
ಶಿವಮೊಗ್ಗ/ಬೆಂಗಳೂರು (ಫೆ.20): ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬ ಪ್ರತಿಷ್ಠಿತ ಕಂಪನಿಯ ಫಂಡ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೆಚ್.ಬಿ.ಆರ್ ಲೇಔಟ್‌ನಲ್ಲಿ 'ರಾಯ್ ಎಜುಕೇಶನ್ ಟ್ರಸ್ಟ್' ನಡೆಸುತ್ತಿರುವ ತೀರ್ಥಹಳ್ಳಿ ಮೂಲದ ಯಶೋಧ ಎಂಬುವವರಿಗೆ ಅಮ್ರಪಾಲಿ ಸುರೇಶ್ ವಂಚಿಸಿದ್ದಾನೆ. ಪ್ರತಿಷ್ಠಿತ ಅದಾನಿ ಗ್ರೂಪ್‌ನಿಂದ 100 ಕೋಟಿ ರೂಪಾಯಿ ಸಿಎಸ್ಆರ್ (CSR) ಫಂಡ್ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, ಅದಕ್ಕಾಗಿ ಹಂತ ಹಂತವಾಗಿ ಸುಮಾರು 35 ಲಕ್ಷ ರೂಪಾಯಿ ಹಣವನ್ನು ಪಡದಿದ್ದಾನೆ. ಬ್ಯಾಂಕ್ ಮೂಲಕ 20 ಲಕ್ಷ ರೂ. ಹಾಗೂ RTGS ಮೂಲಕ ಉಳಿದ ಹಣವನ್ನು ಪಡೆದು ಈಗ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಅಮ್ರಪಾಲಿ ಸುರೇಶ್ ತೀರ್ಥಹಳ್ಳಿ ಮೂಲದವನಾಗಿದ್ದು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಅತ್ಯಂತ ಆಪ್ತ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಇದೇ ಪ್ರಭಾವ ಬಳಸಿ ಯಶೋಧ ಅವರಿಗೆ ಹೈದರಾಬಾದ್ ಮೂಲದ ಅತುಲ್ ಕುಮಾರ್ ಶರ್ಮಾ ಹಾಗೂ ವೆಂಕಟರಮಣ ಭಟ್ ಎಂಬುವವರನ್ನು ಪರಿಚಯಿಸಿದ್ದ. ಅಷ್ಟೇ ಅಲ್ಲದೆ, ಶಿವಾಜಿನಗರದ ಬಟ್ಟೆ ವ್ಯಾಪಾರಿಯೊಬ್ಬನನ್ನು ಕಂಪನಿಯ ಪ್ರತಿನಿಧಿ ಎಂದು ಸುಳ್ಳು ಹೇಳಿ ಪರಿಚಯಿಸಿ ಸಂಚು ರೂಪಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಆರು ಮಂದಿಯ ವಿರುದ್ಧ FIR ದಾಖಲು
ವಂಚನೆಗೊಳಗಾದ ಯಶೋಧ ಅವರು ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಬಿಎನ್ಎಸ್ ಕಾಯಿದೆ 2023ರ ಕಲಂ 3(5) ಹಾಗೂ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಅಮ್ರಪಾಲಿ ಸುರೇಶ್ ಪ್ರಮುಖ ಆರೋಪಿ (A1) ಆಗಿದ್ದು, ಒಟ್ಟು ಆರು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ಸದ್ಯ ಬಂಧನ ಭೀತಿಯಿಂದ ಅಮ್ರಪಾಲಿ ಸುರೇಶ್ ತಲೆಮರೆಸಿಕೊಂಡಿದ್ದು, ಪೊಲೀಸರು ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸ್ ಇಲಾಖೆ ವಿರುದ್ಧ ದೂರುದಾರರ ಆಕ್ರೋಶ
ಪ್ರಕರಣ ದಾಖಲಾಗಿ ದಿನಗಳಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರುದಾರೆ ಯಶೋಧ ಪತಿ ರಾಜು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು ಪೊಲೀಸರು ಭಯೋತ್ಪಾದಕರನ್ನೇ ಹಿಡಿಯುತ್ತಾರೆ, ಆದರೆ ಕಿಮ್ಮನೆ ರತ್ನಾಕರ್ ಆಪ್ತ ಎಂಬ ಕಾರಣಕ್ಕೆ ಅಮ್ರಪಾಲಿ ಸುರೇಶ್‌ನನ್ನು ಇದುವರೆಗೂ ಬಂಧಿಸಿಲ್ಲ. ದೂರು ನೀಡಿ ದಿನಗಳೇ ಕಳೆದಿದ್ದರೂ ಡಿಸಿಪಿ ವಿಕ್ರಂ ಅಮಟೆ ಹಾಗೂ ಹೆಣ್ಣೂರು ಇನ್ಸ್‌ಪೆಕ್ಟರ್ ದೀಪಕ್ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ