
ಮಂಡ್ಯ (ಆ.14): ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಎಸ್‌ಐಟಿ ಉತ್ಖನನ ಪ್ರಕರಣವನ್ನು ಖಂಡಿಸಿ ಮಂಡ್ಯದಲ್ಲಿ ವಿನೂತನ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮುಸುಕುಧಾರಿ ಪ್ರತ್ಯಕ್ಷನಾಗಿದ್ದಾನೆ. ಅಂದಹಾಗೆ ಈ ಭೀಮ ಹೆಣ ಹೂತವನಲ್ಲ, ಬದಲಾಗಿ ಧರ್ಮಸ್ಥಳ ಪರ ನಿಂತವನು.
ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಎಸ್‌ಐಟಿ ಉತ್ಖನನ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರೊಂದಿಗೆ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದು ಗಮನ ಸೆಳೆದಿದೆ.
ಹಿಂದೂ ಮುಖಂಡ ಶಿವಕುಮಾರ್ ಆರಾಧ್ಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಧರ್ಮಸ್ಥಳದ ನಂಬಿಕೆ ಮತ್ತು ಭಕ್ತಿಯನ್ನು ಕಾಪಾಡುವಂತೆ ಆಗ್ರಹಿಸಲಾಯಿತು. ಧರ್ಮಸ್ಥಳ, ಹಿಂದೂಗಳ ಆಸ್ಥೆಯ ಕೇಂದ್ರವಾಗಿದ್ದು, ಇದರ ಪಾವಿತ್ರ್ಯತೆಯನ್ನು ಕೆಲವರು ಉತ್ಖನನದ ಹೆಸರಿನಲ್ಲಿ ಹಾಳುಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದನ್ನೂ ಓದಿ: ಧರ್ಮಸ್ಥಳ ಕೇಸ್ ಅನಾಮಿಕ ಹಿಂದೆಯಾರ ಕೈವಾಡವಿದೆ ಅನ್ನೋದು ತನಿಖೆ ನಡೆಸಬೇಕಿದೆ: ದಿನೇಶ್ ಗುಂಡೂರಾವ್
ಈ ಎಲ್ಲ ಷಡ್ಯಂತ್ರದ ಹಿಂದೆ ಕೇರಳದ ಕಮ್ಯುನಿಸ್ಟ್ ಪಕ್ಷದ ಕೈವಾಡ ಎಂದು ದೂರಿದ ಹಿಂದೂ ಸಂಘಟನೆಗಳು. ಪ್ರಸ್ತುತ ಸರ್ಕಾರ ನಡೆಸುತ್ತಿರುವ ಎಸ್‌ಐಟಿ ತನಿಖೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯೆ ಪ್ರವೇಶಿಸಿ ಎನ್‌ಐಎ ತನಿಖೆಗೆ ಆದೇಶಿಸಬೇಕು. ಧರ್ಮಸ್ಥಳದ ದೇಗುಲಕ್ಕೆ ನ್ಯಾಯ ಒದಗಿಸಬೇಕು. ಪಿತೂರಿಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಗೃಹ ಸಚಿವರನ್ನ ಭೇಟಿಯಾದ ದ.ಕ. ಕಾಂಗ್ರೆಸ್ ನಾಯಕರ ನಿಯೋಗ, ಚರ್ಚಿಸಿದ್ದೇನು?
ಮಂಡ್ಯ ಡಿಸಿ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧರ್ಮಸ್ಥಳ ಪ್ರಕರಣ ಸಂಬಂಧ ಪತ್ರ ಸಲ್ಲಿಸಿದ ಕಾರ್ಯಕರ್ತರು. ರಕ್ತದ ಮೂಲಕ ಪತ್ರ ಬರೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ವಿನೂತನ ಪ್ರತಿಭಟನೆಯಲ್ಲಿ ಮುಸುಕುದಾರಿಯ ಉಪಸ್ಥಿತಿ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಈ ಘಟನೆಯು ಧರ್ಮಸ್ಥಳದ ಧಾರ್ಮಿಕ ಮಹತ್ವವನ್ನು ಕಾಪಾಡುವ ಸಂದರ್ಭದಲ್ಲಿ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಭದ್ರತೆಯನ್ನು ಒದಗಿಸಿದ್ದು, ತನಿಖೆಯ ಮುಂದಿನ ಹಂತಕ್ಕಾಗಿ ಕಾಯಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ