Kannada Flag: ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿದ್ದಕ್ಕೆ ಆಕ್ರೋಶ

By Kannadaprabha News  |  First Published Dec 17, 2021, 4:46 AM IST

*   ರಾಜ್ಯ ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಖಂಡನೆ
*   ಪುಂಡರಿಗೆ ಶಿಕ್ಷೆ ಕೋರಿ ಕೇಂದ್ರಕ್ಕೆ ಪತ್ರ: ಅಶೋಕ್‌
*   ಖಂಡನಾ ನಿರ್ಣಯ ಪ್ರಕ್ರಿಯೆ ಬಾಕಿ
 


ಬೆಳಗಾವಿ(ಡಿ.17):  ಮಹಾರಾಷ್ಟ್ರದಲ್ಲಿ(Maharashtra) ಪುಂಡರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ವಿಧಾನಸಭೆಯಲ್ಲಿ(Assembly) ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಘಟನೆಯನ್ನು ಖಂಡಿಸಿ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಲು ಖಂಡನಾ ನಿರ್ಣಯ ಮಂಡಿಸಲಾಯಿತು.

ಗುರುವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌(JDS) ಸದಸ್ಯ ಡಾ.ಕೆ.ಅನ್ನದಾನಿ(Dr K Annadani), ಕನ್ನಡ ಧ್ವಜ(Kannada Flag) ಹಾಗೂ ಕನ್ನಡಾಂಬೆ ನಮ್ಮ ತಾಯಿ ಸಮಾನ. ಮಹಾರಾಷ್ಟ್ರದಲ್ಲಿ ಕೆಲವು ಪುಂಡರು ನನ್ನ ತಾಯಿಗೆ ಬೆಂಕಿ ಹಚ್ಚಿದ್ದಾರೆ. ಎಂಇಎಸ್‌(MES) ಸಂಘಟನೆಯವರು ಕನ್ನಡಿಗರ(Kannadigas) ಸ್ವಾಭಿಮಾನ ಕೆಣಕುವ ಕೆಲಸ ಮಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕನ್ನಡ ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

Latest Videos

undefined

Sandalwood Celebrities: ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಿಡಿಕಾರಿದ ಚಂದನವನದ ತಾರೆಯರು!

ಸಾರ್ವಜನಿಕವಾಗಿ ಪುಂಡಾಟಿಕೆ ಮಾಡಿ ನಮ್ಮ ಭುವನೇಶ್ವರಿ ತಾಯಿಯನ್ನು ಸುಟ್ಟರೂ ಮಹಾರಾಷ್ಟ್ರ ಸರ್ಕಾರ(Government of Maharashtra) ಅವರನ್ನು ಬಂಧಿಸಿಲ್ಲ. ಘಟನೆಯಿಂದ ಇಡೀ ಕರ್ನಾಟಕಕ್ಕೆ(Karnataka) ಅವಮಾನವಾಗಿದೆ. ಅವರಿಗೆ ಬೆಳಗಾವಿ ನಮಗೆ ಸೇರಬೇಕು ಎಂದು ಆಗ್ರಹಿಸುವ ಚಟ ಅಂಟಿಕೊಂಡಿದೆ. ಈ ಬಗ್ಗೆ ರಾಜ್ಯ ಸರ್ಕಾರ(Government of Karnataka) ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಮಾತನಾಡಿ, ಅನ್ನದಾನಿ ಬಹಳ ಪ್ರಮುಖ ವಿಚಾರ ಪ್ರಸ್ತಾಪಿಸಿದ್ದಾರೆ. ಕನ್ನಡ ಬಾವುಟ ಸುಟ್ಟವರು ಮತಿಗೇಡಿಗಳು. ಇದರ ವಿರುದ್ಧ ಖಂಡನಾ ನಿರ್ಣಯವನ್ನು ಮಂಡಿಸಿ, ನಾವು ಬೆಂಬಲ ಕೊಡುತ್ತೇವೆ. ಪುಂಡರಿಗೆ ಶಿಕ್ಷೆ ಕೊಡುವಂತೆ ಖಂಡನಾ ನಿರ್ಣಯ ತೆಗೆದುಕೊಂಡು ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರಕ್ಕೆ(Central Government) ಕಳುಹಿಸೋಣ ಎಂದರು. ಈ ವೇಳೆ ಕೆ.ಅನ್ನದಾನಿ ಖಂಡನಾ ನಿರ್ಣಯ ಮಂಡಿಸುತ್ತಿರುವುದಾಗಿ ತಿಳಿಸಿದರು.

ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ-ಅಶೋಕ್‌:

ಕಂದಾಯ ಸಚಿವ ಆರ್‌.ಅಶೋಕ್‌(R Ashok) ಮಾತನಾಡಿ, ಮಹಾರಾಷ್ಟ್ರ ನೆಲದಲ್ಲಿ ಕನ್ನಡ ಬಾವುಟ ಸುಟ್ಟಿರುವುದು ಕನ್ನಡಿಗರಿಗೆ ನೋವುಂಟು ಮಾಡಿದೆ. ಶಿವಸೇನೆ ಹಾಗೂ ಎಂಇಎಸ್‌ ಗಡಿ ಭಾಗದಲ್ಲಿ ನಿರಂತರ ಪುಂಡಾಟಿಕೆ ಮಾಡುತ್ತಿದ್ದು, ಆ ಸರ್ಕಾರ ಅವರನ್ನು ಮಟ್ಟಹಾಕಬೇಕು. ಇದನ್ನು ಹೀಗೆ ಬಿಟ್ಟರೆ ಭಾಷಾ ದಳ್ಳುರಿಗೆ ಕಾರಣವಾಗಿ ಸೌಹಾರ್ದತೆ ಕದಡುತ್ತದೆ. ಹೀಗಾಗಿ ಅನ್ನದಾನಿ ಅವರ ಖಂಡನಾ ನಿರ್ಣಯ ಸ್ವಾಗತಿಸುತ್ತೇವೆ. ಈ ಕುರಿತು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು ಪುಂಡರಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಲಾಗುವುದು. ಜತೆಗೆ ಈ ಬಗ್ಗೆ ಖುದ್ದು ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

Jaggesh: ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ನವರಸ ನಾಯಕ

ಕಾಂಗ್ರೆಸ್‌ ಗದ್ದಲ, ಸದನ ಮುಂದೂಡಿಕೆ:

ಇದಕ್ಕೂ ಮೊದಲು ಅನ್ನದಾನಿ ಅವರು ಕನ್ನಡ ಧ್ವಜ ಕುರಿತು ಪ್ರಸ್ತಾಪಿಸಿದಾಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಅಜಯ್‌ ಸಿಂಗ್‌ ಅವರು ಟ್ರ್ಯಾಕ್ಟರ್‌ ಮೂಲಕ ಆಗಮಿಸಿರುವ ಪ್ರತಿಪಕ್ಷದ ನಾಯಕರು ಹಾಗೂ ಕಾಂಗ್ರೆಸ್‌ ಸದಸ್ಯರನ್ನು ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಒಳಗೆ ಬಿಡುತ್ತಿಲ್ಲ. ನೀವು ಹಸ್ತಕ್ಷೇಪ ಮಾಡಿ ಒಳಗೆ ಬಿಡಲು ತಿಳಿಸಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ವರದಿ ಕೇಳುವುದಾಗಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದರಿಂದ, ಕನ್ನಡ ಬಾವುಟ ಕುರಿತ ಚರ್ಚೆ ವೇಳೆಯೇ ಸದನದ ಬಾವಿಗಿಳಿದು ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿದರು. ಜೆಡಿಎಸ್‌ ಸದಸ್ಯರೂ ಕನ್ನಡ ಬಾವುಟ ಕುರಿತು ಸದನದ ಬಾವಿಗಿಳಿದರು. ಹೀಗಾಗಿ ಸ್ಪೀಕರ್‌ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. ಇದೇ ವೇಳೆ ಸಚಿವ ಕೆ.ಎಸ್‌.ಈಶ್ವರಪ್ಪ, ಕನ್ನಡ ಧ್ವಜದ ಬಗ್ಗೆ ಚರ್ಚಿಸುವಾಗ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಕನ್ನಡದ ಬಗ್ಗೆ ಇರುವ ಭಾವನೆ ಅರ್ಥವಾಗುತ್ತದೆ ಎಂದು ಕಿಡಿಕಾರಿದರು.

ಖಂಡನಾ ನಿರ್ಣಯ ಪ್ರಕ್ರಿಯೆ ಬಾಕಿ

ಅನ್ನದಾನಿ ಅವರು ಖಂಡನಾ ನಿರ್ಣಯ ಮಂಡಿಸುತ್ತಿರುವುದಾಗಿ ತಿಳಿಸಿದರೂ ಈ ಬಗ್ಗೆ ಸ್ಪೀಕರ್‌ ಯಾವುದೇ ನಿರ್ದಿಷ್ಟಸೂಚನೆ ನೀಡಿಲ್ಲ. ಖಂಡನಾ ನಿರ್ಣಯ ಮಂಡಿಸಿ ಅನುಮೋದನೆ ಪಡೆಲಾಗಿದೆ ಎಂದೂ ಪ್ರಕಟಿಸಿಲ್ಲ. ಹೀಗಾಗಿ ಖಂಡನಾ ನಿರ್ಣಯ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
 

click me!