ಉಲ್ಟಾ ಹೊಡೆದ ಸ್ನೇಹಿತರು, ರಾತ್ರಿ ಇಡೀ ನಿದ್ದೆ ಮಾಡದೆ ಒದ್ದಾಡಿದ ದರ್ಶನ್! ಮಾಫಿ ಸಾಕ್ಷಿಅರ್ಜಿಯಲ್ಲಿ ಯಾವ ಅಂಶವಿದೆ?

Published : Aug 07, 2026, 09:11 AM IST
Darshan

ಸಾರಾಂಶ

ನಟ ದರ್ಶನ್‌ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಆತನ ಆಪ್ತ ಸ್ನೇಹಿತರಾದ ಪ್ರದೋಷ್‌ ಮತ್ತು ವಿನಯ್‌ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ದರ್ಶನ್‌ ತಮಗೆ ಬೆದರಿಕೆ ಹಾಕಿದ್ದಾಗಿ ಪ್ರದೋಷ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಈ ಬೆಳವಣಿಗೆಯಿಂದ ಜೈಲಿನಲ್ಲಿರುವ ದರ್ಶನ್‌ಗೆ ತೀವ್ರ ಸಂಕಷ್ಟ ಎದುರಾಗಿದೆ.

ಬೆಂಗಳೂರು: ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಹು ದೊಡ್ಡ ತಿರುವು ಸಿಕ್ಕಿದ್ದು, ಪ್ರಕರಣದಲ್ಲಿ ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ದರ್ಶನ್‌ ಆಪ್ತ ಸ್ನೇಹಿತರಾದ ಪ್ರಕರಣದ 10 ಮತ್ತು 14ನೇ ಆರೋಪಿಗಳಾಗಿರುವ ವಿನಯ್‌ ಹಾಗೂ ಪ್ರದೋಷ್‌ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ಗೆ ಈಗ ಹೊಸದೊಂದು ಸಂಕಷ್ಟ ಎದುರಾಗಿದ್ದು, ತೀವ್ರ ಆತಂಕವನ್ನು ಸೃಷ್ಟಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ದರ್ಶನ್ ಆಪ್ತನಾಗಿರುವ ಪ್ರದೂಷ್, ನ್ಯಾಯಾಲಯದಲ್ಲಿ ‘ಮಾಫಿ ಸಾಕ್ಷಿ’ (Approver) ಆಗಲು ಅರ್ಜಿ ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.

ತಮ್ಮದೇ ಆಪ್ತ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾದರೆ ಕಾನೂನುಬದ್ಧವಾಗಿ ತಮಗೆ ದೊಡ್ಡ ಹಿನ್ನಡೆಯಾಗಲಿದೆ ಎಂಬ ಭೀತಿಯಿಂದ ನಟ ದರ್ಶನ್ ಜೈಲಿನಲ್ಲಿ ವಿಲವಿಲನೆ ಒದ್ದಾಡುತ್ತಿದ್ದಾರೆ. ಪ್ರದೂಷ್ ಅರ್ಜಿ ಸಲ್ಲಿಸಿದ ಸುದ್ದಿ ತಿಳಿಯುತ್ತಿದ್ದಂತೆ, ದರ್ಶನ್ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದೆ.

ಊಟ-ನಿದ್ರೆ ತೊರೆದು ಮೌನಕ್ಕೆ ಶರಣಾದ ‘ಡಿ ಬಾಸ್’

ಗುರುವಾರ ರಾತ್ರಿ ಜೈಲು ಸಿಬ್ಬಂದಿ ನೀಡಿದ ಊಟವನ್ನೂ ಮಾಡದ ದರ್ಶನ್, ತೀವ್ರ ಚಿಂತಾಕ್ರಾಂತರಾಗಿ ಏಕಾಂಗಿಯಾಗಿ ಕುಳಿತಿದ್ದರು. ಇತರ ಸಹ-ಬಂಧಿಗಳೊಂದಿಗೆ ಯಾವುದೇ ಮಾತುಕತೆ ನಡೆಸದೆ ಮೌನಕ್ಕೆ ಶರಣಾಗಿದ್ದ ದರ್ಶನ್, ರಾತ್ರಿಯಿಡೀ ನಿದ್ರೆ ಮಾಡದೆ ಜಾಗರಣೆ ಮಾಡಿ ಕಣ್ಣೇ ಮುಚ್ಚಿಲ್ಲವಂತೆ. ಈಗಾಗಲೇ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಕುಗ್ಗಿರುವ ದರ್ಶನ್‌ಗೆ, ಈ ಹೊಸ ಬೆಳವಣಿಗೆಯಿಂದಾಗಿ ಪ್ರಕರಣದ ಭವಿಷ್ಯ ಏನಾಗುವುದೋ ಎಂಬ ಭಯ ಹೆಚ್ಚಾಗಿದೆ.

ಶುಕ್ರವಾರ ಬೆಳಿಗ್ಗೆ ತಮ್ಮ ಬ್ಯಾರಕ್‌ನಲ್ಲಿಯೇ ಕೆಲಕಾಲ ವಾಕ್ ಮಾಡಿದ ದರ್ಶನ್, ದೇವರ ಫೋಟೋಗೆ ಕೈಮುಗಿದು ಕಾಫಿ ಸೇವಿಸಿದರು. ಆ ನಂತರ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ತಮ್ಮ ಪ್ರಕರಣದ ಸುದ್ದಿಯನ್ನು ಓದಿ, ಮತ್ತಷ್ಟು ಕಂಗಾಲಾಗಿ ಮತ್ತೆ ಮೌನಕ್ಕೆ ಜಾರಿದ್ದಾರೆ. ಒಟ್ಟಿನಲ್ಲಿ, ಆಪ್ತನ ನಿರ್ಧಾರದಿಂದಾಗಿ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಜೈಲಿನಲ್ಲಿ ಸಂಕಷ್ಟದ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ.

ಮಾಫಿ ಅರ್ಜಿಯಲ್ಲಿ ಏನೇನು ಉಲ್ಲೇಖವಿದೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್‌ ಸೇರಿದಂತೆ ಎಲ್ಲ ಆರೋಪಿಗಳು ವಹಿಸಿದ ಪಾತ್ರವನ್ನು ಅರ್ಜಿಯಲ್ಲಿ ಪ್ರದೋಷ್‌ ವಿವರಿಸಿದ್ದಾನೆ. ಅಲ್ಲದೆ, ‘ರೇಣುಕಾಸ್ವಾಮಿ ಮೊಬೈಲ್‌ನಲ್ಲಿದ್ದ ಮೆಸೇಜ್‌ಗಳನ್ನು ಓದಿದ್ದು ಬಿಟ್ಟರೆ ಯಾವುದೇ ಅಪರಾಧ ಕೃತ್ಯ ಎಸಗಿಲ್ಲ. ಸಾಯಿಸುವುದಾಗಿ ದರ್ಶನ್‌ ಬೆದರಿಸಿದ ಹಿನ್ನೆಲೆಯಲ್ಲಿ ಆತನಿಗೆ ಸಹಾಯ ಮಾಡಿದೆ. ಆದ್ದರಿಂದ ನನ್ನನ್ನು ಕ್ಷಮಿಸಿ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್‌ ಪರ ನಾನು ಸಾಕ್ಷ್ಯ ನುಡಿಯುತ್ತೇನೆ’ ಎಂದು ಪ್ರದೋಷ್‌ ಅರ್ಜಿಯಲ್ಲಿ ಕೋರಿದ್ದಾನೆ.

ಪ್ರಕರಣದ ತನಿಖಾಧಿಕಾರಿಗಳಾದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರನ್ನು ಪ್ರತಿನಿಧಿಸುತ್ತಿರುವ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌ ಲಿಖಿತವಾಗಿಯೇ ಈ ಅರ್ಜಿಗೆ ಸಮ್ಮತಿ ನೀಡಿದ್ದಾರೆ. ಮತ್ತೊಂದೆಡೆ, ‘ಈ ಅರ್ಜಿಯನ್ನು ಪುರಸ್ಕರಿಸಬಾರದು. ಅರ್ಜಿ ಸಂಬಂಧ ತಮ್ಮ ವಾದವನ್ನು ಮಂಡಿಸಲು ಅವಕಾಶ ಕೊಡಬೇಕು’ ಎಂದು ದರ್ಶನ್‌ ಹಾಗೂ ಇತರೆ ಆರೋಪಿಗಳು ನ್ಯಾಯಾಲಯವನ್ನು ಬಲವಾಗಿ ಕೋರಿದ್ದಾರೆ. ಹೀಗಾಗಿ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ವಿನಯ್‌ ಮತ್ತು ಪ್ರದೋಷ್‌ ಸಲ್ಲಿಸಿರುವ ಅರ್ಜಿ ಸಂಬಂಧ ಇತರೆ ಆರೋಪಿಗಳ ವಾದ ಆಲಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಆ.10ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿ ವಿಚಾರಣೆ ಮುಂದೂಡಿದೆ.

ಕೃತ್ಯದ ಪಾತ್ರದ ಬಗ್ಗೆ ಉಲ್ಲೇಖ

ಪ್ರದೋಷ್‌ ತನ್ನ ಅರ್ಜಿಯಲ್ಲಿ 2003ರಿಂದ ಆರಂಭವಾದ ದರ್ಶನ್‌ ಜೊತೆಗಿನ ಸ್ನೇಹ, 2024ರ ಜೂ.9ರಂದು ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ವಹಿಸಿದ ಪಾತ್ರವನ್ನು ವಿವರಿಸಿದ್ದಾರೆ. ಅಲ್ಲದೇ, ರೇಣುಕಾಸ್ವಾಮಿ ಮೇಲೆ ದರ್ಶನ್‌ ಮೆರೆದ ಕ್ರೌರ್ಯ, ಕೊಲೆ ನಂತರ ಪೊಲೀಸರ ಮುಂದೆ ಕೆಲ ಆರೋಪಿಗಳು ಶರಣಾಗುವ ವಿಚಾರದಲ್ಲಿ ನಡೆಸಿದ ಮಾತುಕತೆಗಳನ್ನು ಪ್ರದೋಷ್‌ ತಿಳಿಸಿದ್ದಾರೆ.

ಪ್ರದೋಷ್‌ ಹೇಳಿದ್ದೇನು?:

ಇನ್ನು ‘ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಖಾತೆಯಲ್ಲಿ ಕಳುಹಿಸಿದ ಸಂದೇಶಗಳನ್ನು ನಾನು ಓದಿದೆಯಷ್ಟೇ. ವಾಸ್ತವವಾಗಿ ಕೊಲೆ ಘಟನೆ ನಡೆಯದಂತೆ ನಾನು ತಡೆಯಲು ಮುಂದಾದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುತ್ತಿದ್ದಾಗ ದರ್ಶನ್‌ ತಡೆಯಲು ಪ್ರಯತ್ನಿಸಿದೆ. ದರ್ಶನ್‌ ನನ್ನ ಮಾತು ಕೇಳಲಿಲ್ಲ. ಕೊಲೆ ನಡೆದ ನಂತರ ದರ್ಶನ್‌ ನನ್ನ ಬಳಿ ಸಹಾಯ ಕೇಳಿದ್ದಲ್ಲದೆ, ಸಹಾಯ ಮಾಡದೆ ಹೋದರೆ ಗನ್‌ನಿಂದ ಗುಂಡು ಹಾರಿಸಿ ಸಾಯಿಸುವುದಾಗಿ ದರ್ಶನ್‌ ಬೆದರಿಸಿದರು. ಹಾಗಾಗಿ ನಾನು ದರ್ಶನ್‌ಗೆ ಸಹಾಯ ಮಾಡಿದೆ’ ಎಂದು ಹೇಳಿರುವ ಪ್ರದೋಷ್‌, ‘ನನ್ನನ್ನು ಕ್ಷಮಿಸಬೇಕು. ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್‌ಗೆ (ತನಿಖಾಧಿಕಾರಿಗಳ ತನಿಖೆ ಹಾಗೂ ವಿಚಾರಣೆಗೆ) ಪೂರಕವಾಗಿ ಸಾಕ್ಷ್ಯವನ್ನು ನುಡಿಯುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ವಿನಯ್‌ ಕೂಡ ಮಾಫಿಸಾಕ್ಷಿ:

ರೇಣುಕಾಸ್ವಾಮಿ ಕೊಲೆ ನಡೆಯುವ ಮುನ್ನ ದರ್ಶನ್‌ ಪಾರ್ಟಿ ನಡೆಸಿದ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನ ಮಾಲೀಕನೂ ಆದ ಪ್ರಕರಣದ 10ನೇ ಆರೋಪಿ ವಿನಯ್‌ ಸಹ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್‌, ಅರ್ಜಿಯಲ್ಲಿ ವಿನಯ್‌ ವಿವರಗಳನ್ನು ನೀಡಿಲ್ಲ. ಆತನ ಅರ್ಜಿಯನ್ನು ವಿಚಾರಣೆಗೆ ಬಾಕಿ ಇಡಬೇಕು ಎಂದು ಕೋರಿದ್ದಾರೆ.

ಅರ್ಜಿಗೆ ಆಕ್ಷೇಪ:

ಈ ಮಧ್ಯೆ ಪ್ರದೋಷ್‌ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ದರ್ಶನ್‌ ಹಾಗೂ ಇತರೆ ಆರೋಪಿಗಳು, ಅರ್ಜಿಯ ಕುರಿತು ವಾದ ಮಂಡಿಸಲು ತಮಗೆ ಹಕ್ಕು ಕಲ್ಪಿಸಬೇಕು ಎಂದು ಕೋರಿದರು. ಆರೋಪಿಗಳ ಈ ಮನವಿಗೆ ಆಕ್ಷೇಪಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್‌ ಅವರು, ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರಾಸಿಕ್ಯೂಷನ್‌ ಒಪ್ಪಿಗೆ ನೀಡಿದೆ. ಆತ ಪ್ರಾಸಿಕ್ಯೂಷನ್‌ಗೆ ಬೆಂಬಲಿಸುವುದಾಗಿ ತಿಳಿಸಿದ್ದಾನೆ. ಆತ ಸತ್ಯ ನುಡಿಯುತ್ತಿದ್ದಾನೆಯೋ ಅಥವಾ ಇಲ್ಲವೇ ಎಂಬುದನ್ನು ಪ್ರಾಸಿಕ್ಯೂಷನ್‌ ಖಚಿತಪಡಿಸಬೇಕು. ಇತರೆ ಆರೋಪಿಗಳ ವಿರುದ್ಧವೇ ಪ್ರದೋಷ್‌ ಸಾಕ್ಷ್ಯ ನುಡಿಯುವುದರಿಂದ, ಆತನ ಅರ್ಜಿ ಪರಿಗಣಿಸುವ ವಿಚಾರದಲ್ಲಿ ಆರೋಪಿಗಳ ವಾದ ಆಲಿಸುವ ಅಗತ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ಪ್ರತಿಪಾದಿಸಿದರು. ಅಂತಿಮವಾಗಿ ನ್ಯಾಯಾಲಯವು ಈ ಎಲ್ಲಾ ವಾದ-ಪ್ರತಿವಾದ ಆಲಿಸಿ, ಆ.10ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

State News Live: ಉಲ್ಟಾ ಹೊಡೆದ ಸ್ನೇಹಿತರು, ರಾತ್ರಿ ಇಡೀ ನಿದ್ದೆ ಮಾಡದೆ ಒದ್ದಾಡಿದ ದರ್ಶನ್! ಮಾಫಿ ಸಾಕ್ಷಿಅರ್ಜಿಯಲ್ಲಿ ಯಾವ ಅಂಶವಿದೆ?
Ganesh Chaturthi 2026: ನಗರಗಳಷ್ಟೇ ಅಲ್ಲ, ಈ ಭಾರಿ ಹಳ್ಳಿಗಳಲ್ಲೂ ಗಣಪತಿ ಹಬ್ಬಕ್ಕೂ ಕಡಿವಾಣ! ಈ ನಿಯಮಗಳ ಪಾಲಿಸಲೇಬೇಕು!