
ವಿಧಾನ ಪರಿಷತ್ : ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ನೀರಿನ ಬಾಟಲ್ ಸೇರಿ ಎಲ್ಲ ಬಗೆಯ ಪ್ಲಾಸ್ಟಿಕ್ ಬಳಕೆಯನ್ನು ಆ.15ರಿಂದ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬಿಜೆಪಿಯ ಭಾರತಿ ಶೆಟ್ಟಿ ಹಾಗೂ ಕಾಂಗ್ರೆಸ್ಸಿನ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖಾ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನ ಬಳಸಿದಲ್ಲಿ ದಂಡ ವಿಧಿಸುವಂತೆ ಸಂಬಂಧಪಟ್ಟ ದೇವಾಲಯಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಈ ಆದೇಶ ಖಾಸಗಿ ದೇವಾಲಯಗಳಿಗೆ ಅನ್ವಯವಾಗುವುದಿಲ್ಲ ಎಂದು ಸಚಿವರು ಉತ್ತರಿಸಿದರು.
Karnataka rolls out measures to enforce plastic ban in temples from August 15
ರಾಜ್ಯದಲ್ಲಿರುವ ಅಧಿಸೂಚಿತ/ಘೋಷಿತ ದೇವಾಲಯ/ಸಂಸ್ಥೆಗಳ ಒಳಗೆ ಮತ್ತು ಹೊರಗೆ ಪರಿಸರ ಸ್ವಚ್ಛವಾಗಿಡಲು ಇಲಾಖೆ ಹಲವು ಕ್ರಮಕೈಗೊಂಡಿದೆ. ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಛತ್ರಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಸಂಬಂಧ ಯೋಜನಾ ನಿರ್ವಹಣಾ ಘಟಕ ಸ್ಥಾಪಿಸಿ ತಜ್ಞರ ತಂಡದಿಂದ ಮೊದಲ ಹಂತದಲ್ಲಿ ಇಲಾಖೆಗೆ ಸೇರಿದ 25 ದೇವಾಲಯ ಆಯ್ಕೆ ಮಾಡಿಕೊಂಡು ಘನ ಮತ್ತು ದ್ರವ ತ್ಯಾಜ್ಯ ಘಟಕ ಸ್ಥಾಪಿಸಲು ಸ್ಥಳ ಗುರುತಿಸಿ ತ್ಯಾಜ್ಯ ವಿಲೇವಾರಿಯನ್ನು ನಿರ್ವಹಿಸಲು ಕ್ರಮ ವಹಿಸಲಾಗಿದೆ ಎಂದರು.
ಅನ್ಯ ಉದ್ದೇಶಕ್ಕೆ ಬಳಕೆ ಇಲ್ಲ:
ಸರ್ಕಾರದ ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಆಯಾ ದೇವಾಲಯದ ನಿರ್ವಹಣೆ, ಜೀರ್ಣೋದ್ದಾರ ಮತ್ತು ಮೂಲಭೂತ ಸೌಕರ್ಯ, ದೇವಾಲಯದಿಂದ ನಡೆಸುವ ಶಿಕ್ಷಣ ಸಂಸ್ಥೆಗಳ ನಿರ್ವಹಣೆ, ಧಾರ್ಮಿಕ ಉದ್ದೇಶಕ್ಕೆ ಬಳಸಲಾಗುವುದು, ಇದರ ಹೊರತು ಬೇರೆ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ತಿಳಿಸಿದರು.23 ಜಿಲ್ಲಾ ಧಾರ್ಮಿಕ ಪರಿಷತ್ ರಚನೆ ಬಾಕಿ:
ಪ್ರಸ್ತುತ ಏಳು ಜಿಲ್ಲೆಗಳಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ರಚಿಸಲಾಗಿದೆ. ಬಾಕಿ ಇರುವ 23 ಜಿಲ್ಲೆಗಳಲ್ಲಿ ಪರಿಷತ್ ರಚನೆಗೆ ಆಯಾ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಸ್ವೀಕೃತಗೊಂಡ ಕೂಡಲೇ ಪರಿಶೀಲಿಸಿ ಧಾರ್ಮಿಕ ಪರಿಷತ್ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಸಾಮಾನ್ಯ ಜನರಿಗೆ ಅರ್ಥವಾಗಲು ಚಿಕ್ಕಮಗಳೂರಿನಲ್ಲಿ ಹಿರೇಮಗಳೂರು ಕಣ್ಣನ್ ಅವರು ದೇವಸ್ಥಾನದಲ್ಲಿ ಮಂತ್ರಗಳನ್ನು ಸಂಸ್ಕೃತದ ಬದಲು ಕನ್ನಡದಲ್ಲಿ ಹೇಳುವ ಪದ್ಧತಿ ಅನುಸರಿಸುವಂತೆ ಸೂಚಿಸಲಾಗುವುದು,
ಘಟಿಕೋತ್ಸವ:
ಸರ್ವಾಗಮ ಪ್ರವರ ಮತ್ತು ಪ್ರವೀಣ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲು 18 ವರ್ಷಗಳ ನಂತರ ಆಗಮ ಘಟಿಕೋತ್ಸವ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ