
ಬೆಂಗಳೂರು (ಜು.7): ‘ವಿಬಿ ಜಿ ರಾಮ್ ಜಿ’ ಯೋಜನೆ ಅಡಿ ಮಾನವ ದಿನ ಸೃಜನೆ ಮಾಡಲು ನಿರ್ಲಕ್ಷ್ಯ ವಹಿಸಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
‘ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ಮೊದಲ ತಿಂಗಳಲ್ಲೇ ಭಾರಿ ಹಿನ್ನಡೆ’ ಎಂದು ಮಾನವ ದಿನಗಳ ಸೃಜನೆ ಮಾಡದ ಬಗ್ಗೆ ಕನ್ನಡಪ್ರಭ ಗುರುವಾರ ವರದಿ ಪ್ರಕಟಿಸಿತ್ತು.
ಇದರ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಈಶ್ವರ್ ಖಂಡ್ರೆ, ಮಾನವ ದಿನಗಳ ಸೃಜನೆ ಮಾಡದ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮನರೇಗಾ ಬದಲಿಗೆ ಜುಲೈ ತಿಂಗಳಿಂದ ವಿಬಿ ಜಿ ರಾಮ್ ಜಿ ಜಾರಿಯಾಗಿದೆ. ಹೀಗಿದ್ದರೂ ಮಾನವ ದಿನ ಸೃಜಿಸಿ ಉದ್ಯೋಗ ನೀಡಲು ನಿರ್ಲಕ್ಷ್ಯ ವಹಿಸಿರುವ ಪಿಡಿಒಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
2025ರ ಜುಲೈನಲ್ಲಿ ಮನರೇಗಾ ಅಡಿ ಮಾನವ ದಿನ ಸೃಜಿಸಿದ್ದ ಪಂಚಾಯ್ತಿಗಳಲ್ಲಿ ಈ ವರ್ಷ ಜುಲೈನಲ್ಲಿ ಒಬ್ಬರಿಗೂ ಉದ್ಯೋಗ ನೀಡದಿದ್ದರೆ ಅಂತಹವರಿಗೆ ನೋಟಿಸ್ ಜಾರಿ ಮಾಡಿ. ವಿವರಣೆ ಪಡೆದು ನಿರ್ಲಕ್ಷ್ಯ ಸಾಬೀತಾದರೆ ಅಮಾನತು ಮಾಡಿ ಎಂದು ಹೇಳಿದ್ದಾರೆ.
ಬೆಂಗಳೂರು ಸುತ್ತಮುತ್ತ 382 ರು. ಕೂಲಿಗೆ ಜನರು ಮುಂದೆ ಬರುವುದಿಲ್ಲ ಎನ್ನಬಹುದು. ಆದರೆ, ಗ್ರಾಮೀಣ ಪ್ರದೇಶದ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮೀಣ ಅರ್ಹ ಫಲಾನುಭವಿಗಳಿಗೆ ಕೆಲಸ ನೀಡದಿದ್ದರೆ ಅದು ಕರ್ತವ್ಯ ಲೋಪ. ಅಂತಹವರ ಬಗ್ಗೆ ಕ್ರಮವಾಗಬೇಕು ಎಂದು ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚನೆ ನೀಡಿದರು.
ಖಂಡ್ರೆ ವಿಬಿ ಜಿ ರಾಮ್ ಜಿ ಅಡಿ ಪ್ರತಿ ದಿನ 5 ಲಕ್ಷ ಮಾನವ ದಿನ ಸೃಜನೆ ಆಗುವವರೆಗೆ ಕಾರ್ಯದರ್ಶಿಗಳು, ಆಯುಕ್ತರು ಎಲ್ಲ ಜಿಲ್ಲಾ ಪಂಚಾಯತಿಗಳ ಸಿಇಒಗಳೊಂದಿಗೆ ನಿತ್ಯ ವರ್ಚುವಲ್ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಬೇಕು.
ಅದೇ ರೀತಿ ಸಿಇಒಗಳು ಇ.ಓ, ಪಿಡಿಒಗಳೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಸಮೀರ್ ಶುಕ್ಲಾ, ಡಿ.ರಂದೀಪ್, ಆಯುಕ್ತರಾದ ದಿವ್ಯಾ ಪ್ರಭು, ಫೌಜಿಯಾ ತರನ್ನುಂ ಮತ್ತಿತರರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ