ಚಳಿ ಹೋಯ್ತು, ರಾಜ್ಯದಲ್ಲಿ ಈಗ ಬಿಸಿಲ ಧಗೆ ಹೆಚ್ಚಳ!

By Kannadaprabha News  |  First Published Feb 9, 2024, 6:23 AM IST

ರಾಜ್ಯದಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 4 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಗರಿಷ್ಠ ಉಷ್ಣಾಂಶ ಏರಿಕೆಯಾಗಿದ್ದು, ಇದರಿಂದ ಜನ-ಜಾನುವಾರುಗಳು ತತ್ತರಿಸುವ ಸ್ಥಿತಿ ನಿರ್ಮಾಣಗೊಂಡಿದೆ. 


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಫೆ.09): ರಾಜ್ಯದಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 4 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಗರಿಷ್ಠ ಉಷ್ಣಾಂಶ ಏರಿಕೆಯಾಗಿದ್ದು, ಇದರಿಂದ ಜನ-ಜಾನುವಾರುಗಳು ತತ್ತರಿಸುವ ಸ್ಥಿತಿ ನಿರ್ಮಾಣಗೊಂಡಿದೆ. ರಾಜ್ಯದಲ್ಲಿ ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಭಾರೀ ಪ್ರಮಾಣದ ಮಳೆ ಕೊರತೆ ಉಂಟಾಗಿದೆ. ಹೀಗಾಗಿ, ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಜತೆಗೆ, ಇದೀಗ ಬೀಸುತ್ತಿರುವ ಗಾಳಿಯಲ್ಲಿ ವೇಗ ಕಡಿಮೆ ಇದ್ದು, ತಾಪ ಹೆಚ್ಚಾಗಿದೆ.

Tap to resize

Latest Videos

ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಚಿಂತಾಮಣಿಯಲ್ಲಿ 29.9 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ವಾಡಿಕೆ ಉಷ್ಣಾಂಶವಾಗಿದ್ದು, ಅದಕ್ಕಿಂತ 4.4 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಡಿಕೆ ಪ್ರಮಾಣ (30 ಡಿಗ್ರಿ ಸೆಲ್ಸಿಯಸ್‌)ಕ್ಕಿಂತ 4.3 ಡಿಗ್ರಿ ಸೆಲ್ಸಿಯಸ್‌, ಬಾಗಲಕೋಟೆಯಲ್ಲಿ ವಾಡಿಕೆ ಪ್ರಮಾಣ(31.2)ಕ್ಕಿಂತ 4.2 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ದಾಖಲಾಗಿದೆ.

ಪ್ರತಿಭಟನೆಗೆ ಬರಲು ಬಿಜೆಪಿ ಸಂಸದರಿಗೆ ತಾಕತ್ತಿದೆಯಾ?: ಸಚಿವ ಚಲುವರಾಯಸ್ವಾಮಿ

ಉಳಿದಂತೆ ಕಾರವಾರ, ಬೆಂಗಳೂರು ನಗರ, ಗದಗ, ಕಲಬುರಗಿ ಹಾಗೂ ಮಂಡ್ಯದಲ್ಲಿ ವಾಡಿಕೆಗಿಂತ ತಲಾ 3.9, ಧಾರವಾಡದಲ್ಲಿ 3.7, ಬೆಂಗಳೂರಿನ ಎಚ್‌ಎಎಲ್‌ ಹಾಗೂ ದಾವಣಗೆರೆಯಲ್ಲಿ ತಲಾ 3.5, ಚಿತ್ರದುರ್ಗದಲ್ಲಿ 3.3, ಮೈಸೂರಿನಲ್ಲಿ 3.2, ಹಾಸನದಲ್ಲಿ 3.1, ವಿಜಯಪುರ ಹಾಗೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವಾಡಿಕೆ ಪ್ರಮಾಣಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಗರಿಷ್ಠ ಉಷ್ಣಾಂಶ ವರದಿಯಾಗಿದೆ.

ಕನಿಷ್ಠ ಉಷ್ಣಾಂಶದಲ್ಲಿಯೂ ಹೆಚ್ಚಳ: ಇದೇ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ ವಾಡಿಕೆಗಿಂತ ಅತಿ ಹೆಚ್ಚು ದಾಖಲಾಗಿದೆ. ಕಲಬುರಗಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ 6.2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ 5.1, ಬೆಳಗಾವಿ ನಗರದಲ್ಲಿ 4.9, ಧಾರವಾಡದಲ್ಲಿ 3.8, ಬಾಗಲಕೋಟೆಯಲ್ಲಿ 3.6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ವರದಿಯಾಗಿದೆ. ಇದರಿಂದ ಚಳಿಯ ಪ್ರಮಾಣ ಕಡಿಮೆಯಾಗಿದ್ದು, ಬೆಳಗಿನ ಜಾವವೂ ಸೆಕೆ ಉಂಟಾಗುತ್ತಿದೆ. ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಈಶಾನ್ಯ ದಿಕ್ಕಿನಿಂದ ಗಾಳಿ ಬೀಸಲಿದೆ. ಜತೆಗೆ, ಗಾಳಿಯ ವೇಗವೂ ಹೆಚ್ಚಾಗಲಿದೆ. ಆಗ ಗರಿಷ್ಠ ಉಷ್ಣಾಂಶದಲ್ಲಿ ಇಳಿಕೆ ಉಂಟಾಗಲಿದೆ. ಬೇಸಿಗೆ ಅವಧಿಯಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಏರಿಳಿತ ಇರಲಿದೆ. ನಿರಂತರವಾಗಿ ಉಷ್ಣಾಂಶದಲ್ಲಿ ಹೆಚ್ಚಳವಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

2019ರಲ್ಲಿ ಬಳ್ಳಾರಿಯಲ್ಲಿ 40 ಡಿಗ್ರಿ: ಕಳೆದ 13 ವರ್ಷಗಳ ಅಂಕಿ-ಅಂಶದ ಪ್ರಕಾರ ಬಳ್ಳಾರಿಯಲ್ಲಿ 2019ರ ಫೆ.25ರಂದು ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ಅದೇ ರೀತಿ 2012ರ ಫೆ.29ರಂದು 39.9 ನಷ್ಟು ಗರಿಷ್ಠ ಉಷ್ಣಾಂಶ ವರದಿಯಾಗಿತ್ತು. ಕಲಬುರಗಿಯಲ್ಲಿ 2017ರ ಫೆ.24 ರಂದು 39.4 ಡಿಗ್ರಿ ಸೆಲ್ಸಿಯಸ್‌ ಹಾಗೂ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಇನ್ನು ಕಳೆದ ವರ್ಷ 2023ರ ಫೆ.14 ರಂದು ಕಾರವಾರದಲ್ಲಿ ಅತಿ ಹೆಚ್ಚು ದಾಖಲೆಯ ಗರಿಷ್ಠ ಉಷ್ಣಾಂಶ 38.8 ಡಿಗ್ರಿ ಸೆಲ್ಸಿಯಸ್‌ ವರದಿಯಾಗಿತ್ತು. ಪಣಂಬೂರಿನಲ್ಲಿ ಫೆ.12 ರಂದು 37.4 ಡಿಗ್ರಿ, ಫೆ.28ರಂದು ಕಲಬುರಗಿಯಲ್ಲಿ 37.7 ಡಿಗ್ರಿ ದಾಖಲಾಗಿತ್ತು. ಈ ಬಾರಿ ಕಲಬುರಗಿಯಲ್ಲಿ ಬುಧವಾರವೇ 37.6 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಆತಂಕ ಎದುರಾಗಿದೆ.

ಎಲ್‌ ನೀನೋ ಪ್ರಭಾವದಿಂದ ಈ ಬಾರಿಯ ಬೇಸಿಗೆ ಅವಧಿಯಲ್ಲಿ ಹೆಚ್ಚು ಬಿಸಿಲು ಇರಲಿದೆ. ಎಲ್‌ ನೀನೋ ಮಧ್ಯಮ ಅವಧಿಯಲ್ಲಿ ಇರುವುದರಿಂದ ಸ್ವಲ್ಪ ಮಳೆಯೂ ಆಗಲಿದೆ. ಆಗ ವಾತಾವರಣದಲ್ಲಿ ತಂಪಾಗಲಿದೆ. ಮಳೆಗೆ ಫೆಬ್ರವರಿ ಮುಕ್ತಾಯಗೊಳ್ಳುವವರೆಗೆ ಕಾಯಬೇಕಿದೆ.
- ಎ. ಪ್ರಸಾದ್, ಹವಾಮಾನ ತಜ್ಞ

ಹಾಸನ- ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿಗೆ ಸಿಗುವ ನಿರೀಕ್ಷೆ: ಪ್ರೀತಂಗೌಡ ವಿಶ್ವಾಸ

ಎಲ್ಲೆಲ್ಲಿ ತಾಪ ಎಷ್ಟು? (ಡಿಗ್ರಿ ಸೆಲ್ಸಿಯಸ್‌ನಲ್ಲಿ)
ಜಿಲ್ಲೆ ಈಗಿನ ತಾಪ ವಾಡಿಕೆ ಏರಿಕೆ

ಚಿಂತಾಮಣಿ 34.1 4.4
ಬೆಂಗಳೂರು ವಿಮಾನ ನಿಲ್ದಾಣ 34.3 4.3
ಬಾಗಲಕೋಟೆ 35.4 4.2
ಕಾರವಾರ 37.2 3.9
ಗದಗ 35.8 3.9
ಕಲಬುರಗಿ 37.6 3.9
ಬೆಂಗಳೂರು ನಗರ 34.1 3.9
ಮಂಡ್ಯ 35.6 3.9

click me!