ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ 21 ದಿನಗಳ ನಂತರ ತಾಯ್ನಾಡಿಗೆ ತಲುಪಿದೆ.
ದೇವನಹಳ್ಳಿ (ಮಾ.21): ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ವಿದ್ಯಾರ್ತೀ ನವೀನ್ ಪಾರ್ಥಿವ ಶರೀರ 21 ದಿನಗಳ ನಂತರ ತಾಯ್ನಾಡಿಗೆ ತಲುಪಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದಲ್ಲಿ ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಯ ಕುಟುಂಬಕ್ಕೆ ಹಸ್ತಾಂತರಿಸಿದರು.
ದುಬೈ ಮೂಲಕ ಸೋಮವಾರ ಮುಂಜಾನೆ 3 ಗಂಟೆ ವೇಳೆ ನವೀನ್ ಪಾರ್ಥಿವ ಶರೀರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ್ ಉದಾಸಿ, ಸಚಿವ ಡಾ.ಕೆ.ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಇತರರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು . ಮೃತ ನವೀನ್ ಸಹೋದರ ಹರ್ಷ ಸೇರಿದಂತೆ ಗ್ರಾಮಸ್ಥರು ಪಾರ್ಥಿವ ಶರೀರವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪಡೆದುಕೊಂಡು ಆಂಬ್ಯುಲೆನ್ಸ್ನಲ್ಲಿ ಹಾವೇರಿ ಜಿಲ್ಲೆಯ ಸ್ವಗ್ರಾಮಕ್ಕೆ ತೆರಳಿದರು.
undefined
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನವೀನ್ ಸಾವನ್ನಪ್ಪಿದ್ದು ತುಂಬಾ ನೋವಿನ ವಿಚಾರ. ಉಕ್ರೇನ್ ರಷ್ಯಾ ಯುದ್ದದಲ್ಲಿ ಮಿಸೈಲ್ ನ ಮೆಟಲ್ ನವೀನ್ ಮೆದುಳಿಗೆ ತಗುಲಿ ಸಾವನ್ನಪ್ಪಿದ್ದ. ಘಟನೆ ನಡೆದ ದಿನದಿಂದ ನವೀನ್ ಕುಟುಂಬಸ್ಥರ ಜೊತೆಗಿದ್ದೇನೆ. ಪ್ರಧಾನಿಗಳ ಭಗೀರಥ ಕೆಲಸದಿಂದ ಈ ಕಾರ್ಯ ಸಕಾರವಾಗಿದೆ. ಪ್ರಧಾನಮಂತ್ರಿಗಳ ಕಾರ್ಯಾಲಯದ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ವಿ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ. ದೇಶದ ತಾಕತ್ತು ಇಂತಹ ಸಂಕಷ್ಟ ಸಮಯದಲ್ಲೆ ಗೊತ್ತಾಗೋದು. ಉಕ್ರೇನ್ ಎಂಬೆಸ್ಸಿ ಜೊತೆ ನಿರಂತರ ಸಂಪರ್ಕದಲ್ಲಿದ್ವೀ. ಈ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿ ಸಿಬ್ಬಂದಿಗೆ ಸಿ.ಎಂ ಧನ್ಯವಾದ. ಜೀವಂತವಾಗಿ ತರಲಿಕ್ಕಾಗಲಿಲ್ಲ ಅನ್ನೊ ನೋವು ಸದಾ ಇರತ್ತೆ. ನವೀನ್ ಕುಟುಂಬದ ಜೊತೆ ನಿಂತಿದ್ದೀವಿ ಮುಂದೆಯೂ ನಿಲ್ತೀವಿ. ನವೀನ್ ಸಾವಿನ ನೋವನ್ನ ಭರಿಸುವ ಶಕ್ತಿ ಆ ಕುಟುಂಬಕ್ಕೆ ಆ ದೇವರು ನೀಡಲಿ ಎಂದರು.
Ukraine Crisis ಅಂತಿಮ ಪೂಜೆ ಸಲ್ಲಿಸಿ ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ನೀಡಲು ಕುಟುಂಬಸ್ಥರ ನಿರ್ಧಾರ!
ಎಜುಕೇಷನ್ ಸಿಸ್ಟಮ್‌ನಲ್ಲಿ ಬದಲಾವಣೆ ಆಗಬೇಕಿದೆ: ನವೀನ್ ಮೃತದೇಹ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ಏರ್ಪೋರ್ಟ್‌ಗೆ ಆಗಮಿಸಿದೆ. ರಾಜ್ಯ ಬಿಟ್ಟು ನಮ್ಮ ರಾಜ್ಯದಿಂದ ಸಾವಿರಾರು ವಿದ್ಯಾರ್ಥಿಗಳು ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ತೆರಳಬೇಕಿದೆ. ಎಜುಕೇಷನ್ ಸಿಸ್ಟಮ್‌ನಲ್ಲಿ ಬದಲಾವಣೆ ಆಗಬೇಕಿದೆ. ಶೇ.96/ ಮಾರ್ಕ್ಸ್ ಪಡೆದರು ಮೃತ ನವೀನ್ ಗೆ ನಮ್ಮ ರಾಜ್ಯದಲ್ಲಿ ಎಂಬಿಬಿಎಸ್ ಸೀಟ್ ಸಿಗಲಿಲ್ಲ. ಇಡೀ ರಾಜ್ಯ ನಮ್ಮ ನವೀನ್‌ಗೆ ಸಂತಾಪ ಸೂಚಿಸಿದೆ. ನವೀನ್ ಮೃತ ದೇಹ ಹಸ್ತಾಂತರಿಸಿದ ನಂತರ ಅಚರ ಕುಟುಂಬದವರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಇಂತ ಘಟನೆ ಮರುಕಳಿಸಬಾರದು. ನೀಟ್‌ನಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ, ಈ ಮೂಲಕ ಅನ್ಯಾಯ ಹಾಕ್ತಿದೆ. ರಾಜ್ಯದ ಮಕ್ಕಳಿಗೆ ಅನ್ಯಾಯ ಆಗಬಾರದು. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು. ಶಿಕ್ಷಣ ವ್ಯವಸ್ಥೆ ಬದಲಾಗಬೇಕು, ಬೇರೆ ಕಾರ್ಯ ಬದಿಗೊತ್ತಿ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್ ಹೇಳಿದರು.
ಕೀವ್ ಮೆಡಿಕಲ್ ಕಾಲೇಜಿನಲ್ಲಿ ನವೀನ್ ಮೃತ ದೇಹ ಇಡಲಾಗಿತ್ತು: 572 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ತಂದಿದ್ದೇವೆ. ಕೂಡಲೇ ಕೀವ್ ಅಧಿಕಾರಿಗಳಿಗೆ ಮಾನವೀಯ ದೃಷ್ಟಿಯಿಂದ ಮನವಿ ಮಾಡಿದ್ವೀ. ಕೀವ್ ಮೆಡಿಕಲ್ ಕಾಲೇಜಿನಲ್ಲಿ ನವೀನ್ ಮೃತ ದೇಹ ಇಡಲಾಗಿತ್ತು. 6ನೇ ತಾರೀಖಿನ ನಂತರ ಕೀವ್ ಕಾರ್ಖೀವ್‌ನಲ್ಲಿ ಬಾಂಬಿಂಗ್ ಜಾಸ್ತಿಯಾಗಿತ್ತು. ಪ್ಯುನೆರಲ್ ಏಜೆಂಟ್ ಮೂಲಕ ಡಾಕ್ಯುಮೆಂಟೆಷನ್ ಮಾಡಿ ಮೃತದೇಹ ಕಳಿಸಲಾಯ್ತು. ಕೀವ್‌ನಿಂದ ವಾರ್ಸಾ ಪೊಲೇಂಡ್‌ನಲ್ಲಿ ಡಾಕ್ಯುಮೆಂಟೇಷನ್ ಆಗಿ ದುಬೈ ಮೂಲಕ ದೇವನಹಳ್ಳಿ ಏರ್ಪೊರ್ಟ್‌ಗೆ ಮೃತದೇಹ ತರಲಾಯ್ತು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮೃತದೇಹ ಕಳಿಸಿಕೊಡಲಾಗಿದೆ ಎಂದು IFS ಅಧಿಕಾರಿ ಮನೋಜ್ ರಾಜನ್ ತಿಳಿಸಿದರು.
ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ಬಲಿಯಾದ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಪಾರ್ಥಿವ ಶರೀರ ಸೋಮವಾರ ಸ್ವಗ್ರಾಮ ರಾಣೆಬೆನ್ನೂರು ತಾಲೂಕು ಚಳಗೇರಿಗೆ ಬರಲಿದ್ದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ಚಳಗೇರಿಯ ನಿವಾಸಕ್ಕೆ ತರಲಾಗುತ್ತದೆ.
ಅಂತಿಮ ದರ್ಶನಕ್ಕೆ ಸಿದ್ಧತೆ: ನವೀನ್ ಪಾರ್ಥಿವ ಶರೀರವನ್ನು ಚಳಗೇರಿಯ ನಿವಾಸಕ್ಕೆ ತಂದು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಬೆಳಗ್ಗೆ 10 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗಣ್ಯರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುಮಾರು 200 ಪೊಲೀಸರನ್ನು ನಿಯೋಜಿಸಲಾಗಿದೆ.
Russia-Ukraine War: ನವೀನ್ ಮನೆಗೆ ಸಿದ್ದರಾಮಯ್ಯ ಭೇಟಿ: ಪೋಷಕರಿಗೆ ಸಾಂತ್ವನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಳಗೇರಿಗೆ ಆಗಮಿಸಿ ಅಂತಿಮ ದರ್ಶನ ಪಡೆಯಲಿದ್ದಾರೆ. ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಸ್ಥಳೀಯ ಶಾಸಕ ಅರುಣಕುಮಾರ ಪೂಜಾರ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು ಅಂತಿಮ ದರ್ಶನ ಪಡೆಯಲಿದ್ದಾರೆ. ಉಕ್ರೇನ್‌ನಿಂದ ಹಿಂದಿರುಗಿರುವ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ನವೀನ್ ಸ್ನೇಹಿತರು ಆಗಮಿಸಲಿದ್ದಾರೆ. ಸುಮಾರು 3 ಗಂಟೆಗಳ ಕಾಲ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಎಸ್ಪಿ ಹನುಮಂತರಾಯ ಅವರು ಭಾನುವಾರ ಚಳಗೇರಿಯ ನಿವಾಸಕ್ಕೆ ತೆರಳಿ ಸಿದ್ಧತೆ ಪರಿಶೀಲಿಸಿದರು.
ದೇಹದಾನ: ಅಂತಿಮ ದರ್ಶನದ ಬಳಿಕ ಚಳಗೇರಿ ಗ್ರಾಮದಲ್ಲಿ ನವೀನ್ ದೇಹದ ಮೆರವಣಿಗೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಇಡೀ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಗೌರವ ಸಲ್ಲಿಸಲಾಗುತ್ತದೆ. ನವೀನ್ ದೇಹದಾನಕ್ಕೆ ಪೋಷಕರು ನಿರ್ಧರಿಸಿರುವಂತೆ ಮೆರವಣಿಗೆ ಬಳಿಕ ದಾವಣಗೆರೆಯ ಎಸ್.ಎಸ್. ಮೆಡಿಕಲ್ ಕಾಲೇಜಿಗೆ ನವೀನ್ ದೇಹವನ್ನು ಹಸ್ತಾಂತರ ಮಾಡಲಾಗುತ್ತದೆ.
21 ದಿನಗಳ ಬಳಿಕ ಮಗನ ಮೃತದೇಹ ಬರುತ್ತಿದೆ. ಪೂಜೆ, ಅಂತಿಮ ದರ್ಶನಕ್ಕೆ ಮನೆ ಎದುರು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಎಂ ಸೇರಿದಂತೆ ಅನೇಕ ಗಣ್ಯರು ಬರಲಿದ್ದಾರೆ. ಡಾಕ್ಟರ್ ಆಗುವ ಕನಸು ಕಂಡಿದ್ದ ಮಗನ ದೇಹ ಮೆಡಿಕಲ್ ಓದುವ ವಿದ್ಯಾರ್ಥಿಗಳ ಅಧ್ಯಯನಕ್ಕಾದರೂ ಅನುಕೂಲವಾಗಲಿ ಎಂಬ ಕಾರಣಕ್ಕೆ ದಾವಣಗೆರೆ ಎಸ್‌ಎಸ್ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು.
-ಶೇಖರಪ್ಪ ಗ್ಯಾನಗೌಡರ, ನವೀನ್ ತಂದೆ