ಸಾಕ್ಷ್ಯ ಇಲ್ದಿದ್ರೂ ಜೈಲಲ್ಲಿದ್ದ ಮೂವರ ಬಿಡುಗಡೆ: ಹೈಕೋರ್ಟ್ ಆದೇಶ

By Kannadaprabha NewsFirst Published Apr 18, 2024, 11:52 AM IST
Highlights

ಯಾವೊಂದು ಸಾಕ್ಷ್ಯವಿಲ್ಲದಿದ್ದರೂ ಅನೈತಿಕ ಸಂಬಂಧ ಬೆಳೆಸಿದ ಅನುಮಾನದ ಮೇಲೆ ಮಹಿಳೆಯೊಬ್ಬಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಳೆದ ಎಂಟು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸಿದ್ದ ಒಂದೇ ಕುಟುಂಬದ ಮೂವರಿಗೆ ಹೈಕೋರ್ಟ್ ಬಿಡುಗಡೆ ಭಾಗ್ಯ ಕಲ್ಪಿಸಿದೆ. 
 

ವಿಶೇಷ ವರದಿ

ಬೆಂಗಳೂರು (ಏ.18): ಯಾವೊಂದು ಸಾಕ್ಷ್ಯವಿಲ್ಲದಿದ್ದರೂ ಅನೈತಿಕ ಸಂಬಂಧ ಬೆಳೆಸಿದ ಅನುಮಾನದ ಮೇಲೆ ಮಹಿಳೆಯೊಬ್ಬಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಳೆದ ಎಂಟು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸಿದ್ದ ಒಂದೇ ಕುಟುಂಬದ ಮೂವರಿಗೆ ಹೈಕೋರ್ಟ್ ಬಿಡುಗಡೆ ಭಾಗ್ಯ ಕಲ್ಪಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗ್ರಾಮದ ನಿವಾಸಿಯಾದ ನಿಂಗಣ್ಣ (52), ಆತನ ಪತ್ನಿ ನಾಗಮ್ಮ (47) ಮತ್ತು ಪುತ್ರ ಎಂ.ಎನ್. ಪ್ರಸಾದ್ (28) ಬಿಡುಗಡೆ ಭಾಗ್ಯ ಪಡೆದವರು. 

ಪ್ರಕರಣದಲ್ಲಿ ಈ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್‌ ಮತ್ತು ಎಸ್.ರಾಚಯ್ಯ ಅವರ ವಿಭಾಗೀಯ ಪೀಠ ತೀರ್ಪು ನೀಡಿದೆ. ಅಪರಾಧ ಕೃತ್ಯವನ್ನು ಸಾಬೀತುಪಡಿಸಬೇಕಾದರೆ ನ್ಯಾಯಾಲಯದ ಮುಂದೆ ತರಲಾದ ದಾಖಲೆಗಳು/ ವಸ್ತುಗಳಿಗೆ ವಸ್ತುನಿಷ್ಠ-ಪೂರಕ ಸಾಕ್ಷ್ಯಾಧಾರ ಒದಗಿಸಬೇಕಾಗುತ್ತದೆ. ಪೊಲೀಸರು ಎಫ್‌ಐಆರ್ ದಾಖಲಿಸಿದ ಮಾತ್ರಕ್ಕೆ ಆರೋಪಿಗಳು ದೋಷಿಗಳಾಗುವುದಿಲ್ಲ. 

ಯಾರೂ ಆಸಕ್ತಿ ತೋರದಕ್ಕೆ ನನ್ನ ಪುತ್ರಿಗೆ ಟಿಕೆಟ್‌: ಸಚಿವ ಸತೀಶ್‌ ಜಾರಕಿಹೊಳಿ

ಪ್ರಕರಣದಲ್ಲಿ ಆರೋಪಿಗಳೇ ಕೃತ್ಯ ಎಸಗಿದ್ದಾರೆ ಎಂಬ ಪ್ರಾಸಿಕ್ಯೂಷನ್ (ಸರ್ಕಾರದ) ವಾದವನ್ನು ಯಾವೊಬ್ಬ ಸಾಕ್ಷಿಯೂ ಬೆಂಬಲಿಸಿಲ್ಲ. ವಿಚಾರಣಾ ನ್ಯಾಯಾಲಯ ಕಾನೂನು ಅಡಿಯ ಪುರಾವೆಗಳು ಇಲ್ಲದಿದ್ದರೂ ಆರೋಪಿಗಳಿಗೆ ಕೇವಲ ನೈತಿಕತೆ ಆಧಾರದಲ್ಲಿ ಶಿಕ್ಷೆ ವಿಧಿಸಿದೆ. ಆರೋಪಿಗಳ ವಿರುದ್ಧದ ಸಾಕ್ಷ್ಯಗಳಿಗೆ ಅವರೇ ವಿವರಣೆ ನೀಡುವಂತೆ ಹೇಳಿರುವುದು ಅಚ್ಚರಿ ಮೂಡಿಸಿದೆ. ಆದ್ದರಿಂದ ಪ್ರಕರಣದ ಮೂವರು ಆರೋಪಿಗಳಿಗೆವಿಧಿಸಲಾಗಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಲಾಗುತ್ತಿದೆ. ಸರ್ಕಾರ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ. 

ಪ್ರಕರಣದ ವಿವರ: ಎಂ.ಎನ್. ಪ್ರಸಾದ್ ಜೊತೆಗೆ ಮೃತ ಮಹಿಳೆ ಮಂಜುಳಾ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಅನುಮಾನದಿಂದ ಆಕೆಯೊಂದಿಗೆ ನಾಗಮ್ಮ ಮತ್ತು ನಿಂಗಣ್ಣ 2016ರ ಜ.1ರಂದು ಸಂಜೆ ಜಗಳ ಮಾಡಿದ್ದರು. ಮಂಜುಳಾ ತಮ್ಮ ಮನೆಗೆ ಬಂದಾಗ ಆಕೆಯ ಮೈ ಮೇಲೆ ನಿಂಗಣ್ಣ, ನಾಗಮ್ಮ ಮತ್ತು ಪ್ರಸಾದ್ ಅವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ಆಕೆ ಶೇ.90ರಿಂದ 95ರಷ್ಟು ಸುಟ್ಟು ಹೋಗಿದ್ದರು. ಜ.11ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದು ಆರೋಪ ಹೊರಿಸಲಾಗಿತ್ತು. 

ಮೃತಳ ಪತಿ ನೀಡಿದ್ದ ದೂರು ಆಧರಿಸಿ ನಿಂಗಣ್ಣ, ನಾಗಮ್ಮ ಮತ್ತು ಪ್ರಸಾದ್ ವಿರುದ್ಧ ನಂಜನಗೂಡು ಗ್ರಾಮೀಣ ಠಾಣಾ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಮೂವರನ್ನೂ ಕೊಲೆ ಪ್ರಕರಣದಡಿ ದೋಷಿಗಳಾಗಿ ಪರಿಗಣಿಸಿದ್ದ ಮೈಸೂರು 7ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ಜೀವಾವಧಿಶಿಕ್ಷೆ ವಿಧಿಸಿ2019ರ ಏ.5ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಆರೋಪಿಗಳು ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ದಾಖಲೆಗಳ ಪ್ರಕಾರ ದೂರುದಾರ, ಮೃತಳ ಪತಿ ಸೇರಿದಂತೆ ಪ್ರಾಸಿಕ್ಯೂಷನ್ (ಸರ್ಕಾರ) ಗುರುತಿಸಿದ ನಾಲ್ವರು ಪ್ರತ್ಯಕ್ಷದರ್ಶಿಗಳು ಘಟನೆಯನ್ನು ಪ್ರತ್ಯಕ್ಷವಾಗಿ ಕಂಡಿಲ್ಲ. 

ಲೋಕಸಭಾ ಚುನಾವಣೆಯಲ್ಲಿ ಎಚ್‌ಡಿಕೆಗೆ 3 ಲಕ್ಷ ಅಂತರದ ಜಯ: ವಿಜಯೇಂದ್ರ

ಘಟನೆ ಬಗ್ಗೆ ದೂರುದಾರನಿಗೆ ಮಾಹಿತಿ ನೀಡಿದ್ದ ಮಧು ಎಂಬಾತ, ಪ್ರಸಾದ್‌ನೊಂದಿಗೆ ಮಂಜುಳಾ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಮಾತನಾಡಿಲ್ಲ. ಆರೋಪಿಗಳ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಎಲ್ಲ ಸಾಕ್ಷಿಗಳೂ ಪ್ರಾಸಿಕ್ಯೂಷನ್ ವಿರುದ್ಧ ಪ್ರತಿಕೂಲ ಸಾಕ್ಷ್ಯ ನುಡಿದಿದ್ದಾರೆ. ಆಸ್ಪತ್ರೆಯಲ್ಲಿ ಮಂಜುಳಾ ಅವರ ಮರಣ ಪೂರ್ವಕ ಹೇಳಿಕೆ ಪಡೆದಿಲ್ಲ. ಆಕೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಒಂದು ಕಾಗದ ಮೇಲೆ ನಾಗಮ್ಮ, ನಿಂಗಣ್ಣ ಹಾಗೂ ಪ್ರಸಾದ್ ಹೆಸರು ಬರೆದು, ಎಕ್ಸ್ (ಕ್ರಾಸ್) ಮಾರ್ಕ್ ಹಾಕಿದ್ದ ವೈದ್ಯರು, ಏಕೆ ಹಾಗೆ ಮಾಡಿದರು ಎನ್ನುವುದಕ್ಕೆ ಉತ್ತರಿಸಿಲ್ಲ ಎಂದು ಅಭಿಪ್ರಾಯಪಟ್ಟು ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಆರೋಪಿಗಳ ಪರ ವಕೀಲರಾದ ಬಿ.ವಿ. ಪಿಂಟೋ ಮತ್ತು ಸಿ.ಎನ್. ರಾಜು ವಾದ ಮಂಡಿಸಿದ್ದರು.

click me!