Operation Ganga: ಉಕ್ರೇನ್‌ನಿಂದ ರಾಜ್ಯಕ್ಕೆ ಬಹುತೇಕ ಕನ್ನಡಿಗರು ವಾಪಸ್‌: ಹಿಂದಿರುಗಿದ ವಿದ್ಯಾರ್ಥಿಗಳು ಏನಂತಾರೆ?

By Kannadaprabha NewsFirst Published Mar 10, 2022, 9:35 AM IST
Highlights

*ಬಾಕಿ ಉಳಿದ 16 ವಿದ್ಯಾರ್ಥಿಗಳು ಶೀಘ್ರ ಆಗಮನ
*ಒಟ್ಟಾರೆ ಈವರೆಗೆ 621 ಮಂದಿ ತವರಿಗೆ ವಾಪಸ್‌

ಬೆಂಗಳೂರು (ಮಾ. 10):  ಆಪರೇಷನ್‌ ಗಂಗಾ ಕಾರ್ಯಾಚರಣೆ ಆರಂಭಕ್ಕೂ ಮುನ್ನ ರಾಜ್ಯಕ್ಕೆ 61 ವಿದ್ಯಾರ್ಥಿಗಳು ಹಿಂದಿರುಗಿದ್ದು, ಒಟ್ಟಾರೆ ಉಕ್ರೇನ್‌ನಿಂದ ಈವರೆಗೆ ಆಗಮಿಸಿದ ಕನ್ನಡಿಗರ ಸಂಖ್ಯೆ 621ಕ್ಕೆ ಹೆಚ್ಚಳವಾಗಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದ ಕನ್ನಡಿಗರ ಪೈಕಿ 10 ದಿನಗಳ ಆಪರೇಷನ್‌ನ್‌ ಗಂಗಾ ಕಾರ್ಯಾಚರಣೆಯಲ್ಲಿ ದೆಹಲಿ ಮೂಲಕ 506, ಮುಂಬೈ ಮೂಲಕ 54 ಸೇರಿ 560 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಯುದ್ಧ ಮಾಹಿತಿ ಹಿನ್ನೆಲೆ ಮುಂಚಿತವಾಗಿಯೇ ರಾಜ್ಯದ 61 ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ. ಸದ್ಯ ಅವರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಮೂಲಕ ಒಟ್ಟಾರೆ 621 ವೈದ್ಯಕೀಯ ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದಂತಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.

ರಾಜ್ಯ ಸಹಾಯವಾಣಿ ನೋಂದಣಿಯಾಗಿದ್ದವರ ಪೈಕಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ 22 ಸಂಪರ್ಕ ಸಾಧ್ಯವಾಗಿಲ್ಲ. ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿಕೊಂಡಿದ್ದ ಹಾಸನ ಇಬ್ಬರು, ತುಮಕೂರು, ಕೋಲಾರ, ಕೊಡಗು ಹಾಗೂ ಶಿವಮೊಗ್ಗದ ತಲಾ ಒಬ್ಬ ವಿದ್ಯಾರ್ಥಿ ಸೇರಿ 6 ವಿದ್ಯಾರ್ಥಿಗಳನ್ನು ಉಕ್ರೇನ್‌ನ ಪಶ್ಚಿಮ ಗಡಿಗೆ ಕರೆತರಲಾಗಿದೆ. 

Latest Videos

ಬೆಂಗಳೂರು ನಗರದ 10 ವಿದ್ಯಾರ್ಥಿಗಳ ಪೈಕಿ ಐದು ವಿದ್ಯಾರ್ಥಿಗಳು ಉಕ್ರೇನ್‌ ಪೂರ್ವ ಭಾಗದಿಂದ ಹೊರಡಲು ಸಿದ್ಧರಾಗಿದ್ದು, ಮತ್ತೆ ಐದು ಮಂದಿ ಗಡಿಯ ಹಾದಿಯಲ್ಲಿದ್ದಾರೆ ಎಂದು ರಾಜ್ಯ ನೋಡಲ್‌ ಅಧಿಕಾರಿ ಮನೋಜ್‌ ರಾಜನ್‌ ತಿಳಿಸಿದ್ದಾರೆ.

ಇದನ್ನೂ ಓದಿ: Russia Ukraine War: ಭಾರತೀಯರ ರಕ್ಷಣೆಯಲ್ಲಿ ಪ್ರಧಾನಿ ಮೋದಿ ಪಾತ್ರ ಹಿರಿದು: ಅಧಿಕಾರಿ

ರಾಜ್ಯ ಸಹಾಯವಾಣಿಗೆ ನೋಂದಣಿಯಾದ ವಿದ್ಯಾರ್ಥಿಗಳು - 659

ಆಪರೇಷನ್‌ ಗಂಗಾ ಕಾರ್ಯಾಚರಣೆಯಲ್ಲಿ ಆಗಮಿಸಿದವರು - 560

ದೇಶಕ್ಕೆ ಮರಳಲು ರಾಯಭಾರಿ ಸಿಬ್ಬಂದಿ ಸಂಪರ್ಕದಲ್ಲಿರುವವರು - 16

ಯುದ್ಧ ಆರಂಭಕ್ಕೂ ಮುನ್ನ ಉಕ್ರೇನ್‌ ತೊರೆದು ಬಂದವರು - 61

ನೋಂದಣಿ ಮಾಡಿ ಸಂಪರ್ಕಕ್ಕೆ ಸಿಗದ ಪೋಷಕರು/ವಿದ್ಯಾರ್ಥಿ - 22

ರೈಲು ಹತ್ತುವಾಗ ಪೆಪ್ಪರ್‌ ಸ್ಪ್ರೇ ಮಾಡಿದ್ರು: ನಾವು ರೈಲು ಹತ್ತುವಾಗ ಉಕ್ರೇನಿಯನ್ನರು ನಮ್ಮ ಮೇಲೆ ಪೆಪ್ಪರ್‌ ಸ್ಪ್ರೇ ಮಾಡಿದರು, ರೈಲಿಗೆ ಹತ್ತಲಿಕ್ಕೆ ಬಿಡದೆ ಹೊರಗೆ ತಳ್ಳಿದರು, ಕೆಲವರಿಗೆ ಹೊಡೆದರು, ನೀವು ಭಾರತೀಯರು ಇಲ್ಲಿ ಯಾಕೆ ಬಂದಿರಿ, ನೀವು ಇಲ್ಲೇ ಸತ್ತು ಹೋಗಿ ಎಂದು ಬೈಯ್ದರು, ಜನಾಂಗೀಯ ನಿಂದನೆ ಕೂಡ ಮಾಡಿದರು. ಭಾರತ ಸರ್ಕಾರ ನಮಗೆ ಸಕಾಲದಲ್ಲಿ ಅಡ್ವೈಸರಿ ಕಳುಹಿಸುತ್ತಿತ್ತು, ಅಧಿಕಾರಿಗಳು ಗ್ರೂಪಿಗೆ ಮೆಸ್ಸೇಜ್‌ ಹಾಕುತ್ತಿದ್ದರು. ಎಲ್ಲಿರಬೇಕು, ಎಲ್ಲಿಗೆ ಹೋಗಬೇಕು, ಎಲ್ಲಿದ್ದರೆ ಸೇಫ್‌, ಹೇಗೆ ಸಂಚಾರ ಮಾಡಬೇಕು ಎಂದೆಲ್ಲ ತಿಳಿಸುತ್ತಿದ್ದರು. -ಆ್ಯನಿಫ್ರೆಡ್‌ ರಿಡ್ಲೆ ಡಿಸೋಜ, ಉಡುಪಿ

ಅಲ್ಲಿ ಕ್ಷಣ ಕ್ಷಣ ಭಯದ ವಾತಾವರಣ: ಬಂಕರ್‌ನಲ್ಲಿ ಸುರಕ್ಷಿತವಾಗಿದ್ದ ನಾವು ಊಟ, ತಿಂಡಿಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರೂ ಒಳ ಮನಸ್ಸಿನಲ್ಲಿ ಅದೇನೋ ತವಕ. ಅದರಲ್ಲೂ ನಮ್ಮಣ್ಣನಂತಿದ್ದ ನವೀನ್‌ ಕಳೆದುಕೊಂಡ ಸುದ್ದಿ ನಮ್ಮನ್ನು ಮತ್ತಷ್ಟುಆತಂಕಕ್ಕೆ ತಂದೊಡ್ಡಿತ್ತು. ರಷ್ಯಾ ಸೇನೆ ಝಾಪ್ರೋರೋಜಿಯಾ ತಲುಪುವ ಕೆಲವೇ ಕ್ಷಣಗಳ ಮೊದಲು ಅಲ್ಲಿಂದ ನಾವು ಹೊರ ಬಂದೆವು. ಈಗ ಅದೇಗೋ ಯುದ್ಧಭೂಮಿಯಿಂದ ತಾಯ್ನಾಡಿಗೆ ಬಂದಿದ್ದು ಮರು ಜೀವ ಪಡೆದಂತಾಗಿದೆ! -ಮಿಲನ್‌ ದೇವಮಾನೆ, ಧಾರವಾಡ

ಇದನ್ನೂ ಓದಿ: Russia Ukraine War: ಕದನವಿರಾಮದಿಂದ ತಗ್ಗಿದ ಯುದ್ಧ ಅಬ್ಬರ!

ಗಟ್ಸ್‌ ಇಲ್ಲ ಹೇಳಿಕೆ ಸರಿಯಲ್ಲ: ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ಕಾಲಿಡಲು ಭಾರತದ ರಾಯಭಾರಿ ಅಧಿ​ಕಾರಿಗಳಿಗೆ ಗಟ್ಸ್‌ ಇಲ್ಲ ಎನ್ನುವ ಹೇಳಿಕೆ ಸರಿಯಲ್ಲ. ಉಕ್ರೇನ್‌ನಿಂದ ಹಾಸನಕ್ಕೆ ಬರಲು ಭಾರತದ ರಾಯಭಾರಿ ಕಚೇರಿಯ ಅಧಿ​ಕಾರಿಗಳು ಹೆಚ್ಚು ಸಹಕಾರ ನೀಡಿದರು. ಯುದ್ಧದಂತಹ ಸಂಕಷ್ಟದ ಸಮಯದಲ್ಲಿ ರಾಜತಾಂತ್ರಿಕವಾಗಿ ರಾಯಭಾರಿಗಳು ತಮ್ಮ ಇತಿಮಿತಿಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಅದರಂತೆ ಅವರು ಕಾರ್ಯನಿರ್ವಹಿಸಿದ್ದು ರಾಯಭಾರ ಅ​ಧಿಕಾರಿಗಳ ಸಹಾಯ ತೃಪ್ತಿಕರವಾಗಿದೆ. -ಗಗನ್‌ ಗೌಡ, ಹಾಸನ

10 ಕಿ.ಮೀ. ನಡೆದಿದ್ದೆವು: ಯುದ್ದ ಆರಂಭವಾಗುತ್ತದೆ ನೀವು ಹೊರಡಿ ಎಂದು ಕೇಂದ್ರ ಸರ್ಕಾರದಿಂದ ಫೆ.19ಕ್ಕೆ ಮಾಹಿತಿ ಬಂದಿದೆ. ನಾವು ಕೂಡಲೇ ಹೊರಡಲು ವಿಮಾನ ಸೌಲಭ್ಯ ಆಗದೇ ಇರುವುದರಿಂದ ಇಷ್ಟುಸಮಸ್ಯೆ ಎದುರಿಸಬೇಕಾಯಿತು. ಅನಿವಾರ್ಯವಾಗಿ ಖಾರ್ಕೀವ್‌ ವಿವಿಯ ಬಂಕರ್‌ನಲ್ಲಿ ವಾಸ ಮಾಡಬೇಕಾಯಿತು. ಬಂಕರ್‌ನಿಂದ ಸುಮಾರು 10 ಕಿಮೀ ದೂರ ನಡೆಯುತ್ತಲೇ ರೈಲ್ವೆ ನಿಲ್ದಾಣದತ್ತ ನಡೆಯುತ್ತಲೇ ಸಾಗುವಾರ ದಾರಿಯಲ್ಲಿ ಯುದ್ಧದ ದೃಶ್ಯವನ್ನು ಕಣ್ಣಾರೆ ಕಂಡಿದ್ದು ಬಾಂಬ್‌ಗಳು ಬೀಳುತ್ತಿರುವಾಗ ಸುರಕ್ಷಿತ ಸ್ಥಳದಲ್ಲಿ ಸೇರಿಕೊಳ್ಳುತ್ತಿದ್ದೆವು. -ಸುಮನ್‌ ವೈಶ್ಯರ, ರಾಣಿಬೆನ್ನೂರು

click me!