ಜಾಮೀನು ರದ್ದಾದ ಬಳಿಕ ದರ್ಶನ್ ನಾಪತ್ತೆ! ನೈಸ್‌ ರೋಡ್‌ನಲ್ಲಿ ಜೀಪು-ಕಾರು ಪತ್ತೆ, ತಮಿಳುನಾಡಿಗೆ ಹೋಗಿದ್ಯಾಕೆ?

Published : Aug 14, 2025, 03:50 PM IST
actor darshan

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 7 ಜನರ ಜಾಮೀನು ರದ್ದಾಗಿದೆ. ಜಾಮೀನು ರದ್ದಾದ ಬಳಿಕ ದರ್ಶನ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ದರ್ಶನ್ ತಮಿಳುನಾಡಿಗೆ ಹೋಗಿರಬಹುದು ಎಂಬ ಸುದ್ದಿ ಹಬ್ಬಿದೆ.

ಬೆಂಗಳೂರು : ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿದ್ದ ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ ಮತ್ತು ನಟ ದರ್ಶನ್ ಸೇರಿದಂತೆ ಡಿ ಗ್ಯಾಂಗ್ ನ 7 ಆರೋಪಿಗಳ ಜಾಮೀನು ರದ್ದುಗೊಂಡಿದೆ. ದೇಶಾದಾದ್ಯಂತ ಸದ್ದು ಮಾಡಿದ್ದ ಈ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಜಾಮೀನು ಪಡೆದ ಆರೋಪಿಗಳು ಆರಾಮವಾಗಿ ಓಡಾಡಿಕೊಂಡಿದ್ದರು. ಪ್ರಮುಖವಾಗಿ ಅನಾರೋಗ್ಯದ ಕಾರಣ ನೀಡಿ ದರ್ಶನ್ ಜಾಮೀನಿನ ಮೇಲೆ ಹೊರಬಂದಿದ್ದರು. ಬೆನ್ನು ನೋವಿದೆ ಶಸ್ತ್ರಚಿಕತ್ಸೆ ಮಾಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ ಜಾಮೀನು ಪಡೆದು ಹೊರಬಂದ ಬಳಿಕ ಯಾವ ಶಸ್ತ್ರ ಚಿಕಿತ್ಸೆ ಕೂಡ ಮಾಡಿಸದೆ ಆರಾಮವಾಗಿದ್ದ ದರ್ಶನ್‌ ಗೆ ಈಗ ಮತ್ತೆ ಕಂಟಕ ಎದುರಾಗಿದೆ. ಹೈಕೋರ್ಟ್ ಕೊಲೆ ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಜಾಮೀನು ರದ್ದು ಮಾಡಿದೆ.

ಎಲ್ಲಿದ್ದಾರೆ ದರ್ಶನ್?

ಪ್ರಕರಣ ಸಂಬಂಧ ಈಗ ಒಬ್ಬೊಬ್ಬರಾಗಿ ಬಂಧನವಾಗುತ್ತಿರುವ ಸಂದರ್ಭದಲ್ಲಿ ದರ್ಶನ್ ಎಲ್ಲಿಯೂ ಪತ್ತೆಯಿಲ್ಲ. ಎಲ್ಲಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಅವರ ಅತ್ಯಾಪ್ತೆ ಗೆಳತಿ ಪವಿತ್ರಾ ಗೌಡ ಕೂಡ ಬಂಧನವಾಗಿದೆ. ಆದರೆ ದಾಸ ಮಾತ್ರ ಎಲ್ಲೂ ಪತ್ತೆಯಿಲ್ಲ. ಆಗಸ್ಟ್ 13ರಂದು ಮೈಸೂರಿನ ಟೀ ನರಸೀಪುರದಲ್ಲಿರುವ ವಿನೀಶ್ ದರ್ಶನ್ ಫಾರಂ ಹೌಸ್‌ ನಲ್ಲಿ ಇದ್ದರೆಂದು ಮಾಹಿತಿ ಲಭ್ಯವಾಗಿದೆ. ಆದರೆ ಈಗ ಅಲ್ಲಿಲ್ಲ. ಪೊಲೀಸರು ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಆದ್ರೆ ಎಲ್ಲಿಯೂ ದರ್ಶನ್ ಕಾಣಿಸುತ್ತಿಲ್ಲ. ಸಂಜೆ 4.30ಕ್ಕೆ ದರ್ಶನ್ ಬೆಂಗಳೂರಿನ ಮ್ಯಾಜಿಸ್ಟ್ರೀಟ್ ಕೋರ್ಟ್ ಗೆ ಶರಣಾಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಆದರೆ ದರ್ಶನ್ ಎಲ್ಲಿದ್ದಾರೆ ಎಂಬ ಸಣ್ಣ ಸುಳಿವು ಕೂಡ ಕಾಣಿಸುತ್ತಿಲ್ಲ.

ನೈಸ್‌ ರೋಡ್‌ ನಲ್ಲಿ ದರ್ಶನ್ ಕಾರು ಪತ್ತೆ, ಆದ್ರೆ ದಾಸ ಇಲ್ಲ!

ತಮಿಳುನಾಡಿನಿಂದ ಬೆಂಗಳೂರಿಗೆ ವಾಪಸ್ಸು ಬರುತ್ತಿರುವ ವೇಳೆ ಮಾರ್ಗ ಮಧ್ಯೆ ನಟ ದರ್ಶನ್ ಕಾರು ಬದಲಾಯಿಸಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ನೈಸ್‌ ರಸ್ತೆಯಲ್ಲಿ ದರ್ಶನ್‌ನ ವಾಹನಗಳು ಪತ್ತೆಯಾಗಿದ್ದು, ಫಾರ್ಚೂನರ್ ಕಾರು ಹಾಗೂ ಕೆಂಪು ಬಣ್ಣದ ಜೀಪ್‌ ಎರಡನ್ನೂ ಪೊಲೀಸರು ತಡೆದಿದ್ದಾರೆ. ಸದ್ಯ ಫಾರ್ಚೂನರ್ ಕಾರು ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದವರನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಪಿ.ಇ.ಎಸ್ ಕಾಲೇಜು ಬಳಿ ಇರುವ ನೈಸ್‌ ರೋಡ್‌ ಟೋಲ್‌ನಲ್ಲಿ ಈ ಎರಡೂ ಕಾರುಗಳು ಪತ್ತೆಯಾಗಿದ್ದು, ದರ್ಶನ್ ಎಲ್ಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಕುದುರೆ ವ್ಯಾಪಾರಕ್ಕೆ ತಮಿಳುನಾಡಿಗೆ ಹೋದ್ರಾ ದರ್ಶನ್

ಇನ್ನೊಂದು ಕಡೆ ನಟ ದರ್ಶನ್ ಕುದುರೆ ಮಾರಾಟಕ್ಕಾಗಿ ತಮಿಳುನಾಡಿಗೆ ತೆರಳಿದ್ದಾರೆ ಎನ್ನಲಾಗ್ತಿದೆ. ರಾತ್ರೋರಾತ್ರಿ ತಮಿಳುನಾಡು ಕಡೆ ಪಯಣ ಬೆಳೆಸಿರುವ ಬಗ್ಗೆ ಸಂದೇಹ ಹೆಚ್ಚಿದೆ. ಆಗಸ್ಟ್ 13ರಿಂದ 17ರವರೆಗೆ ಐದು ದಿನಗಳ ಕಾಲ ನಡೆಯುತ್ತಿರುವ ಕುದುರೆ ಮೇಳದಲ್ಲಿ ಅವರು ಭಾಗವಹಿಸಲು ಯೋಜನೆ ಹಾಕಿಕೊಂಡಿದ್ದರು. ಈ ಮೇಳ ತಮಿಳುನಾಡಿನ ಎರೋಡ್ ಸಮೀಪದ ಅಂತಿಯೂರ್ ಪ್ರದೇಶದಲ್ಲಿರುವ ಗುರುನಾಥಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದೆ. ಇದಲ್ಲದೆ, ಬನ್ನಾರಿಯಮ್ಮ ದೇವರ ದರ್ಶನ ಮುಗಿಸಿ ಜಾತ್ರೆಯಲ್ಲಿ ಭಾಗವಹಿಸಲು ದರ್ಶನ್ ಹೊರಟಿದ್ದರು. ಆದರೆ, ಸುಪ್ರೀಂ ಕೋರ್ಟ್ ಆದೇಶ ಹೊರಬಂದ ತಕ್ಷಣ, ‘ಕಿಲ್ಲಿಂಗ್ ಸ್ಟಾರ್’ ಅಜ್ಞಾತ ಸ್ಥಳಕ್ಕೆ ತೆರಳಿದರೆಂಬ ಮಾಹಿತಿ ಲಭ್ಯವಾಗಿದೆ. ದರ್ಶನ್ ಅವರ ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲೂ ಕುದುರೆ ಮಾರಾಟಕ್ಕೆ ಬೋರ್ಡ್ ಹಾಕಲಾಗಿದೆ.

ನಟ ದರ್ಶನ್ ತಮಿಳುನಾಡಿನತ್ತ ಮುಖ ಮಾಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸುವರ್ಣಾವತಿ ಟೋಲ್ ವಿಡಿಯೋ ವೈರಲ್ ಆಗಿದೆ. ಟೋಲ್ ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಬೆಳಗ್ಗೆ 6.11 ನಿಮಿಷಕ್ಕೆ ಫಾರ್ಚೂನರ್ ಕಾರು ಹಾಗೂ ಜೀಪು ಟೋಲ್ ಪಾಸಾಗಿದೆ. Ka 03 me 1123 ಪಾರ್ಚೂನರ್ ಕಾರು ದರ್ಶನ್‌ಗೆ ಸೇರಿದ್ದಾಗಿದೆ.

ಸ್ನೇಹಿತರ ಫಾರ್ಮ್ ಹೌಸ್‌ ನಲ್ಲೇ ಇದ್ದಾರಾ ದರ್ಶನ್?

ಇನ್ನು ಕೆಲವು ಸುದ್ದಿಗಳ ಪ್ರಕಾರ ನಟ ದರ್ಶನ್ ಸಕಲೇಶಪುರದಲ್ಲಿ ಸ್ನೇಹಿತನ ಫಾರಂ ಹೌಸನಲ್ಲಿ ಇದ್ದಾರೆನ್ನಲಾಗಿತ್ತು. ಜೊತೆಗೆ ಕೊಡಗಿನ ಸುಂಟಿಕೊಪ್ಪದಲ್ಲಿ ಇದ್ದಾರೆಂದು ಸುದ್ದಿಯಾಗಿತ್ತು. ಹೀಗಾಗಿ ಪೊಲೀಸರು ಆ ಭಾಗ ಎಲ್ಲಾ ರೆಸಾರ್ಟ್‌ಗಳನ್ನು ವಿಚಾರಿಸಿದ್ದಾರೆ. ಯಾವುದರಲ್ಲೂ ದರ್ಶನ್ ಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿಲ್ಲ. ಹಾಗಾದ್ರೆ ದರ್ಶನ್ ಎಲ್ಲಿ ಹೋಗಿರಬಹುದು ಎಂಬ ಕುತೂಹಲ ಹೆಚ್ಚಿದೆ. ಸಂಜೆ 4.30 ಸಮಯದಲ್ಲಿ ಯಾವ ಕಡೆಯಿಂದ ದರ್ಶನ್ ಬೆಂಗಳೂರು ನ್ಯಾಯಾಲಯಕ್ಕೆ ಬಂದು ಶರಣಾಬಹುದು ಎಂಬುದು ಸದ್ಯದ ಪ್ರಶ್ನೆ

ಸುಪ್ರಿಂಕೋರ್ಟ್‌ನಲ್ಲಿ ನಟ ದರ್ಶನ್ ಜಾಮೀನು ರದ್ದು ಹಿನ್ನೆಲೆ ಯಾವುದೇ ಕ್ಷಣದಲ್ಲಾದರೂ ದರ್ಶನ್ ಅರೆಸ್ಟ್ ಆಗಬಹುದು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರಿನ‌ ಸಿದ್ಧಾರ್ಥ ಬಡಾವಣೆಯಲ್ಲಿರುವ ದರ್ಶನ್ ನಿವಾಸದ ಮುಂದೆ ಪೊಲೀಸರು ಬೀಟ್ ಹಾಕಿದ್ದಾರೆ. ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ತಾಯಿ ಮೀನಾ ತೂಗದೀಪ ಮನೆಯ ಒಳಗಡೆಯೇ ಉಳಿದಿದ್ದು, ಮನೆಯವರು ಒಳ ಭಾಗದಿಂದ ಗೇಟ್‌ಗೆ ಬೀಗ ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ