
ಬೆಂಗಳೂರು (ಸೆ.24): ಕನ್ನಡ ಸಾಹಿತ್ಯಿಕ ಸಾಧನೆಯಿಂದಲೇ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸಾಹಿತಿ ಎಸ್.ಎಲ್. ಭೈರಪ್ಪ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.
ಮೈಸೂರಿನಲ್ಲಿ ನಿವೃತ್ತಿ ಜೀವನನ್ನು ನಡೆಸುತ್ತಿದ್ದ ಭೈರಪ್ಪ ಅವರು ವಯೋಸಹಜದಿಂದಾಗಿ ಸಣ್ಣ ಪುಟ್ಟ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ, ಕಳೆದೊಂದು ವರ್ಷದಿಂದ ಬೆಂಗಳೂರಿನಲ್ಲಿ ಬಂದು ವಾಸವಾಗಿದ್ದರು. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕನ್ನಡ ಸಾಹಿತ್ಯದ ಸೇವೆಯಲ್ಲಿ ಸದಾ ಮುಂದಿರುತ್ತಿದ್ದ ಭೈರಪ್ಪ ಅವರ ಬರಹಗಳನ್ನು ಓದುವವರ ಸಾಲಿನಲ್ಲಿ ಹೊಸ ಯುಗದ ನವ ಯುವಕರೇ ಹೆಚ್ಚಾಗಿದ್ದರು. ಅವರ ಪ್ರಸಿದ್ಧ ಕೃತಿಗಳನ್ನು ಈಗಲೂ ಹಲವು ಯುವಜನರಿಗೆ ಮೊದಲ ಓದಾಗಿ ಓದುವಂತೆ ಪ್ರೇರಣೆ ನೀಡುವವರ ಸಂಖ್ಯೆಗೇನೂ ಕಡಿಮೆಯಾಗಿಲ್ಲ. ಇದೀಗ ಕನ್ನಡ ಸಾಹಿತ್ಯ ಲೋಕದ ಬರವಣಿಗೆಯಲ್ಲಿ ಶಾಶ್ವರ ಪೂರ್ಣ ವಿರಾಮ ಹಾಕಿದ್ದಾರೆ.
ಎಸ್. ಎಲ್. ಭೈರಪ್ಪ ಅವರು ಕನ್ನಡದ ಪ್ರಮುಖ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಚಿಂತಕರಾಗಿದ್ದರು. ಅವರ ಕಾದಂಬರಿಗಳು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದ್ದು, ವ್ಯಾಪಕ ಜನಪ್ರಿಯತೆ ಗಳಿಸಿವೆ. ಅವರಿಗೆ ಸರಸ್ವತೀ ಸಮ್ಮಾನ್ (2010), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975), ಪದ್ಮಭೂಷಣ (2023) ಸೇರಿದಂತೆ ಹಲವಾರು ಪ್ರಮುಖ ಪ್ರಶಸ್ತಿಗಳು ಲಭಿಸಿವೆ. ತಮ್ಮ ಹುಟ್ಟೂರಿನ ಅಭಿವೃದ್ಧಿಗಾಗಿ ಮತ್ತು ಸಮಾಜದ ಇತರ ಕಾರ್ಯಗಳಿಗೆ ನೆರವು ನೀಡಲು ಡಾ. ಎಸ್. ಎಲ್. ಭೈರಪ್ಪ ಪ್ರತಿಷ್ಠಾನ (ರಿ) ಸ್ಥಾಪಿಸಿದ್ದಾರೆ.
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ, 1934ರ ಜುಲೈ 26ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದ್ದರು. ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರು. ಅವರ ಕೃತಿಗಳು ತತ್ವಶಾಸ್ತ್ರ, ಸೌಂದರ್ಯ ಮೀಮಾಂಸೆ ಮತ್ತು ಮಾನವೀಯ ವಿಷಯಗಳನ್ನು ಒಳಗೊಂಡಿರುತ್ತವೆ. ಅವರ ಕೃತಿಗಳು ಕನ್ನಡದಲ್ಲಿ ಹೆಚ್ಚು ಮಾರಾಟವಾಗಿದ್ದು, ಹಿಂದಿ, ಮರಾಠಿ, ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ.
ಪ್ರಶಸ್ತಿಗಳು:
ಪದ್ಮಭೂಷಣ (2023): ಭಾರತ ಸರ್ಕಾರದಿಂದ ನೀಡಲಾದ ದೊಡ್ಡ ಗೌರವ.
ಸರಸ್ವತೀ ಸಮ್ಮಾನ್ (2010): ತಮ್ಮ 'ಮಂದ್ರ' ಕಾದಂಬರಿಗೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975): ತಮ್ಮ 'ದಾಟು' ಕಾದಂಬರಿಗೆ.
ಸಾಹಿತ್ಯ ಅಕಾಡೆಮಿ ಫೆಲೋಶಿಪ್ (2015): ಅತ್ಯುನ್ನತ ಗೌರವ.
ವಂಶವೃಕ್ಷ, ದಾಟು, ತಂತು, ಅಂಚು, ಪರ್ವ, ಗೃಹಭಂಗ, ಸಾರ್ಥ, ಮಂದ್ರ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.
20219ರ ಮೈಸೂರು ದಸರಾ ಉದ್ಘಾಟನೆ:
ಕನ್ನಡ ನಾಡ ಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ 2019ನೇ ಸಾಲಿನ ಉದ್ಘಾಟಕರನ್ನಾಗಿ ಎಸ್.ಎಲ್. ಭೈರಪ್ಪ ಆಯ್ಕೆಯಾಗಿದ್ದರು. ಈ ವೇಳೆ ಮಾತನಾಡಿದ್ದ ಅವರು, ಈ ಬಾರಿಯ ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವುದಕ್ಕೆ ಅತೀವ ಸಂತಸವಾಗಿದೆ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ