ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಬೇಡ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು!

By Kannadaprabha NewsFirst Published Oct 27, 2021, 6:51 AM IST
Highlights

* ಪದವಿಯಲ್ಲಿ ಕನ್ನಡ ಕಲಿಕೆ ಮರುಪರಿಶೀಲಿಸಿ

* ಇಲ್ಲವಾದರೆ ತಡೆಯಾಜ್ಞೆ ಕೊಡಬೇಕಾದೀತು

* ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು-

* ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಬೇಡ

ಬೆಂಗಳೂರು(ಅ.27): ರಾಜ್ಯದ ಪದವಿ ಕಾಲೇಜುಗಳಲ್ಲಿ(Degree Colleges) ಕನ್ನಡವನ್ನು(Kannada) ಒಂದು ಭಾಷಾ ವಿಷಯವಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿ ಹೊರಡಿಸಿದ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌(High Court) ತಾಕೀತು ಮಾಡಿದೆ.

ಸರ್ಕಾರದ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ, ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಹೇರಲಾಗದು. ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಇಲ್ಲವಾದರೆ ಸರ್ಕಾರದ ಆದೇಶಕ್ಕೆ ತಡೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ನ.10ಕ್ಕೆ ಮುಂದೂಡಿದೆ.

ಹೊರರಾಜ್ಯದವರ ಮೇಲೇಕೆ ಕನ್ನಡ ಹೇರಿಕೆ?:

ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ‘ಸದ್ಯ ತಮಗಿರುವ ಸೂಚನೆಯಂತೆ ಒಂದು ಭಾಷಾ ವಿಷಯವಾಗಿ ಕಲಿಯಲು ಕನ್ನಡವನ್ನು ಪರಿಚಯಿಸಲಾಗುತ್ತಿದೆ. ಆದರೆ, ಶಾಸ್ತ್ರೀಯವಾಗಿ ಕನ್ನಡ ಕಲಿಸುವ ಉದ್ದೇಶವಿಲ್ಲ’ ಎಂದು ತಿಳಿಸಿದರು.

ಅದನ್ನು ಒಪ್ಪದ ನ್ಯಾಯಪೀಠ, ‘ಹೊರಗಿನಿಂದ ಬಂದ ವಿದ್ಯಾರ್ಥಿಗಳ ಮೇಲೆ ಕನ್ನಡ ಭಾಷೆ ಕಲಿಕೆಯನ್ನು ಏಕೆ ಹೇರುತ್ತೀರಿ?’ ಎಂದು ಪ್ರಶ್ನಿಸಿತಲ್ಲದೆ, ‘ಸರ್ಕಾರ ಈ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಆಕ್ಷೇಪಿಸಿತು.

ಅಡ್ವೋಕೇಟ್‌ ಜನರಲ್‌ ಉತ್ತರಿಸಿ, ‘ಸರ್ಕಾರದ ನೀತಿಯ ಭಾಗವಾಗಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ. ಕನ್ನಡ ಕಲಿಯುವುದರಿಂದ ರಾಜ್ಯದಲ್ಲಿ ಉದ್ಯೋಗ ಪಡೆಯುವುದಕ್ಕೆ ಸಹಕಾರಿಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಮಸ್ಯೆಯಾದರೆ ಶಿಕ್ಷಕರು, ವಿದ್ಯಾರ್ಥಿಗಳು ನ್ಯಾಯಾಲಯದ ಮುಂದೆ ಬರಬೇಕು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ರೂಪದಲ್ಲಿ ಪ್ರಶ್ನಿಸಲಾಗದು. ಇದು ಅರ್ಜಿಗೆ ನಮ್ಮ ಪ್ರಾಥಮಿಕ ಆಕ್ಷೇಪಣೆಯಾಗಿದೆ’ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳಲು ಮುಂದಾದರು.

ಈ ವಾದವನ್ನು ಒಪ್ಪದ ನ್ಯಾಯಪೀಠ, ‘ಹಾಗಾದರೆ ಉದ್ಯೋಗ ಪಡೆಯಲು ಕನ್ನಡ ಕಲಿಯುವಂತೆ ಷರತ್ತು ವಿಧಿಸಿ. ಆದರೆ, ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಹೇರಲಾಗದು. ಸರ್ಕಾರದ ನೀತಿಯಿಂದ ಪದವಿಗೂ ಮೊದಲು ಕನ್ನಡ ಕಲಿಯದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಹಾಗಾಗಿ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಇಲ್ಲವಾದರೆ ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿತು.

ನಂತರ ಅಡ್ವೋಕೇಟ್‌ ಜನರಲ್‌, ‘ಈ ಕುರಿತು ಸರ್ಕಾರದಿಂದ ಹೆಚ್ಚಿನ ಸೂಚನೆ ಪಡೆದು ನ್ಯಾಯಾಲಯಕ್ಕೆ ತಿಳಿಸಲಾಗುವುದು’ ಎಂದು ತಿಳಿಸಿದರು.

‘ಸರ್ಕಾರದ ನಿರ್ಧಾರವನ್ನು ಮರು ಪರಿಶೀಲಿಸಲಾಗುತ್ತದೆ ಎಂದು ಹೇಳಿದರಷ್ಟೇ ಒಂದು ವಾರ ಕಾಲಾವಕಾಶ ನೀಡಲಾಗುವುದು’ ಎಂದು ನುಡಿದ ನ್ಯಾಯಪೀಠ, ನಂತರ ಅರ್ಜಿ ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು. ಅಷ್ಟರೊಳಗೆ ಸರ್ಕಾರ ಆದೇಶವನ್ನು ಮರು ಪರಿಶೀಲಿಸಬೇಕು ಎಂದು ಸಲಹೆ ನೀಡಿತು.

ಪ್ರಕರಣ ಏನು?:

ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವುದನ್ನು ಕಡ್ಡಾಯ ಮಾಡಿ 2021ರ ಆ.7ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿರುವ ಅರ್ಜಿದಾರರು, ‘ಇದು ಸಂವಿಧಾನ ಬಾಹಿರ ಕ್ರಮ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕನ್ನಡ ಕಡ್ಡಾಯ ಎಂದು ಹೇಳಿಲ್ಲ. ಶಾಲಾ ಕಲಿಕೆಯಲ್ಲೂ ಕನ್ನಡ ಕಡ್ಡಾಯವಿಲ್ಲ. ಹೀಗಿದ್ದರೂ ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಲಾಗಿದೆ. ಇದರಿಂದ ಹೊರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ ಹಾಗೂ ಪದವಿಯಲ್ಲಿ ಭಾಷೆ ವಿಷಯ ಆಯ್ಕೆಗೂ ಅಡ್ಡಿಯಾಗಿದೆ. ಆದ್ದರಿಂದ ಸರ್ಕಾರದ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿದ್ದಾರೆ. ಜತೆಗೆ, ‘ಅರ್ಜಿ ಇತ್ಯರ್ಥವಾಗುವರೆಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು’ ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ಕನ್ನಡ ಹೇರಲಾಗದು

ಕನ್ನಡ ಕಲಿಯುವುದರಿಂದ ರಾಜ್ಯದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ ಎಂದಾದರೆ ಉದ್ಯೋಗ ಪಡೆಯಲು ಕನ್ನಡ ಕಲಿಯುವಂತೆ ಷರತ್ತು ವಿಧಿಸಿ. ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಹೇರಲಾಗದು. ಪದವಿಗೂ ಮುನ್ನ ಕನ್ನಡ ಕಲಿಯದವರಿಗೆ ಇದರಿಂದ ತೊಂದರೆಯಾಗುತ್ತದೆ.

- ಹೈಕೋರ್ಟ್‌

click me!