
ಬೆಂಗಳೂರು (ಅ.09): ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿರುವ ಸಚಿವರ ವಿರುದ್ಧದ ‘ಸ್ಟಿಂಗ್ ಆಪರೇಷನ್’ (ಮಾರುವೇಷದ ಗುಪ್ತ ಕಾರ್ಯಾಚರಣೆ) ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಉತ್ತರ ಭಾರತದ ಖಾಸಗಿ ಏಜೆನ್ಸಿಯೊಂದು ಬಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರನ್ನು ಟ್ರ್ಯಾಪ್ ಮಾಡಲು ಯತ್ನಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ನಡೆದ ಆಂತರಿಕ ಚರ್ಚೆಯ ವಿವರಗಳನ್ನು ಹಂಚಿಕೊಂಡರು. ‘ಯಾರೋ ಉತ್ತರ ಭಾರತದವರು ಬಂದು ಡಿ.ಕೆ. ಶಿವಕುಮಾರ್ ಅವರ ಮೇಲೆಯೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು. ‘ನನ್ನ ಮೇಲೆಯೇ ಇಂತಹ ಪ್ರಯತ್ನ ನಡೆದಿದೆ ಎಂದ ಮೇಲೆ ನೀವೆಲ್ಲರೂ ಎಚ್ಚರಿಕೆಯಿಂದ ಇರಬೇಕು’ ಎಂದು ಸ್ವತಃ ಶಿವಕುಮಾರ್ ಅವರು ಸಂಪುಟ ಸಭೆಯಲ್ಲಿ ಎಲ್ಲ ಸಚಿವರಿಗೆ ಮುನ್ನೆಚ್ಚರಿಕೆಯ ಸೂಚನೆ ನೀಡಿದ್ದಾರೆ’ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಸ್ಟಿಂಗ್ ಆಪರೇಷನ್ ಕಾರ್ಯಾಚರಣೆಯ ಶೈಲಿಯನ್ನು ಸ್ವಾರಸ್ಯಕರವಾಗಿ ವಿವರಿಸಿದ ಸಚಿವರು, "ಟ್ರ್ಯಾಪ್ ಮಾಡಲು ಬರುವವರು ಸುಮ್ಮನೆ ಬರುವುದಿಲ್ಲ; ವಿವಿಧ ಆಮಿಷಗಳನ್ನು ತಂದಿಡುತ್ತಾರೆ. ಕೆಲವರು ರಸಗುಲ್ಲಾ, ಮೈಲಾರಿ ದೋಸೆ, ಮದ್ದೂರು ವಡೆ, ಮುಳಬಾಗಿಲು ದೋಸೆ, ದಾವಣಗೆರೆ ಬೆಣ್ಣೆ ದೋಸೆ ಹೀಗೆ ತಂದಿಡುತ್ತಾರೆ. ಇವುಗಳನ್ನು ನೋಡಿದಾಗ ಯಾರಿಗಾದರೂ ಬಾಯಲ್ಲಿ ನೀರು ಬರುವುದು ಸಹಜ. ಆ ಕ್ಷಣಕ್ಕೆ ಮರುಳಾಗಿ ಅನೇಕರು ಟ್ರ್ಯಾಪ್ ಆಗಿಬಿಡುತ್ತಾರೆ. ಹೀಗಾಗಿ ಯಾರೂ ಯಾವುದೇ ಆಮಿಷಗಳಿಗೆ ಬಲಿಯಾಗದೆ ಹುಷಾರಾಗಿರಬೇಕು ಎಂದು ಎಚ್ಚರಿಸಲಾಗಿದೆ. ರಾಜಕೀಯದಲ್ಲಿ ಇವೆಲ್ಲವೂ ಸಾಮಾನ್ಯ, ನಾವು ಎಚ್ಚರಿಕೆಯಿಂದಿರಬೇಕು" ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ