ್ನೂ ಸೇರಿಸಿ ಸ್ಪಷ್ಟ ನಿರ್ದೇಶನ ನೀಡುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

ಕೆಇಎ ಮೂಲಗಳ ಪ್ರಕಾರ, ಅಂದಾಜು 1 ಲಕ್ಷದಿಂದ 2 ಲಕ್ಷ ರು. ವರೆಗೆ ಕೆಲ ವಿವಿಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಕೆಇಎಗೆ ದೂರು ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌