ರಾಜ್ಯದ ವಾಹನಗಳಿಗೆ ಅತೀ ಸುರಕ್ಷತಾ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ನೀಡಲಾಗಿದ್ದ ಗಡುವು ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದ್ದು, ಈವರೆಗೆ ಶೇ.10ಕ್ಕಿಂತ ಕಡಿಮೆ ವಾಹನಗಳ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದಾರೆ.
ಬೆಂಗಳೂರು (ಫೆ.09): ರಾಜ್ಯದ ವಾಹನಗಳಿಗೆ ಅತೀ ಸುರಕ್ಷತಾ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ನೀಡಲಾಗಿದ್ದ ಗಡುವು ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದ್ದು, ಈವರೆಗೆ ಶೇ.10ಕ್ಕಿಂತ ಕಡಿಮೆ ವಾಹನಗಳ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದಾರೆ. ಏಕರೂಪ ನೋಂದಣಿ ಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆ ಮತ್ತು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
2019ರ ಏಪ್ರಿಲ್ ನಂತರ ನೋಂದಣಿಯಾದ ಎಲ್ಲ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ. ಆದರೆ, ಅದಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳು ಎಚ್‌ಎಸ್ಆರ್‌ಪಿ ಅಳವಡಿಸಿಕೊಂಡಿಲ್ಲ. ಹೀಗಾಗಿ 2019ರ ಏಪ್ರಿಲ್‌ಗಿಂತ ಮುಂಚೆ ನೋಂದಣಿಯಾದ ವಾಹನಗಳು ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಆದೇಶಿಸಿತ್ತು. ಅಲ್ಲದೆ, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ 2023ರ ನ. 17ನ್ನು ಅಂತಿಮ ದಿನವಾಗಿಸಲಾಗಿತ್ತು.
ಸಾರಿಗೆ ಇಲಾಖೆ ಮಾಹಿತಿಯಂತೆ ರಾಜ್ಯದಲ್ಲಿ 2 ಕೋಟಿಗೂ ಹೆಚ್ಚಿನ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿದ್ದು, 2023ರ ನ. 17ರವರೆಗೆ ಕೇವಲ 40 ಸಾವಿರ ವಾಹನಗಳು ಎಚ್ಎಸ್ಆರ್ಪಿ ಅಳವಡಿಕೆ ಮಾಡಿಕೊಂಡಿದ್ದವು. ಹೀಗಾಗಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಅಂತಿಮ ದಿನವನ್ನು 2024ರ ಫೆ. 17ಕ್ಕೆ ವಿಸ್ತರಿಸಲಾಗಿತ್ತು. ಹೀಗೆ ಎರಡನೇ ಬಾರಿ ಗಡುವು ವಿಸ್ತರಿಸಿದರೂ ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಕೆ ಮುಂದಾಗಿಲ್ಲ. ಈವರೆಗೆ ಶೇ. 10ಕ್ಕಿಂತ ಕಡಿಮೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ.
ಫುಟ್‌ಪಾತ್‌ನಲ್ಲಿರುವ ಅನಾಥ ವಾಹನಗಳ ಹರಾಜು: ಹೈಕೋರ್ಟ್ ಸೂಚನೆಯಲ್ಲೇನಿದೆ?
ಮತ್ತೆ ಗಡುವು ವಿಸ್ತರಣೆ ಅಥವಾ ದಂಡ: ಎಚ್‌ಎಸ್‌ಆರ್‌ಪಿ ಅಳವಡಿಕೆ ನೀಡಲಾಗಿದ್ದ ಗಡುವು ಇನ್ನೊಂದು ವಾರದಲ್ಲಿ ಮುಗಿಯಲಿದೆ. ಆದರೆ, ನಿಗದಿಯಷ್ಟು ವಾಹನಗಳು ಎಚ್ಎಸ್ಆರ್ಪಿ ಅಳವಡಿಕೆ ಮಾಡಿಕೊಂಡಿಲ್ಲದ ಕಾರಣ ಮತ್ತೊಮ್ಮೆ ಗಡುವು ವಿಸ್ತರಿಸಬಹುದೇ ಎಂಬ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಒಂದು ವೇಳೆ ಗಡುವು ವಿಸ್ತರಿಸದಿದ್ದರೆ ಫೆ. 18ರಿಂದ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ವಾಹನಗಳಿಗೆ 1 ಸಾವಿರ ರು.ನಿಂದ 2 ಸಾವಿರ ರು.ವರೆಗೆ ದಂಡ ವಿಧಿಸುವ ಸಾಧ್ಯತೆಗಳಿವೆ.