* ಡಿ.22ರಿಂದ ಜ.2ರವರೆಗೆ ಜನದಟ್ಟಣೆ ತಡೆಯಿರಿ
* ಪ್ರಾರ್ಥನಾ ಸ್ಥಳಕ್ಕೆ 50% ಮಾತ್ರ ಅವಕಾಶ ನೀಡಿ
* ಡಿ.30-ಜ.2ರವರೆಗೆ ನಗರಗಳಲ್ಲಿ ನೈಟ್ ಕರ್ಫ್ಯೂ
ಜಯಪ್ರಕಾಶ್ ಬಿರಾದಾರ್
ಬೆಂಗಳೂರು(ಡಿ.17): ಬೆಂಗಳೂರು(Bengaluru) ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ನೈಟ್ ಕರ್ಫ್ಯೂ(Night Curfew), ಅಗತ್ಯವಿರುವ ಕಡೆ 144 ಸೆಕ್ಷನ್ ಜಾರಿಗೊಳಿಸಬೇಕು. ಚರ್ಚ್ ಧಾರ್ಮಿಕ ಸ್ಥಳಗಳಲ್ಲಿ ಜನ ಸೇರುವುದಕ್ಕೆ ನಿರ್ಬಂಧ ವಿಧಿಸಬೇಕು. ಹೊಸ ವರ್ಷಾಚರಣೆಗೆ ಯಾವುದೇ ವಿಶೇಷ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಬಾರದು.
ಒಮಿಕ್ರೋನ್(Omicron) ಆತಂಕ ಹಿನ್ನೆಲೆಯಲ್ಲಿ ಕ್ರಿಸ್‌ಮಸ್(Christmas) ಹಾಗೂ ಹೊಸ ವರ್ಷಾಚರಣೆ(New Year Celebration) ವೇಳೆ ಜನ ಮಿತಿ ಮೀರಿ ಗುಂಪುಗೂಡುವುದನ್ನು ತಡೆಗಟ್ಟಲು ಕೊರೋನಾ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ನೀಡಿರುವ ಸಲಹೆಗಳಿವು.
Covid In Karnataka: ಅರ್ಧ ಗಂಟೆಯಲ್ಲೆ ಕೊರೋನಾ ವರದಿ, ಬಂದಿದೆ ಹೊಸ ಟೆಸ್ಟ್!
ಹೊಸ ವರ್ಷಾಚರಣೆ ನಿಯಂತ್ರಣ ಮೀರಿ ಹೋಗುವುದನ್ನು ತಪ್ಪಿಸಲು ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಡಿ.30ರಿಂದ ಜನವರಿ 2ರ ಬೆಳಿಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿಗೊಳಿಸಬೇಕು. ಅಗತ್ಯವಿರುವ ಕಡೆಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಬೇಕು. ಇನ್ನು ಕ್ರಿಸ್‌ಮಸ್ ಆಚರಣೆಗೂ ಕೆಲ ಮಿತಿಗಳನ್ನು ವಿಧಿಸಲು ಶಿಫಾರಸು ಮಾಡಲಾಗಿದ್ದು, ಡಿ.22ರಿಂದ ಜ.2ವರೆಗೂ ದೇವಸ್ಥಾನ, ಚರ್ಚ್(Church), ಮಸೀದಿಗಳಲ್ಲಿ(Masjid) ಶೇ.50 ರಷ್ಟು ಜನಮಿತಿ ಜಾರಿಗೊಳಿಸಲು ಸೂಚಿಸಲಾಗಿದೆ.
ಇನ್ನು ಡಿ.31ರ ಮಧ್ಯರಾತ್ರಿ ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರಿನ ಎಂಜಿ ರಸ್ತೆ(MG Road), ಬ್ರಿಗೇಡ್ ರಸ್ತೆ(Brigade Road) ಸೇರಿದಂತೆ ಇತರೆ ನಗರಗಳ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರು ಸೇರದಂತೆ ಕ್ರಮಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳು, ಉದ್ಯಾನ, ಮಾಲ್‌ಗಳು, ಬಾರ್, ಪಬ್ ಸೇರಿದಂತೆ ಯಾವುದೇ ವಾಣಿಜ್ಯ ಮಳಿಗೆಗಳೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳದೆ ಎಂದಿನಂತೆ ಕಾರ್ಯನಿರ್ವಹಿಸುವಂತೆ ಎಚ್ಚರವಹಿಸಬೇಕು. ಒಟ್ಟಾರೆ ಸಾರ್ವಜನಿಕರು ಮನೆಯಲ್ಲಿಯೇ ಹೊಸ ವರ್ಷ ಆಚರಣೆಗೆ ಕ್ರಮಕೈಗೊಳ್ಳಬೇಕು ಎಂದು ತಜ್ಞರು ಎಂದು ಸಲಹೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿವೆ.
ಹೊಸ ವರ್ಷ ಮತ್ತು ಕ್ರಿಸ್‌ಮಸ್ ಆಚರಣೆಗೆ ವಿಷಯಕ್ಕೆ ಸಂಬಂಧಿಸಿದಂತೆ ಡಿ.15ರಂದು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಈ ಶಿಫಾರಸು ಮಾಡಲು ನಿರ್ಧರಿಸಿತು. ಅದರಂತೆ ಗುರುವಾರ ರಾಜ್ಯ ಸರ್ಕಾರಕ್ಕೆ ಸದರಿ ಶಿಫಾರಸುಗಳನ್ನು ಮಾಡಲಾಗಿದೆ ಎಂದು ಈ ಮೂಲಗಳು ಹೇಳಿವೆ.
ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ವಾಣಿಜ್ಯ ಚಟುವಟಿಕೆಗಳಿಗೆ, ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಿಗೆ ವಿಶೇಷ ಮಾರ್ಗಸೂಚಿ ರಚಿಸಿ ವಿವಿಧ ನಿಯಮ ಅಳವಡಿಸಿ ಕಡ್ಡಾಯವಾಗಿ ಪಾಲಿಸಲು ಕ್ರಮಕೈಗೊಳ್ಳಬೇಕು. ನಿಯಮ ಪಾಲಿಸದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಶೀಘ್ರದಲ್ಲಿಯೇ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಮಾರ್ಗಸೂಚಿ(Guidelines) ಹೊರಬೀಳಲಿದೆ.
Omicron In Bangalore: ಸಮುದಾಯಕ್ಕೆ ಒಮಿಕ್ರೋನ್? ಪತ್ತೆಯಾದ್ರೆ ಕ್ರಿಸ್‌ಮಸ್, ಹೊಸವರ್ಷ ಆಚರಣೆಗೆ ಬ್ರೇಕ್!
ಪ್ರಾರ್ಥನಾ ಮಂದಿರಗಳಿಗೆ ನಿರ್ಬಂಧ:
ಡಿ.22ರಿಂದ ಜ.2ವರೆಗೂ ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಶೇ.50 ರಷ್ಟು ಜನಮಿತಿ ವಿಧಿಸಬೇಕು. ಸಣ್ಣ ಪ್ರಾರ್ಥನಾ ಮಂದಿರಗಳಲ್ಲಿ 200ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ವಿಶೇಷ ಪೂಜೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಿಲ್ಲ. ಮಂದಿರಗಳಿಗೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಅನುಮತಿ ನೀಡಿ, 10 ವರ್ಷದೊಳಿಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಅನುಮತಿ ನಿರಾಕರಿಸಬೇಕು. 20 ನಿಮಿಷಕ್ಕಿಂತ ಹೆಚ್ಚು ಸಮಯ ಮಂದಿರಗಳಲ್ಲಿ ಸಾರ್ವಜನಿಕರು ಇರಕೂಡದು. ಇನ್ನು ಮಂದಿರಗಳ ಪುರೋಹಿತರು, ಪಾದ್ರಿಗಳು, ಮೌಲ್ವಿಗಳು ಕಡ್ಡಾಯವಾಗಿ ಕೊರೋನಾ ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿ ಹೊಂದಿರಬೇಕು ಎಂದು ತಜ್ಞರು ಸೂಚಿಸಿದ್ದಾರೆ.
ಏನೇನು ಶಿಫಾರಸು?
- ಸಣ್ಣ ಪ್ರಾರ್ಥನಾ ಮಂದಿರಗಳಲ್ಲಿ 200ಕ್ಕಿಂತ ಹೆಚ್ಚು ಜನ ಸೇರಕೂಡದು
- ವಿಶೇಷ ಪೂಜೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ನೋಡಿಕೊಳ್ಳಬೇಕು
- ಮಂದಿರಕ್ಕೆ ಭೇಟಿ ನೀಡಲು ಎರಡೂ ಡೋಸ್ ಲಸಿಕೆ ಕಡ್ಡಾಯಗೊಳಿಸಬೇಕು
- ಅರ್ಚಕ, ಪಾದ್ರಿ, ಮೌಲ್ವಿಗಳು ಕೊರೋನಾ ನೆಗೆಟಿವ್ ವರದಿ ಹೊಂದಿರಬೇಕು
- ಡಿ.31ರ ರಾತ್ರಿ ಹೊಸ ವರ್ಷ ಸ್ವಾಗತಕ್ಕೆ ಎಲ್ಲೂ ಜನ ಸೇರದಂತೆ ನೋಡಿಕೊಳ್ಳಬೇಕು
- ಉದ್ಯಾನ, ಮಾಲ್, ಬಾರ್, ಪಬ್‌ಗಳು ವಿಶೇಷ ಕಾರ್ಯಕ್ರಮ ನಡೆಸಬಾರದು
- ತಾಂತ್ರಿಕ ಸಲಹಾ ಸಮಿತಿಯ ಸಭೆ ತೀರ್ಮಾನ. ಸರ್ಕಾರಕ್ಕೆ ಶಿಫಾರಸು ಸಲ್ಲಿಕೆ