
ಬೆಂಗಳೂರು: ಕನ್ನಡದ ಶ್ರೇಷ್ಠ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪನವರು ಅಗಲಿ ಇಂದಿಗೆ ಸರಿಯಾಗಿ ಒಂದು ವರ್ಷ ತುಂಬಿದೆ. ಅವರ ನಿಧನದ ನಂತರ ಎದ್ದಿದ್ದ ವಿಲ್ ವಿವಾದ, ಅಂತ್ಯಕ್ರಿಯೆಯ ಹೊಣೆ ಹಾಗೂ ತಮ್ಮ ಮೇಲೆ ಕೇಳಿಬಂದ ಸರಣಿ ಟೀಕೆ-ಆರೋಪಗಳ ಕುರಿತು ಅವರ ಸಾಹಿತ್ಯಿಕ ಶಿಷ್ಯೆ, ಖ್ಯಾತ ಲೇಖಕಿ ಸಹನಾ ವಿಜಯಕುಮಾರ್ ಕೊನೆಗೂ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ.
'ಬೆಂಗಳೂರು ಬಜ್' ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ನಿರೂಪಕಿ ಭಾವನಾ ನಾಗಯ್ಯ ಅವರೊಂದಿಗೆ ಮಾತನಾಡಿದ ಸಹನಾ, ತಮ್ಮ ಮತ್ತು ಭೈರಪ್ಪನವರ ಒಡನಾಟ ಹಾಗೂ ನಂತರದ ವಿದ್ಯಮಾನಗಳನ್ನು ಬಿಚ್ಚಿಟ್ಟಿದ್ದಾರೆ.
'ಭೈರಪ್ಪನವರ ನಿಧನದ ಬಳಿಕ ಜನ ನನ್ನನ್ನು ಏಕಾಏಕಿ ಅಪರಾಧಿ ಸ್ಥಾನದಲ್ಲಿ ತಂದು ನಿಲ್ಲಿಸಿದರು. ನಾನು ಎಲ್ಲೋ ದಿಢೀರ್ ಎಂದು ಉದುರಿಬಂದು ಅವರ ಆಸ್ತಿ-ವಾರಸುದಾರಿಕೆ ಕಸಿದುಕೊಂಡೆ ಎಂಬಂತೆ ಮಾತನಾಡಿದರು. ಆದರೆ, ಭೈರಪ್ಪನವರು ನನಗೆ ಕೊಟ್ಟಿದ್ದು ಕೇವಲ ಅಂತ್ಯಸಂಸ್ಕಾರದ ಜವಾಬ್ದಾರಿ ಮತ್ತು ಸಾಹಿತ್ಯದ ವಾರಸುದಾರಿಕೆ ಮಾತ್ರ. ಅವರ ವಿಲ್‌ನಲ್ಲಿ ಆಸ್ತಿಯಾಗಲಿ, ಬೇರೆ ಯಾವುದೇ ಭೌತಿಕ ಲಾಭವಾಗಲಿ ನನಗೆ ದಕ್ಕಿಲ್ಲ. ಆಸ್ಪತ್ರೆಯಲ್ಲಿದ್ದಾಗ ತೆಗೆದುಕೊಂಡ ಆತುರದ ನಿರ್ಧಾರಗಳೂ ಅದಾಗಿರಲಿಲ್ಲ; ಹಲವು ತಿಂಗಳುಗಳ ಮುಂಚೆಯೇ ವಕೀಲರು ಹಾಗೂ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಅವರು ಈ ತೀರ್ಮಾನ ಕೈಗೊಂಡಿದ್ದರು' ಎಂದು ಸಹನಾ ಸ್ಪಷ್ಟಪಡಿಸಿದರು.
'ನಾನು ಮಹಿಳೆ ಎಂಬ ಕಾರಣಕ್ಕಾಗಿಯೇ ಈ ವಿಚಾರ ಸಮಾಜದಲ್ಲಿ ಇಷ್ಟೊಂದು ದೊಡ್ಡದಾಗಿ ಬ್ಲೋ ಅಪ್ ಆಯಿತು. ಭೈರಪ್ಪನವರನ್ನು ಓದಿಕೊಂಡಿದ್ದೇವೆ ಎಂದವರೇ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಧೀಶರಂತೆ ವರ್ತಿಸಿ ತೀರ್ಪು ಕೊಟ್ಟರು. ಆದರೆ, ನನಗೆ ಭೈರಪ್ಪನವರ ಬಗೆಗಿದ್ದ ಋಣಭಾರ ದೊಡ್ಡದು. ನನ್ನ ಬಾಲ್ಯದ ನೋವು, ಕೌಟುಂಬಿಕ ಆಘಾತಗಳಿಂದ ನನ್ನನ್ನು ಸಾಹಿತ್ಯದ ಮೂಲಕ ಹೊರತಂದವರು ಅವರು. ಅವರ ಗರಡಿಯಲ್ಲಿ ಪಳಗಿದ್ದರಿಂದಲೇ ಕಶೀರ, ಮಾಗಧ, ಅಪರೋಕ್ಷದಂತಹ ಕೃತಿಗಳನ್ನು ರಚಿಸಲು ಸಾಧ್ಯವಾಯಿತು' ಎಂದು ಸ್ಮರಿಸಿಕೊಂಡರು.
ಭೈರಪ್ಪನವರ ಕೊನೆಯ ದಿನಗಳ ಬಗ್ಗೆ ಮಾತನಾಡಿದ ಅವರು, 'ಅವರೊಬ್ಬ ನಿರ್ಲಿಪ್ತ (Detached) ವ್ಯಕ್ತಿತ್ವದ ದಾರ್ಶನಿಕ. ಯಾವುದೇ ಬಣ ಅಥವಾ ರಾಜಕೀಯ ಸಿದ್ಧಾಂತಕ್ಕೆ ಸಿಲುಕಿದವರಲ್ಲ. ಅವರ ಆಲೋಚನೆಗಳು, ಆಡಿದ ಮಾತುಗಳು, ಭೇಟಿ ನೀಡಿದ ಸ್ಥಳಗಳ ಅಪರೂಪದ ಆಡಿಯೋ ಮತ್ತು ವಿಡಿಯೋ ದಾಖಲೆಗಳು ನನ್ನ ಬಳಿ ಭದ್ರವಾಗಿವೆ. ಅವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಸರಿಯಾಗಿ ತಲುಪಿಸಲು, ‘ಭಿತ್ತಿ’ ಕೃತಿಯ ಎರಡನೇ ಭಾಗದ ಮಾದರಿಯಲ್ಲಿ ಸಮಗ್ರ ಪುಸ್ತಕ ಹಾಗೂ ಡಿಜಿಟಲ್ ಆರ್ಕೈವ್ ತರುವುದು ನನ್ನ ಕರ್ತವ್ಯ' ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ