ಧರ್ಮ ಆಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಆರ್‌ಎಸ್‌ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ವಕ್ಫ್‌ನಿಂದ ರೈತರ ಭೂಮಿ ಒತ್ತುವರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಔರಂಗಜೇಬ್ ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದ್ದವರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು (ಮಾ.24) : ದೇಶದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಅವಕಾಶವಿಲ್ಲ. ಮುಖ್ಯವಾಗಿ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಆರ್‌ಎಸ್‌ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿರುವ ಕುರಿತು ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಧರ್ಮ ಆಧಾರಿತ ಮೀಸಲಾತಿಯನ್ನು ನ್ಯಾಯಾಲಯ ಒಪ್ಪುವುದಿಲ್ಲ. ಈ ಹಿಂದೆ ಅನೇಕ ರಾಜ್ಯಗಳು ಧರ್ಮಾಧಾರಿತ ಮೀಸಲಾತಿ ತಂದಾಗ ನ್ಯಾಯಾಲಯಗಳು ತಿರಸ್ಕರಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದರು.
ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಈ ಮೀಸಲಾತಿ ಘೋಷಿಸುತ್ತವೆ. ನಂತರ ಅದು ಬದಿಗೆ ಸರಿಯುತ್ತದೆ. ಇಂತಹ ರಾಜಕೀಯ ನಡೆಗಳು ಅನುಸರಿಸುವವರು ಸಂವಿಧಾನ ರಚನೆಕಾರರ ಉದ್ದೇಶಕ್ಕೆ ವಿರುದ್ಧವಾಗಿ ಹೋಗುತ್ತಿದ್ದಾರೆ ಎಂದೇ ಅರ್ಥ. ಈ ವಿಚಾರ ಮತ್ತು ಜಾತಿ ಜಗಣತಿ ಸಂಬಂಧ ಸಂಘವು ಅನೇಕ ಬಾರಿ ತನ್ನ ಅಭಿಪ್ರಾಯ ಹೇಳಿದ್ದು, ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ವಕ್ಫ್ ಕಾಯ್ದೆ ರದ್ದಿಗೆ ಹಿಂದೂ ಸಂಘಟನೆಗಳ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿ, ವಕ್ಫ್‌ನಿಂದ ರೈತರ ಭೂಮಿ ಒತ್ತುವರಿ ಮಾಡಿರುವುದರಿಂದ ಅನೇಕ ರೈತರು ಸಂತ್ರಸ್ತರಾಗಿದ್ದಾರೆ. ಕೇಂದ್ರ ಸರ್ಕಾರ ಈ ಸಮಸ್ಯೆ ಪರಿಹಾರಕ್ಕಾಗಿ ಕೆಲಸ ಮಾಡುತ್ತಿದೆ. ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು ಎಂದರು.
ಇದನ್ನೂ ಓದಿ: 'ಬುರ್ಖಾ ಧರಿಸಿದ್ರೆ ಸತ್ತ ಮೇಲೆ ಶವಕ್ಕೆ ಏನೂ ಆಗೋಲ್ಲ..' ಮಕ್ಕಳಿಗೆ ಶಾಲೆಯಲ್ಲೇ ವ್ಯವಸ್ಥಿತವಾಗಿ ಬ್ರೈನ್ ವಾಶ್? ವಿಡಿಯೋ ವೈರಲ್!
ಸಂಸ್ಕೃತಿ ವಿರುದ್ಧ ಇದ್ದವರು ಐಕಾನ್ ಅಲ್ಲ: ಔರಂಗಜೇಬ್ ಸಮಾಧಿ ತೆರವು ವಿವಾದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊಸಬಾಳೆ, ದೇಹಲಿಯಲ್ಲಿ ಔರಂಗಜೇಬ್ ರಸ್ತೆ ಹೆಸರು ಬದಲಿಸಲಾಗಿದೆ. ಭಾರತದಲ್ಲಿ ನಮ್ಮ ಸಂಸ್ಕೃತಿ ವಿರುದ್ಧವಾಗಿದ್ದವರನ್ನು ಐಕಾನ್ ಆಗಿ ನೋಡುವುದು ಹೇಗೆ? ಸಮಾಜ ಮತ್ತು ಈ ದೇಶದ ಒಳಿತಿಗಾಗಿ ಆದರ್ಶವಾಗಿರುವವರು ನಮ್ಮ ಆದರ್ಶವಾಗಿರಬೇಕು. ಅಸಹಿಷ್ಣುತೆಗೆ ಹೆಸರಾಗಿರುವ ಮತ್ತು ಈ ದೇಶದ ನೀತಿ ಧಿಕ್ಕರಿಸಿದವರು ಆದರ್ಶವಾಗಿರಬಾರದು. ಇದು ಮತೀಯ ದೃಷ್ಟಿಕೋನದಿಂದಲ್ಲ. ಔರಂಗಜೇಬ್ ಈ ದೇಶದ ವಿಚಾರದಲ್ಲಿ ನಡೆದುಕೊಂಡು ರೀತಿಗಾಗಿ ವಿರೋಧ ವ್ಯಕ್ತವಾಗುತ್ತಿದೆ. ನಾವು 1947ರಲ್ಲಿ ರಾಜಕೀಯ ಸ್ವಾತಂತ್ರ್ಯ ಪಡೆದರೂ ಇಂದಿಗೂ ಮಾನಸಿಕ ಗುಲಾಮಗಿರಿ ಇದೆ. ಈ ಗುಲಾಮಗಿರಿ ಮಾನಸಿಕತೆಯಿಂದ ಮುಕ್ತವಾಗುವುದು ಬಹಳ ಅಗತ್ಯವಾಗಿದೆ ಎಂದರು.
ಕೇಂದ್ರದಲ್ಲಿ ಉತ್ತಮ ಆಡಳಿತ: ಕೇಂದ್ರ ಸರ್ಕಾರದಲ್ಲಿ ಆಡಳಿತ ಉತ್ತಮವಾಗಿ ನಡೆಯುತ್ತಿದೆ. ಹೀಗಾಗಿ ಸಂಘವು ಸರ್ಕಾರಕ್ಕೆ ಯಾವುದೇ ಸಲಹೆ ನೀಡಲ್ಲ. ಪಕ್ಷದಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಅದನ್ನು ವ್ಯಕ್ತಪಡಿಸುವ ವ್ಯವಸ್ಥೆ ಬೇರೆಯೇ ಇದೆ. ಜನಹಿತದ ವಿಚಾರಗಳ ಸಂಬಂಧ ಅಗತ್ಯ ಬಿದ್ದರೆ ಸರ್ಕಾರದ ಜತೆಗೆ ಚರ್ಚಿಸುತ್ತೇವೆ. ಈಗ ಸರ್ಕಾರದ ಜತೆಗೆ ಮಾತನಾಡುವ ಅಗತ್ಯವಿಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಸರ್ಕಾರದ ನಡೆ ಸರಿಯಾಗಿಯೇ ಇದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.
ಆರ್‌ಎಸ್‌ಎಸ್‌ಗೆ 100 ವರ್ಷ: ಸಂಘದ ಕಾರ್ಯ ವಿಸ್ತರಣೆ,
ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ಶತಾಬ್ದಿ ವರ್ಷದಲ್ಲಿ ಸಂಘದ ಕಾರ್ಯ ವಿಸ್ತರಣೆ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಪುನರ್ ಜಾಗೃತಿಯ ಗುರಿ ಹೊಂದಲಾಗಿದೆ ಎಂದು ಆರ್‌ಎಸ್‌ಎಸ್‌ನ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ. 2025ರ ವಿಜಯದಶಮಿ ದಿನ ಸಂಘವು ನೂರು ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಈ ಒಂದು ವರ್ಷಗಳ ಕಾಲ ಸಂಘವು ತನ್ನ ಕೆಲಸದ ವಿಸ್ತರಣೆ ಮತ್ತು ಬಲಗೊಳಿಸುವಿಕೆಯತ್ತ ದೃಷ್ಟಿ ಕೇಂದ್ರೀಕರಿಸಲಿದೆ ಎಂದರು
ಇದನ್ನೂ ಓದಿ: ಹನಿಟ್ರ್ಯಾಪ್, ಮುಸ್ಲಿಂ ಮೀಸಲು ಬಗ್ಗೆ ಅಸೆಂಬ್ಲಿಯಲ್ಲಿ ಗದ್ದಲ; 18 ಶಾಸಕರಿಗೆ ಸಸ್ಪೆಂಡ್, ಗಲಾಟೆ ಶುರುವಾಗಿದ್ದು ಹೇಗೆ?
ಸಚಿವರ ಪಿಎಗಳ ನೇಮಕದಲ್ಲಿ ಸಂಘದ ಪಾತ್ರವಿಲ್ಲ: ಹೊಸಬಾಳೆ
ಹಿಂದಿನ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಸಚಿವರಿಗೆ ಆರ್‌ಎಸ್‌ಎಸ್ ಸ್ವಯಂ ಸೇವಕರನ್ನು ಆಪ್ತ ಸಹಾಯಕರನ್ನಾಗಿ (ಪಿಎ) ನೇಮಿಸುವಂತೆ ನಾವು ಯಾರಿಗೂ ಹೇಳಿಲ್ಲ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಸ್ವಯಂ ಸೇವಕರು ಈ ಸಮಾಜದ ನಾಗರಿಕರು. ಅವರ ಅರ್ಹತೆ, ಸಾಮರ್ಥ್ಯ, ಅನುಭವದ ಆಧಾರದ ಮೇಲೆ ನೇಮಕ ಆಗಿರಬಹುದು. ಒಂದು ವೇಳೆ ಅಕ್ರಮ ನೇಮಕಾತಿ ಆಗಿದ್ದರೆ ಪ್ರಶ್ನಿಸುವುದರಲ್ಲಿ ಅರ್ಥವಿದೆ. ಇಲ್ಲಿ ಹಾಗೆ ಆಗಿಲ್ಲ.