ಅಂತರ್ಜಲ ಚೇತನ ಭೂ ಋಣ ತೀರಿಸುವ ಯೋಜನೆ: ಸಚಿವ ಈಶ್ವರಪ್ಪ

By Kannadaprabha NewsFirst Published May 7, 2020, 11:15 AM IST
Highlights

ಮನುಷ್ಯ ಪ್ರಕೃತಿಗೆ ನೀಡಿದ್ದಕ್ಕಿಂತ ದ್ರೋಹವೆಸಗಿದ್ದೆ ಹೆಚ್ಚು. ಸಾಕಷ್ಟು ಮಳೆ ಆಗುತ್ತಿದ್ದರೂ ನೀರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳದೆ ಅನಗತ್ಯವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ನೆಲದಿಂದ ನೀರನ್ನು ಮೇಲೆತ್ತಿ ಅಂತರ್ಜಲ ಖಾಲಿ ಮಾಡಿದ್ದಾನೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಮೇ.07): ಅಂತರ್ಜಲ ಚೇತನ ಕೇವಲ ಸರ್ಕಾರದ ಯೋಜನೆಯಲ್ಲ, ಪ್ರತಿಯೊಬ್ಬರೂ ಭೂಮಿ ತಾಯಿ ಋುಣ ತೀರಿಸುವ ಯೋಜನೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಹೇಳಿದರು.

ಶಿವಮೊಗ್ಗ ತಾಲೂಕು ಸೂಗೂರು ಸಮೀಪದ ಕ್ಯಾತಿನಕೊಪ್ಪ ಗ್ರಾಮದಲ್ಲಿ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯ ಪ್ರಕೃತಿಗೆ ನೀಡಿದ್ದಕ್ಕಿಂತ ದ್ರೋಹವೆಸಗಿದ್ದೆ ಹೆಚ್ಚು. ಸಾಕಷ್ಟು ಮಳೆ ಆಗುತ್ತಿದ್ದರೂ ನೀರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳದೆ ಅನಗತ್ಯವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ನೆಲದಿಂದ ನೀರನ್ನು ಮೇಲೆತ್ತಿ ಅಂತರ್ಜಲ ಖಾಲಿ ಮಾಡಿದ್ದಾನೆ. 2-3ದಶಕಗಳ ಹಿಂದೆ ಬಿದ್ದ ಮಳೆ ನೀರಿನ ಶೇ.40ರಷ್ಟುನೀರು ಭೂಮಿಯಲ್ಲಿ ಇಂಗುತ್ತಿತ್ತು. ಆದರೆ ಇಂದು ಅದರ ಪ್ರಮಾಣ ಶೇ.5ಕ್ಕೆ ಬಂದು ನಿಂತಿದೆ. ಪ್ರಸ್ತುತ ಸಂದರ್ಭದಲ್ಲಿ ಮನುಷ್ಯ ಪ್ರಕೃತಿಯ ಋುಣ ತೀರಿಸುವ ಕಾಲ ಇದಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹಣೆ ಮತ್ತು ಮಣ್ಣು ಸವಕಳಿ ತಡೆಯುವುದು, ಮಣ್ಣಿನ ತೇವಾಂಶ ಹೆಚ್ಚಿಸುವುದು, ಸ್ವಾಭಾವಿಕ ಹಳ್ಳಗಳುದ್ದಕ್ಕೂ ಕೃತಕ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸುವುದು ಹಾಗೂ ಸ್ವಾಭಾವಿಕ ಸಸ್ಯವರ್ಗ ಹೆಚ್ಚಿಸುವ ಸದುದ್ದೇಶದಿಂದಾಗಿ ಜಾರಿಗೆ ತರಲಾಗಿರುವ ಅಂತರ್ಜಲ ಚೇತನ ಯೋಜನೆಯನ್ನು ಮುಂದಿನ ಒಂದು ವರ್ಷದ ಅವ​ಧಿಯೊಳಗಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಸಮುದಾಯ ಸಹಭಾಗಿತ್ವ ಅಗತ್ಯ:

ಈ ಎಲ್ಲ ಕಾಮಗಾರಿಗಳು ನಿರೀಕ್ಷೆಯಂತೆ ಪೂರ್ಣಗೊಳ್ಳಲು ಸಮುದಾಯದ ಸಹಭಾಗಿತ್ವ ಮಹತ್ವದ್ದಾಗಿದೆ. ಈ ಯೋಜನೆಯಿಂದ ಜಿಲ್ಲೆಯ ಎಲ್ಲಾ 271ಗ್ರಾಮ ಪಂಚಾಯ್ತಿಗಳ ಸುಮಾರು 8.82ಲಕ್ಷ ಜನರಿಗೆ ಉಪಯೋಗವಾಗಲಿದೆ. ಈ ಯೋಜನೆಯಡಿ ಬೋಲ್ಡರ್‌ ಚೆಕ್‌ (ಕಲ್ಲುಗುಂಡು ತಡೆ) ನಿರ್ಮಾಣ, ಇಂಗುಬಾವಿ, ಇಂಗುಕೊಳವೆ, ಕೆರೆ ಹೊಂಡ ಸೇರಿದಂತೆ ಒಟ್ಟು 32,731 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಗಿರುವ ಈ ಯೋಜನೆಗೆ 252 ಕೋಟಿ ರು.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಈ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ತಜ್ಞ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಸೂಕ್ತ ಸಲಹೆ, ಸೂಚನೆ ನೀಡುವರಲ್ಲದೆ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ ಆಯ್ದ 8-10 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಹಂತಹಂತವಾಗಿ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದರು. ಈ ಯೋಜನೆಯ ಅನುಷ್ಠಾನ ಕಾರ್ಯದಲ್ಲಿ ಆಸಕ್ತರೆಲ್ಲರಿಗೂ ಉದ್ಯೋಗಾವಕಾಶ ನೀಡಲಾಗುತ್ತಿದೆ. ಅಲ್ಲದೆ ಶ್ರಮಿಕರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶವೂ ದೊರೆಯಲಿದೆ ಎಂದರು.

ನೀರು ವ್ಯರ್ಥವಾಗುತ್ತಿದೆ:

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹವಾಮಾನದ ವೈಪರೀತ್ಯಗಳ ಪರಿಣಾಮವಾಗಿ ಅತೀವೃಷ್ಟಿ, ಅನಾವೃಷ್ಟಿನೋಡುವಂತಾಗಿದೆ. ಬರುವ ಮಳೆಯ ನೀರನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಬದಲಾಗಿ ವ್ಯರ್ಥವಾಗಿ ಹೋಗುತ್ತಿದೆ. ಸಾರಯುಕ್ತ ಮಣ್ಣಿನ ಸವಕಳಿಯಾಗುತ್ತಿದೆ. ಈ ಯೋಜನೆಯ ಅನುಷ್ಠಾನದಲ್ಲಿ ರೈತರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಸೂಚಿಸಿದರು.

2000 ಮಿ.ಮೀ.ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಬರುತ್ತಿದ್ದರೂ ಬೇಸಿಗೆಯಲ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯಿಂದ ಹೊರತಾಗಿಲ್ಲ. ಬರುವ ಮಳೆ ನೀರಿನ ಸದ್ಬಳಕೆಗೆ ಕ್ರಿಯಾ ಯೋಜನೆ ರೂಪಿಸುವ, ಬರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ, ನೀರಿನ ಹರಿವನ್ನು ನಿಯಂತ್ರಿಸಿ ಇಂಗಿಸುವ ಅಗತ್ಯವಿದೆ. ಅಂತರ್ಜಲ ಬ್ಯಾಂಕಿನಲ್ಲಿ ಇಟ್ಟನಿ​ಧಿಯ ಹಾಗೆ. ನೀರಿನ ಮರುಪೂರಣ ಆಗಬೇಕು. ತೆಗೆಯುವ ನೀರನ್ನು ಮತ್ತೆ ತುಂಬುವ ಕೆಲಸ ಆಗಬೇಕು. ಅದು ಆಪತ್ಕಾಲದಲ್ಲಿ ಬಳಕೆಯಾಗಲಿದೆ ಎಂದ ಅವರು, ಈ ಯೋಜನೆಯ ಅನುಷ್ಠಾನಕ್ಕಾಗಿ ಸರಳವಾದ ವೈಜ್ಞಾನಿಕವಾದ ವಿಧಾನಗಳನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಸರ್ಕಾರದೊಂದಿಗೆ ಸಮುದಾಯ ಮುಂದಾಗಬೇಕು. ಮಳೆ ನೀರು ಸಂಗ್ರಹಕ್ಕೆ ಇದು ಸುವರ್ಣಾವಕಾಶ ಎಂದರು.

ಇಂದು ಅಂತರ್ಜಲ ಚೇತನ ಯೋಜನೆಗೆ ಸಚಿವ ಈಶ್ವರಪ್ಪ ಚಾಲನೆ

ವಿಧಾನಪರಿಷತ್‌ ಸದಸ್ಯ ಆರ್‌. ಪ್ರಸನ್ನಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಲಾಗಿದೆ. ನಾವು ಮಲೆನಾಡಿನವರು ನಮಗೆ ನೀರಿನ ಬಗ್ಗೆ ಹೆಚ್ಚಾಗಿ ಕಾಳಜಿ ಇರಲಿಲ್ಲ. ನಮ್ಮಲ್ಲಿ ಹೆಚ್ಚಾಗಿ ಮಳೆಯಾಗುವುದರಿಂದ ಎಲ್ಲಾ ನದಿಗಳು ತುಂಬಿಹರಿಯುತ್ತಿತ್ತು, ಹಾಗಾಗಿ ನಾವು ಚೆಕ್‌ ಡ್ಯಾಂ, ಅಂರ್ತಜಲ ಚೇತನ ಮಾಡುವ ಕೆಲಸಗಳನ್ನು ಮಾಡಿರಲಿಲ್ಲ, ಆದರೆ ಈಗ ಅದರ ಅವಶ್ಯಕತೆ ಹೆಚ್ಚಾಗಿದೆ. ನೀರನ್ನು ಉಳಿಸಬೇಕಿದೆ. ಶೇಖರಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀಡಬೇಕಿದೆ ಎಂದರು.

ಉಪಗ್ರಹ ಆಧಾರಿತ ಮಾಹಿತಿ:

ಆರ್ಟ್‌ ಆಫ್‌ ಲಿವಿಂಗ್‌ನ ಸಂಯೋಜಕ ನಾಗರಾಜ್‌ ಗಂಗೊಳ್ಳಿ ಅವರು ಮಾತನಾಡಿ, ಉಪಗ್ರಹಧಾರಿತ ಮಾಹಿತಿಯ ಆಧಾರದ ಮೇಲೆ ನೀರು ಇಂಗಿಸುವ ಸ್ಥಳಗಳನ್ನು ನಿಗ​ದಿಗೊಳಿಸಲಾಗಿದೆ. ವೈಜ್ಞಾನಿಕ ವಿಧಾನಗಳ ಮೂಲಕ ನೀರನ್ನು ಇಂಗಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ವ್ಯವಸ್ಥಿತ ಅನುಷ್ಠಾನದಿಂದಾಗಿ ಬರಿದಾಗಿರುವ ಕೊಳವೆ ಬಾವಿಗಳಲ್ಲಿ ಪುನಃ ನೀರಿನ ಸೆಳವು ಕಾಣಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್‌್ಕ, ವಿಧಾನ ಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌, ಉದ್ಯೋಗಖಾತ್ರಿ ಯೋಜನೆಯ ವ್ಯವಸ್ಥಾಪಕ ಅನಿರುಧ್‌ ಪಿ.ಶ್ರವಣ್‌, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಇ.ಕಾಂತೇಶ್‌, ಜಿಲ್ಲಾ​ಧಿಕಾರಿ ಕೆ.ಬಿ.ಶಿವಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅ​ಧಿಕಾರಿ ಎಂ.ಎಲ್‌. ವೈಶಾಲಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿ​ಗಳು, ಅ​ಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
 

click me!