ಪಿಎಸ್‌ಐ ಅಕ್ರಮ ನೇಮಕಾತಿ: ಸಿಸಿ ಕ್ಯಾಮೆರಾ ಆಫ್‌ ಮಾಡಿ ಒಎಂಆರ್‌ ಶೀಟ್‌ ತಿದ್ದುಪಡಿ!

By Kannadaprabha News  |  First Published Jun 17, 2022, 5:44 AM IST

*  ನಸುಕಿನ 5ರಿಂದ 7ರವರೆಗೆ ಸಿಸಿ ಕ್ಯಾಮರಾ ಬಂದ್‌
*  ನೇಮಕಾತಿ ಡಿವೈಎಸ್ಪಿ ಸೇರಿ ನಾಲ್ವದಿಂದ ತಿದ್ದುಪಡಿ
*  ಸಿಐಡಿ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು
 


ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಜೂ.17):  ತಮಗೆ ಹಣ ಸಂದಾಯ ಮಾಡಿದ್ದ ಪಿಎಸ್‌ಐ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ಸ್ಟ್ರಾಂಗ್‌ ರೂಮ್‌ನ ಸಿಸಿಟಿವಿ ಕ್ಯಾಮೆರಾಗಳನ್ನು ಕಾರ್ಯಸ್ಥಗಿತಗೊಳಿಸಿ ಮುಂಜಾನೆ 5 ರಿಂದ 7 ಗಂಟೆ ಅವಧಿಯಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಸೇರಿ ನಾಲ್ವರು ತಿದ್ದಿದ್ದರು ಎಂಬ ಸಂಗತಿ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ನಡೆಸಿದ ತನಿಖೆಯಲ್ಲಿ ಪತ್ತೆಯಾಗಿದೆ. ಈ ಮೂಲಕ 545 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣ ಸಂಬಂಧ ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಅಭ್ಯರ್ಥಿಗಳ ಒಎಂಆರ್‌ಶೀಟ್‌ಗಳು ಹೇಗೆ ತಿದ್ದುಪಡಿಯಾಗಿದ್ದವು ಎಂಬ ‘ರಹಸ್ಯ’ ಕೊನೆಗೂ ಬಯಲಾಗಿದೆ.

Tap to resize

Latest Videos

ಪ್ರಕರಣದ ಸಂಬಂಧ ಈಗಾಗಲೇ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌, ಎಫ್‌ಡಿಎ ಹರ್ಷ, ಆರ್‌ಎಸ್‌ಐ ಶ್ರೀಧರ್‌ ಹಾಗೂ ಆರ್‌ಎಚ್‌ಸಿ ಶ್ರೀನಿವಾಸ್‌ ಬಂಧಿತರಾಗಿದ್ದು, ಆ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮೃತ್‌ಪಾಲ್‌ ಅವರನ್ನು ವಿಚಾರಣೆ ನಡೆಸಿ ಸಿಐಡಿ ಹೇಳಿಕೆಯನ್ನು ಸಹ ದಾಖಲಿಸಿಕೊಂಡಿದೆ.

PSI Recruitment Scam; ಸಚಿವ ಅಶ್ವಥ್ ನಾರಾಯಣ್ ಸ್ವಗ್ರಾಮದ ಸಬ್ ಇನ್‌ಸ್ಪೆಕ್ಟರ್ ಅರೆಸ್ಟ್

ಪರೀಕ್ಷಾ ಕೇಂದ್ರದಿಂದ ಸೀಲ್‌ ಮಾಡಿದ ಕವರ್‌ನಲ್ಲಿ ಬೆಂಗಳೂರಿನ ನೇಮಕಾತಿ ವಿಭಾಗಕ್ಕೆ ಉತ್ತರ ಪತ್ರಿಕೆಗಳ ರವಾನೆಯಾಗಿದ್ದವು. ತಮಗೆ ಹಣ ಕೊಟ್ಟಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದ ಕೇಂದ್ರಗಳ ಬಗ್ಗೆ ತಿಳಿದಿದ್ದ ಆರೋಪಿತ ಅಧಿಕಾರಿಗಳು, ಆ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಖಾಲಿ ಸ್ಥಾನ ಭರ್ತಿ ಮಾಡಿರುವುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಉಸ್ತುವಾರಿ ಶಾಂತಕುಮಾರ್‌ ತಂಡದಿಂದಲೇ ಕೃತ್ಯ:

ಪಿಎಸ್‌ಐ ನೇಮಕಾತಿ ಸಂಬಂಧ 2021ರ ಅಕ್ಟೋಬರ್‌ 3 ರಂದು ಬೆಂಗಳೂರು ಸೇರಿ ರಾಜ್ಯದ ಏಳು ಕಡೆ 93 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆ ನಂತರ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿ ಆವರಣದ ಆನೆಕ್ಸ್‌ ಮೊದಲ ಕಟ್ಟಡದಲ್ಲಿನ ನೇಮಕಾತಿ ವಿಭಾಗದ ಸ್ಟ್ರಾಂಗ್‌ ರೂಮ್‌ಗೆ ಕವರ್‌ನಲ್ಲಿ ಒಎಂಆರ್‌ ಶೀಟ್‌ಗಳನ್ನು ಇಟ್ಟು ಪೇಸ್ಟ್‌ನಿಂದ ಅಂಟಿಸಿ ಕಳುಹಿಸಿದ್ದರು. ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌, ಹರ್ಷ, ಶ್ರೀಧರ್‌ ಹಾಗೂ ಶ್ರೀನಿವಾಸ್‌ ಅವರು ಆರಂಭದಿಂದಲೂ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಸ್ಟ್ರಾಂಗ್‌ ರೂಮ್‌ನ ಬೀಗ ಕೀ ಕೂಡ ಶಾಂತ ಕುಮಾರ್‌ ಬಳಿಯೇ ಇತ್ತು. ಇನ್ನು ಸ್ಟ್ರಾಂಗ್‌ ರೂಮ್‌ಗೆ ‘ಥಂಬಿಂಗ್‌’ ಮಾಡಿ ಒಳ ಪ್ರವೇಶಿಸಲು ಈ ನಾಲ್ವರಿಗೂ ಅವಕಾಶ ಇತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

ಹತ್ತು ವರ್ಷಗಳ ಕಾಲ ನೇಮಕಾತಿ ವಿಭಾಗದಲ್ಲೇ ಕಾರ್ಯನಿರ್ವಹಿಸಿದ್ದ ಶಾಂತಕುಮಾರ್‌, ಕಂಪ್ಯೂಟರ್‌ ಬಳಕೆಯಲ್ಲಿ ಪಳಗಿದ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. ಈ ಅನುಭವದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅವರಿಗೆ ಹೆಚ್ಚಿನ ಹೊಣೆ ನೀಡಲಾಗಿತ್ತು. ಇನ್ನುಳಿದ ಮೂವರು ಡಿವೈಎಸ್ಪಿ ಪರಾಮಾಪ್ತರು ಎಂದು ಮೂಲಗಳು ತಿಳಿಸಿವೆ.

ತಿದ್ದುಪಡಿ ಹೇಗೆ?:

ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳ ಜತೆ ಡಿವೈಎಸ್ಪಿ ಶಾಂತಕುಮಾರ್‌ ತಂಡ ಡೀಲ್‌ ಕುದುರಿಸಿತ್ತು. ತಮ್ಮ ಸಂಪರ್ಕದಲ್ಲಿದ್ದ ಅಭ್ಯರ್ಥಿಗಳು ಯಾವ್ಯಾವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ, ಅವರ ರೋಲ್‌ ನಂಬರ್‌ ಯಾವುದು ಎಂಬ ಮಾಹಿತಿ ಹೊಂದಿದ್ದರು. ತಮ್ಮ ಬಳಿ ಸ್ಟ್ರಾಂಗ್‌ ರೂಮ್‌ಗೆ ಬೀಗ ಕೀ ಇಟ್ಟುಕೊಂಡಿದ್ದ ಶಾಂತಕುಮಾರ್‌, ಬೆಳಗ್ಗೆ ಸಿಐಡಿಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿಗೆ ಬರುವ ಮೊದಲೇ ಮುಂಜಾನೆ 5 ರಿಂದ 7 ಗಂಟೆ ಅವಧಿಯೊಳಗೆ ಆರೋಪಿಗಳು ಒಎಂಆರ್‌ ಶೀಟು ತಿದ್ದಲು ಸಂಚು ರೂಪಿಸಿದ್ದಾರೆ.

PSI Recruitment Scam: ಪ್ರಭಾವಿ ರಾಜಕಾರಣಿಗಳ ಕೈವಾಡ? ತಳಮಳ ಶುರು!

ಪೂರ್ವ ನಿಗದಿಯಂತೆ ಮುಂಜಾನೆ ಕಚೇರಿಗೆ ಶಾಂತಕುಮಾರ್‌, ಶ್ರೀಧರ್‌, ಶ್ರೀನಿವಾಸ್‌ ಹಾಗೂ ಹರ್ಷ ಬಂದಿದ್ದಾರೆ. ಬಳಿಕ ಸೆಲ್ಲರ್‌ನಲ್ಲಿರುವ ಸ್ಟ್ರಾಂಗ್‌ ರೂಮ್‌ಗೆ ಶಾಂತಕುಮಾರ್‌ ಮತ್ತು ಹರ್ಷ ತೆರಳಿದರೆ, ಇನ್ನುಳಿದ ಶ್ರೀಧರ್‌ ಮತ್ತು ಶ್ರೀನಿವಾಸ್‌ ಸೆಲ್ಲರ್‌ ಹೊರಗಡೆ ನಿಂತಿರುತ್ತಿದ್ದರು. ಸ್ಟ್ರಾಂಗ್‌ ರೂಮ್‌ನೊಳಗೆ ಹೋದ ಶಾಂತಕುಮಾರ್‌ ಹಾಗೂ ಹರ್ಷ, ಒಎಂಆರ್‌ಶೀಟ್‌ ತುಂಬಿದ್ದ ಕವರ್‌ಗಳನ್ನು ತೆಗೆದು ಅಂಟಿಸಿದ್ದ ಜಾಗದಲ್ಲಿ ಅಲ್ಪ ತೆರೆದು ಬ್ಲೇಡ್‌ನಿಂದ ಕೊಯ್ದಿದ್ದಾರೆ. ನಂತರ ತಮಗೆ ಬೇಕಾದ ಅಭ್ಯರ್ಥಿಯ ಒಎಂಆರ್‌ಶೀಟ್‌ ತೆಗೆದು ಉತ್ತರ ತುಂಬಿ ಮತ್ತೆ ಕವರ್‌ನೊಳಗೆ ಇಟ್ಟು ಅಂಟಿಸಿದ್ದಾರೆ. ಮರುದಿನ ಮೌಲ್ಯಮಾಪನಕ್ಕೆ ಡಿಜಿ ಕಚೇರಿಯ ಅಧಿಕಾರಿಗಳು ಬಂದಾಗ ಕವರ್‌ ಅನ್ನು ಅಂಟಿಸಿದ ಜಾಗಕ್ಕಿಂತ ಸ್ವಲ್ಪ ಕತ್ತರಿಯಿಂದ ಕತ್ತರಿಸಿದ್ದಾರೆ. ಇದರಿಂದ ಒಎಂಆರ್‌ ಶೀಟ್‌ಗಳಿದ್ದ ಕವರ್‌ಗಳು ಮೊದಲೇ ಓಪನ್‌ ಆಗಿದ್ದವು ಎಂಬುದು ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳು ಬುಕ್‌

ಪಿಎಸ್‌ಐ ನೇಮಕಾತಿ ವೇಳೆ ಪರೀಕ್ಷಾ ಕೇಂದ್ರಗಳ ಆಯ್ಕೆಯಲ್ಲಿ ಸಹ ಅಕ್ರಮ ನಡೆದಿದೆ ಎಂದು ಸಿಐಡಿ ಶಂಕಿಸಿದೆ. ತಮಗೆ ಹಣ ಲಕ್ಷ ಲಕ್ಷ ಹಣ ಸಂದಾಯ ಮಾಡಿದ್ದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಗಳನ್ನು ನೇಮಕಾತಿ ವಿಭಾಗದ ಅಧಿಕಾರಿಗಳು ಗುರುತಿಸಿದ್ದರು ಎಂಬ ಆರೋಪ ಬಂದಿದೆ.
 

click me!