* ಬೆಂಗಳೂರಿನಲ್ಲಿ ಬೆಲೆ ಏರಿಕೆ ವಿರುದ್ಧ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ
* ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ
* ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಆಕ್ರೋಶ
ಬೆಂಗಳೂರು(ಏ.09): ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಮನಸ್ಸನ್ನು ಬೇರೆ ಕಡೆ ತಿರುಗಿಸಲು ಧರ್ಮದ ವಿಚಾರವನ್ನು ಕೈಗೆತ್ತಿಗೊಳ್ಳಲಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಇಂದು ಹೊತ್ತಿ ಉರಿಯುತ್ತಿದೆ ಎಂದು ಬಿಜೆಪಿ ಸರ್ಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಲೆ ಏರಿಕೆ ವಿರೋಧಿಸಿ ಫ್ರೀಡಂಪಾರ್ಕ್‌ನಲ್ಲಿ ಜೆಡಿಎಸ್(JDS) ವತಿಯಿಂದ ನಡೆಸಲಾದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜೀವಾನವಶ್ಯಕ ವಸ್ತುಗಳ ಬೆಲೆಗಳ ನಿರಂತರ ಏರಿಕೆಯ ಬಗ್ಗೆ ಕಿಡಿಕಾರಿದರು.
ಹಲಾಲ್ ಹಾಲಾಹಲದ ನಡುವೆಯೇ ಬರಸಿಡಿಲಿನಂತೆ ಅಪ್ಪಳಿಸಿದ ಸುದ್ದಿ. ಎಚ್‌ಡಿಕೆ ಕೆಂಡಾಮಂಡಲ
ಬೆಲೆ ಹೆಚ್ಚಳ ವಿರುದ್ಧ ಪ್ರತಿಭಟನಾ ಮೆರವಣಿಗೆ ಮಾಡಲು ಅವಕಾಶ ನೀಡದ ಸರ್ಕಾರ, ಶೋಭಾಯಾತ್ರೆಗೆ ಅವಕಾಶ ನೀಡಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ. ಇದರ ಬಗ್ಗೆ ತುಟಿ ಬಿಚ್ಚದ ಮುಖ್ಯಮಂತ್ರಿಗಳು ಧರ್ಮಗಳ ನಡುವೆ ಯುದ್ಧಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಪ್ರತಿಭಟನೆಯ ಜತೆಗೆ ಪಾದಯಾತ್ರೆ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ರಾಜ್ಯ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಬದಲಿಗೆ ಆಡಳಿತಾರೂಢ ಬಿಜೆಪಿ(BJP) ತನಗೆ ಬೇಕಾದ ಸಂಘಟನೆಗಳು ಇಷ್ಟ ಬಂದಾಗಲೆಲ್ಲಾ ಹಮ್ಮಿಕೊಳ್ಳುವ ಶೋಭಾಯಾತ್ರೆಗೆ ಅವಕಾಶ ನೀಡಲಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆಗೆ ಕಿಡಿ:
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಮೂರು ತಿಂಗಳು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದರು. ಈಗ ಗ್ಯಾಸ್ ಸಿಲಿಂಡರ್ ಬೆಲೆ ಒಂದು ಸಾವಿರ ರು. ದಾಟಿದೆ. ಇನ್ನು ಬೆಲೆ ಏರಿಕೆಯಿಂದ ಬಡ ಕುಟುಂಬ ಮನೆ ಕಟ್ಟಲು ಹೇಗೆ ಸಾಧ್ಯ. ಕಬ್ಬಿಣದ ಬೆಲೆ ಟನ್‌ಗೆ ಒಂದು ಲಕ್ಷ ರು. ದಾಟಿದೆ. ಸಿಮೆಂಟ್ ಬೆಲೆಯಲ್ಲಿ ಚೀಲಕ್ಕೆ 500 ರು.ವರೆಗೆ ಮುಟ್ಟಿದೆ. ಹೀಗಾದರೆ ಸಾಮಾನ್ಯ ಜನರು ಬದುಕುವುದು ಹೇಗೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಬೆಲೆ ಏರಿಕೆಯ ಬಗ್ಗೆ ಜನರಲ್ಲಿ ತೀವ್ರ ವ್ಯಕ್ತವಾಗುತ್ತಿದೆ. ಅದನ್ನು ವಿಷಯಾಂತರ ಮಾಡಿ ಧರ್ಮದ ವಿಚಾರದಲ್ಲಿ ಗಲಾಟೆ ಸೃಷ್ಟಿಮಾಡಲಾಗುತ್ತಿದೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಾಕುತ್ತಿದ್ದಾರೆ. ಹಿಜಾಬ್(Hijab) ವಿಚಾರ ಸಣ್ಣದಾಗಿದ್ದಾಗಲೇ ಚಿವುಟಿ ಹಾಕಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದರು.
ಹಿಂದೂ ಸಂಘಟನೆಗಳಿಗೆ ಸವಾಲು:
ಯಾವ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಆರ್‌ಎಸ್‌ಎಸ್‌ಗೆ(RSS) ಯೋಗ್ಯತೆ ಇದ್ದರೆ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಲಿ. ಅದು ಬಿಟ್ಟು ಹಲಾಲ್(Halal), ಜಟ್ಕಾದಂತಹ(Jhatka) ವಿಚಾರಗಳಲ್ಲಿ ಹೋರಾಡುತ್ತಿದ್ದಾರೆ. ವಿಎಚ್‌ಪಿ, ಭಜರಂಗದಳ ರೈತರು(Farmers) ಬೆಳೆಯುವ ಬೆಳೆಯನ್ನು ಖರೀದಿ ಮಾಡುತ್ತಾರಾ? ಬೀದಿ ಬದಿ ವ್ಯಾಪಾರಿಗಳಿಗೆ ಪರಿಸ್ಥಿತಿ ಏನಾಗಿದೆ ಈ ಸರ್ಕಾರ ಅವರ ಬಗ್ಗೆ ಏನಾದರೂ ಯೋಚನೆ ಮಾಡಿದೆಯಾ. ತಿನ್ನುವ ವಿಚಾರದಲ್ಲಿ ಧರ್ಮ ಬೆರೆಸಿರುವ ಈ ನೀತಿಗೆಟ್ಟಸರ್ಕಾರದ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು. ಸರ್ಕಾರದ ಪಾಪದ ಕೊಡ ತುಂಬಿದ್ದು, ಸಾಮರಸ್ಯ ಕೆಡಿಸುವ ಕೆಲಸದ ವಿರುದ್ಧ ನಾನು ದನಿ ಎತ್ತುತ್ತಿದ್ದೇವೆ ಎಂದು ಹೇಳಿದರು.
ಸಾಂದರ್ಭಿಕ ಕೂಸೊಂದು ಹಿಂದುತ್ವದ ಪಾಠ ಮಾಡ್ತಿದೆ, ಎಚ್‌ಡಿಕೆಗೆ ತಿರುಗೇಟು
ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕ ಮಂಜುನಾಥ್, ಪಕ್ಷದ ವಕ್ತಾರ ಟಿ.ಎ.ಶರವಣ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆಗೆ ಎಚ್ಚರಿಕೆ:
ಸರ್ಕಾರ ವಿರುದ್ಧ ಮಾತನಾಡಿದವರಿಗೆ ಗಡಿಪಾರು ಮಾಡುವ ಅಥವಾ ದೇಶದ್ರೋಹಿಗಳು ಎಂದು ಹಣೆಪಟ್ಟಿಕಟ್ಟಿ ಕೇಸ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯು(Police Department) ಬೆಂಬಲ ನೀಡುತ್ತಿದೆ. ಸದಾ ಕಾಲ ಬಿಜೆಪಿ ಸರ್ಕಾರ ಇರಲು ಸಾಧ್ಯವಿಲ್ಲ. ಕಳೆದ ವರ್ಷಗಳಲ್ಲಿ ಏನಾಯಿತು? ಎರಡು ರಾಷ್ಟ್ರೀಯ ಪಕ್ಷಗಳು ಯಾರ ಮನೆ ಬಾಗಿಲಿಗೆ ಬಂದವು ಎಂಬುದು ಗೊತ್ತಿದೆ. ಪೊಲೀಸರಿಗೆ ಸಂಬಳ ಕೊಡುತ್ತಿರುವುದು ಶಾಸಕರು, ಸಚಿವರು ಅಲ್ಲ. ರಾಜ್ಯ ಜನರ ತೆರಿಗೆ ಹಣದಿಂದ ನಿಮಗೆ ಸಂಬಳ ಕೊಡಲಾಗುತ್ತಿದೆ ಎಂಬುದು ನೆನಪಿರಲಿ ಎಂದು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.