
ಬೆಂಗಳೂರು (ಸೆ.27) : ಎಚ್‌ಎಎಲ್ ಸಂಸ್ಥೆಯು ಒಂದೇ ಸೂರಿನಡಿ ಸಂಪೂರ್ಣ ರಾಕೆಟ್ ಎಂಜಿನ್ ಉತ್ಪಾದಿಸಲು ಬೆಂಗಳೂರಿನಲ್ಲಿ ಸ್ಥಾಪಿಸಿರುವ 208 ಕೋಟಿ ರು. ವೆಚ್ಚ ‘ಇಂಟಿಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿಯನ್ನು’ (ಐಸಿಎಂಎಫ್) ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದಾರೆ. ನಾಡಹಬ್ಬ ದಸರಾಗೆ ಚಾಲನೆ ನೀಡುವ ಸಲುವಾಗಿ ರಾಜ್ಯಕ್ಕೆ ಆಗಮಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಸಂಜೆ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದು, ಮಂಗಳವಾರ ನಗರದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಹುಬ್ಬಳ್ಳಿ ಪಾಲಿಕೆಯಿಂದ ರಾಷ್ಟ್ರಪತಿ ದ್ರೌಪದಿಗೆ ಪೌರಸನ್ಮಾನ
ಜು.10 ರಂದು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬೆಂಗಳೂರಿಗೆ ಆಗಮಿಸಿದ್ದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಗಳಾದ ಬಳಿಕ ಮೊದಲ ಬಾರಿಗೆ ರಾಜಧಾನಿಗೆ ಕಾಲಿಡುತ್ತಿದ್ದಾರೆ. ಸೋಮವಾರ ಸಂಜೆ ನಗರಕ್ಕೆ ಆಗಮಿಸಿದ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸಂಸದರು ಮತ್ತು ಸಚಿವರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರ ಮಾಡಿಕೊಂಡರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೇನೆಯಿಂದ ಗೌರವ ವಂದನೆ ಸಲ್ಲಿಸಲಾಯಿತು.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ:
ದ್ರೌಪದಿ ಮುರ್ಮು ಅವರು ಮಂಗಳವಾರ ಬೆಳಗ್ಗೆ 10 ಗಂಟೆಗೆ ಎಚ್‌ಎಎಲ್ ವತಿಯಿಂದ ಇಸ್ರೋಗಾಗಿ ಸ್ಥಾಪಿಸಿರುವ ಐಸಿಎಂಎಫ್ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಸ್ವದೇಶಿ ರಾಕೆಟ್‌ಗಳಿಗಾಗಿ ಕ್ರಯೋಜೆನಿಕ್ (ಸಿಇ-20), ಸೆಮಿ ಕ್ರಯೋಜೆನಿಕ್ (ಎಸ್‌ಇ-2000) ಎಂಜಿನ್‌ಗಳನ್ನು ಇಲ್ಲಿ ಉತ್ಪಾದಿಸಲಿದ್ದು, 2023ರ ಮಾಚ್‌ರ್ ವೇಳೆಗೆ ಮಾಡೆಲ್‌ಗಳನ್ನು ತಯಾರಿಸುವುದಾಗಿ ಎಚ್‌ಎಎಲ್ ವಿಶ್ವಾಸ ವ್ಯಕ್ತಪಡಿಸಿದೆ.
ಇದೇ ವೇಳೆ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಯ ಪ್ರಯೋಗಾಲಯಕ್ಕೆ ವರ್ಚುಯಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ 3.50 ಗಂಟೆಗೆ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವನ್ನು ಉದ್ಘಾಟಿಸಲಿದ್ದು, ಸಂಜೆ 7 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಗರೀಕ ಸನ್ಮಾನ ಸ್ವೀಕರಿಸಲಿದ್ದಾರೆ. ಸೋಮವಾರ ರಾಜ್ಯಕ್ಕೆ ಆಗಮಿಸಿದ್ದ ಅವರು ಸೋಮವಾರ ಮೈಸೂರಿನಲ್ಲಿ ನಾಡ ಹಬ್ಬ ದಸರಾಗೆ ಚಾಲನೆ ನೀಡಿದರು. ಬಳಿಕ ಹುಬ್ಬಳ್ಳಿಯಲ್ಲಿ ಪೌರ ಸನ್ಮಾನ ಸ್ವೀಕರಿಸಿ, ಧಾರವಾಡ ತಡಸಿನಕೊಪ್ಪದ ಐಐಐಟಿ ಉದ್ಘಾಟನೆ ನಡೆಸಿ ಸಂಜೆ ಬೆಂಗಳೂರಿಗೆ ಆಗಮಿಸಿದ್ದರು.
ರಾತ್ರೋರಾತ್ರಿ ರಾಜ್ಯ ಪೊಲೀಸರ ಮೆಗಾ ಆಪರೇಷನ್, PFI ಗೆ ಮತ್ತೊಂದು ಶಾಕ್!
ವಿಧಾನಸೌಧದ ಕಚೇರಿಗಳಿಗೆ ರಜೆ:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ವಿಧಾನಸೌಧದ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಚೇರಿಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ