
ನವದೆಹಲಿ (ಜೂ.25) ಈ ಬಾರಿ ದೇಶದೆಲ್ಲೆಡೆ ಉತ್ತಮ ಮಾವು ಬೆಳೆ ಬಂದಿದೆ. ಆದರೆ ರಾಜ್ಯದಲ್ಲಿನ ಹವಾಮಾನ ವೈಪರಿತ್ಯ, ಬೆಲೆ ಕುಸಿತದ ಪರಿಣಾಮ ಕರ್ನಾಟಕದ ತೋತಾಪುರಿ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಮಸ್ಯೆ ಅರಿತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇರವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಗಮನಸೆಳೆದಿದ್ದರು. ಇದೀಗ ಜೋಶಿ ಪತ್ರಕ್ಕೆ ಸ್ಪಂದಿಸಿರುವ ಕೃಷಿ ಸಚಿವರು ರಾಜ್ಯ ತೋತಾಪುರಿ ಮಾವು ಬೆಳಾಗಾರರಿಗೆ ಸಹಾಯಧನ ಘೋಷಿಸಿದ್ದಾರೆ. ಈ ಕುರಿತು ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಘೋಷಣೆ ಕುರಿತು ಜೋಶಿ ಮಾಹಿತಿ
ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ತೋತಾಪುರಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಬೆಲೆ ಕೊರತೆ ಪಾವತಿ ಯೋಜನೆ (PDPS) ಅಡಿಯಲ್ಲಿ ಬೆಂಬಲ ನೀಡುವಂತೆ ನಾನು ಮನವಿ ಮಾಡಿದ್ದೆ. ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (Market Intervention Scheme - MIS) ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ ₹1,750 ರೈತರಿಗೆ ಸಹಾಯಧನವನ್ನು ನೀಡಲು ಅನುಮೋದನೆ ನೀಡಿದ್ದಾರೆ. ರಾಜ್ಯದ ಮಾವು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಂಡಿರುವ ಕೇಂದ್ರ ಕೃಷಿ ಸಚಿವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ನಿರ್ಧಾರವು ಸಾವಿರಾರು ರೈತ ಕುಟುಂಬಗಳಿಗೆ ನೆರವಾಗಲಿದ್ದು, ಅವರ ಆರ್ಥಿಕ ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್‌ಗೆ ಕರ್ನಾಟಕ ರೈತರ ಪರವಾಗಿ ಧನ್ಯವಾದಗಳು ಎಂದು ಜೋಶಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಲೆ ಕುಸಿತದಿಂದ ಮಾರುಕಟ್ಟೆಯಲ್ಲಿ ಪ್ರತಿ ಟನ್‌ಗೆ ಕೇವಲ 3000 ರೂಪಾಯಿ ಮಾರಾಟವಾಗಿತ್ತು. ಇದರಿಂದ ರೈತರಿಗೆ ಯಾವುದೇ ಬಂಡವಾಳ ಸಿಗುತ್ತಿರಲಿಲ್ಲ. ಮಾವು ಬೆಳೆಗಾರರು ತೀವ್ರ ನಷ್ಟದಲ್ಲಿದ್ದರು. ಕರ್ನಾಟಕವು ಅತಿಹೆಚ್ಚು ಮಾವು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದು. ಕರ್ನಾಟಕದ ರಸಭರಿತ ಮಾವಿಗೆ ಭಾರಿ ಬೇಡಿಕೆ ಇದೆ. ಆದರೆ ಬೆಲೆ ಕುಸಿತದ ಪರಿಣಾಮ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಕೇಂದ್ರ ಸರ್ಕಾರದ ಸಹಾಯಧನ ಘೋಷಣೆಯಿಂದ ನಿಟ್ಟುಸಿರುಬಿಡುವಂತಾಗಿದೆ.
ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ತೋತಾಪುರಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಬೆಲೆ ಕೊರತೆ ಪಾವತಿ ಯೋಜನೆ (PDPS) ಅಡಿಯಲ್ಲಿ ಬೆಂಬಲ ನೀಡುವಂತೆ ನಾನು ಮನವಿ ಮಾಡಿದ್ದೆ.
ನನ್ನ ಮನವಿಗೆ… pic.twitter.com/9li4RuZRUx— Pralhad Joshi (@JoshiPralhad) June 25, 2026
ಕರ್ನಾಟಕದಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್‌ಗಳಲ್ಲಿ ಮಾವು ಕೃಷಿ ಮಾಡಲಾಗುತ್ತಿದೆ. ಈ ಬಾರಿ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಯಲಾಗಿದೆ. ಆದರೆ ಬೆಲೆ ಕುಸಿತ ರೈತರನ್ನು ಕಂಗಾಲು ಮಾಡಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ತುಮಕೂರು ಮತ್ತು ಹಾವೇರಿಯಂತಹ ಜಿಲ್ಲೆಗಳಲ್ಲಿ ಸಾವಿರಾರು ರೈತ ಕುಟುಂಬಗಳು ಮಾವು ಕೃಷಿಯನ್ನು ಅವಲಂಬಿಸಿದೆ. ಮಾವನ್ನೇ ನೆಚ್ಚಿಕೊಂಡಿರುವ ರೈತ ಕುಟುಂಬಗಳು ಮಾವು ಬೆಲೆ ಕುಸಿತದಿಂದ ಸಾಲಗಾರರಾಗುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರದ ಸಹಾಯಧನ ಘೋಷಣೆಯಿಂದ ರಾಜ್ಯದ ಮಾವು ರೈತರಿಗೆ ರಿಲೀಫ್ ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ