ಸೀಮಂತದಿಂದ ಬಾದಾಮಿಯಲ್ಲಿ 12 ಮಂದಿಗೆ ಸೋಂಕು!

By Kannadaprabha NewsFirst Published May 7, 2020, 8:42 AM IST
Highlights

ಸೀಮಂತದಿಂದ ಬಾದಾಮಿಯಲ್ಲಿ 12 ಮಂದಿಗೆ ಸೋಂಕು!| ಬಾದಾಮಿಯ ಢಾಣಕಶಿರೂರದ 5 ತಿಂಗಳ ಗರ್ಭಿಣಿಗೆ ಸೋಂಕು| a3 ದಿನಗಳ ಹಿಂದೆ ನಡೆದಿದ್ದ ಸೀಮಂತ

ಹುಬ್ಬಳ್ಳಿ/ಬಾಗಲಕೋಟೆ(ಮೇ.07): ಸರಿಯಾಗಿ ಸರ್ಕಾರಿ ಬಸ್ಸು ಬಾರದ ಮಾಜಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರದ ಕುಗ್ರಾಮ ಢಾಣಕಶಿರೂರಲ್ಲೀಗ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದೆ. ಮೂರುಸಾವಿರ ಜನಸಂಖ್ಯೆ ದಾಟದ ಈ ಊರಲ್ಲಿ ಬರೊಬ್ಬರಿ 13 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಗ್ರಾಮದ ಗರ್ಭಿಣಿಯಿಂದ 12 ಮಂದಿಗೆ ಈ ಸೋಂಕು ಹರಡಿದೆ ಎಂದು ಹೇಳಲಾಗಿದ್ದು, ಸೋಂಕಿನ ಮೂಲ ಇನ್ನಷ್ಟೇ ಖಚಿತವಾಗಬೇಕಿದೆ. ಇತ್ತೀಚೆಗೆ ಈ ಗರ್ಭಿಣಿಗೆ ಉಡಿ ತುಂಬಿಸಿದ್ದ ಅಕ್ಕಪಕ್ಕದ ಮನೆಯವರು, ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವರಲ್ಲಿ ಸೋಂಕು ದೃಢಪಟ್ಟಿರುವುದು ಗ್ರಾಮದಲ್ಲಿ ತೀವ್ರ ಆತಂಕ ಮೂಡಿಸಿದೆ.

ಈ ಗ್ರಾಮ ಕೊರೋನಾ ಪೀಡಿತ ಪ್ರದೇಶಗಳಿಂದ ಬಹುದೂರವೇ ಇದೆ. ಗುಳೇ ಹೋದವರೂ ವಾಪಸ್‌ ಬಂದಿಲ್ಲ, ವಿದೇಶದಿಂದಲೂ ಮರಳಿದವರಿಲ್ಲ. ಆದಾಗ್ಯೂ ಇಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರುವುದು ಸ್ವತಃ ಬಾಗಲಕೋಟೆ ಮತ್ತು ಗದಗ ಜಿಲ್ಲಾಡಳಿತಗಳಿಗೆ ಯಕ್ಷಪ್ರಶ್ನೆಯಾಗಿದೆ. ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಐದು ತಿಂಗಳ ಗರ್ಭಿಣಿ (ಪಿ-607)ಯಲ್ಲಿ ಮೊದಲು ಸೋಂಕು ಪತ್ತೆಯಾಗಿತ್ತು. ಆ ಬಳಿಕ ಹತ್ತು ವರ್ಷದ ಬಾಲಕ ಸೇರಿ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಎಲ್ಲರೂ ಗರ್ಭಿಣಿಯ ಸಂಬಂಧಿಕರು ಮತ್ತು ಉಡಿತುಂಬಿಸಿದ್ದ ಅಕ್ಕಪಕ್ಕದ ಮನೆಯವರು. ಚೊಚ್ಚಲ ಗರ್ಭಿಣಿಯಾಗಿದ್ದರಿಂದ ಹಲವು ಮನೆಗೆ ಉಡಿ ತುಂಬಿಸಿಕೊಳ್ಳಲು ಹೋಗಿದ್ದರು. ಈ ಮೂಲಕ ಉಳಿದವರಿಗೂ ಸೋಂಕು ಹರಡಿದ ಆತಂಕ ಶುರುವಾಗಿದೆ.

ಈ ಗರ್ಭಿಣಿಗೆ ಯಾವುದೇ ಟ್ರಾವೆಲ್‌ ಹಿಸ್ಟರಿಯೂ ಇಲ್ಲ. ಊರುಬಿಟ್ಟು ಹೋದ ನಿದರ್ಶನವೂ ಇಲ್ಲ. ಈಕೆಯ ಸೀಮಂತ ಕಾರ್ಯಕ್ರಮದಲ್ಲಿ ಸೋಂಕಿತ ಪ್ರದೇಶವಾದ ಬಾಗಲಕೋಟೆಯಿಂದ ಬಂದಿದ್ದ ಇಬ್ಬರು ವೃದ್ಧೆಯರು ಮತ್ತು ತಬ್ಲೀಘಿಗಳ ಹಾವಳಿ ಎದುರಿಸಿದ ನವಲಗುಂದದಿಂದ ಬಂದಿದ್ದ ಒಬ್ಬ ಮಹಿಳೆ ಭಾಗವಹಿಸಿದ್ದರು. ಸೀಮಂತದ ಬಳಿಕ ಈಕೆ ತವರೂರು ಗದಗ ಜಿಲ್ಲೆ ರೋಣ ತಾಲೂಕು ಕೃಷ್ಣಾಪುರಕ್ಕೆ ಹೋಗಿ ಬಂದಿದ್ದಾಳೆ. ಆಗ ಹುಬ್ಬಳ್ಳಿ, ರೋಣದ ಖಾಸಗಿ ಆಸ್ಪತ್ರೆಗಳಿಗೆ ಚೆಕ್‌ಅಪ್‌ಗೆಂದು ಹೋಗಿದ್ದಳು ಅನ್ನುವುದಷ್ಟೇ ಈಗಿರುವ ಮಾಹಿತಿ.

ಗರ್ಭಿಣಿಯ ಮನೆ ಪಕ್ಕದ ವ್ಯಕ್ತಿಯೊಬ್ಬ (ಪಿ-691ನೇ ರೋಗಿ) ಮಹಾರಾಷ್ಟ್ರದ ಪುಣೆಯಲ್ಲಿ ಲಾರಿ ಚಾಲಕನಾಗಿದ್ದ. ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿದ್ದು, ಈತನಿಂದಲೇ ಸೋಂಕು ಹರಡಿರಬಹುದು ಎಂದು ಅನುಮಾನವಿದೆ.

click me!