ಪಾವಗಡ ಸೋಲಾರ್ ಪಾರ್ಕ್ ಯೋಜನೆಯಲ್ಲಿನ ರೈತಪರ ನೀತಿಯನ್ನು ಕೇಂದ್ರ ಸರ್ಕಾರವೇ ಮೆಚ್ಚಿ ಪ್ರಶಸ್ತಿ ನೀಡಿದೆ. ಇದನ್ನು ಕರ್ನಾಟಕ ಮಾಡೆಲ್ ಎಂದೂ ಬಣ್ಣಿಸಿ, ಇತರ ರಾಜ್ಯಗಳಿಗೂ ಇದನ್ನು ಅನುಸರಿಸುವಂತೆ ಹೇಳಿತ್ತು.
ಬೆಂಗಳೂರು (ನ.06): ಪಾವಗಡ ಸೋಲಾರ್ ಪಾರ್ಕ್ ಯೋಜನೆಯಲ್ಲಿನ ರೈತಪರ ನೀತಿಯನ್ನು ಕೇಂದ್ರ ಸರ್ಕಾರವೇ ಮೆಚ್ಚಿ ಪ್ರಶಸ್ತಿ ನೀಡಿದೆ. ಇದನ್ನು ಕರ್ನಾಟಕ ಮಾಡೆಲ್ ಎಂದೂ ಬಣ್ಣಿಸಿ, ಇತರ ರಾಜ್ಯಗಳಿಗೂ ಇದನ್ನು ಅನುಸರಿಸುವಂತೆ ಹೇಳಿತ್ತು. ರಾಜಕೀಯಕ್ಕಾಗಿ ಸುಳ್ಳು ಆರೋಪ ಮಾಡುವ ರಾಜ್ಯ ಸರ್ಕಾರವು ಯೋಜನೆ ಬಗ್ಗೆ ಯಾವುದೇ ತನಿಖೆ ನಡೆಸಿದರೂ ನಾನು ಸಿದ್ಧನಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಂಧನ ಇಲಾಖೆಯಲ್ಲಿ ಮಾಡಿರುವ ಕೆಲಸದ ಸತ್ಯಾಂಶ ಮುಚ್ಚಿಹಾಕಿದರೆ ಅದರ ಪರಿಣಾಮ ಅವರಿಗೆ ತಗಲುತ್ತದೆ. ಸತ್ಯಾಂಶವನ್ನು ಅವರು ಮುಚ್ಚಿಹಾಕಬಾರದು. ನನ್ನ ಸಾಧನೆಗಳನ್ನು ಮುಚ್ಚಿ ಹಾಕಲೂ ಆಗುವುದಿಲ್ಲ.
ಅದಕ್ಕೆ ಹೂಡಿಕೆದಾರರ ಸಮಾವೇಶದಲ್ಲಿ ಇಂಧನ ಸಚಿವರು ನೀಡಿದ ಹೇಳಿಕೆಯೇ ಸಾಕ್ಷಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸೋಲಾರ್ ಪಾರ್ಕ್ ಯೋಜನೆಯಲ್ಲಿ ಅಕ್ರಮ ನಡೆದಿದೆ, ಇದರ ತನಿಖೆ ಮಾಡುತ್ತೇವೆ ಎನ್ನುವ ರಾಜ್ಯ ಸರ್ಕಾರವು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಈ ಯೋಜನೆ ಪ್ರಸ್ತಾಪಿಸಿ ಶಹಬ್ಬಾಸ್‌ಗಿರಿ ಪಡೆಯಲು ಯತ್ನಿಸಿದೆ. ಚರಿತ್ರೆಯನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ನಾನು ಯಾವ ಯೋಜನೆ ಮಾಡಿದ್ದೇನೆ, ಎಷ್ಟುಪಾರದರ್ಶಕವಾಗಿ ಮಾಡಿದ್ದೇನೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ ಎಂದು ಸ್ಪಷ್ಟಪಡಿಸಿದರು.
ನ.6ಕ್ಕೆ ಬೆಂಗಳೂರಿಗೆ ಖರ್ಗೆ, ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಮಾವೇಶ: ಡಿ.ಕೆ.ಶಿವಕುಮಾರ್
ಸೋಲಾರ್ ಪಾರ್ಕ್ ಯೋಜನೆಯಲ್ಲಿ ಬಳಕೆಯಾದ ಜಮೀನು ರೈತರ ಬಳಿಯೇ ಉಳಿದುಕೊಂಡು, ರೈತರೇ 20 ಮೆಗವ್ಯಾಟ್ ವಿದ್ಯುತ್ ಉತ್ಪಾದಿಸುವಂತಾಗಿದೆ. ಈ ಯೋಜನೆ ಬಗ್ಗೆ ಈಗಿನ ಸಚಿವರು ಹಾಗೂ ಮಂತ್ರಿಗಳಿಗೆ ಎಷ್ಟುಗೊತ್ತಿದೆಯೋ, ಇಲ್ಲವೋ ಗೊತ್ತಿಲ್ಲ. ಅವರು ದಾಖಲೆಗಳನ್ನು ತೆಗೆದು ನೋಡಲಿ. ರಾಷ್ಟ್ರೀಯ ಮಟ್ಟದ ಇಂಧನ ಸಭೆಯಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಹಾಗೂ ಸಚಿವರು ಹಾಗೂ ಪ್ರಧಾನಿಗಳು ನನಗೆ ಪ್ರಶಸ್ತಿ ನೀಡಿದ್ದಾರೆ. ಈ ಯೋಜನೆಯಲ್ಲಿ ರೈತರ ಪರ ತೆಗೆದುಕೊಳ್ಳಲಾದ ನೀತಿಯನ್ನು ಕರ್ನಾಟಕದ ಮಾಡೆಲ್ ಎಂದು ಕರೆದು ಎಲ್ಲಾ ರಾಜ್ಯಗಳು ಇದನ್ನು ಪಾಲಿಸುವಂತೆ ಪತ್ರ ಬರೆಯಲಾಗಿತ್ತು. ಈ ದಾಖಲೆ ನನ್ನ ಬಳಿಯೇ ಇದೆ ಎಂದು ಹೇಳಿದರು.
ನನ್ನ ತಪ್ಪಿದ್ದರೆ ಶಿಕ್ಷೆಗೆ ಬದ್ಧ: ಈ ಯೋಜನೆಗೆ 6 ತಿಂಗಳ ಮುಂಚಿತವಾಗಿ ಜಾಹೀರಾತು ನೀಡಿ ಟೆಂಡರ್ ಕರೆಯಲಾಗಿತ್ತು. ಇದೆಲ್ಲವನ್ನೂ ರಾಜ್ಯದ ಅಧಿಕಾರಿಗಳು ಮಾಡಿದ್ದರು. ಈಗಿನ ಇಲಾಖೆ ಕಾರ್ಯದರ್ಶಿಗಳು, ಸರ್ಕಾರ ಈಗ ಕೆಆರ್‌ಇಸಿ ಮುಖ್ಯಸ್ಥರನ್ನಾಗಿ ಯಾರನ್ನು ಮಾಡಿದೆಯೋ ಅವರೂ ಈ ಯೋಜನೆ ಭಾಗವಾಗಿದ್ದರು. ಅವರನ್ನೇ ಈ ಯೋಜನೆ ಬಗ್ಗೆ ಕೇಳಲಿ, ತನಿಖೆ ಮಾಡಲಿ. ಈ ಯೋಜನೆಯಲ್ಲಿ ನಾನು ಸಣ್ಣ ತಪ್ಪು ಮಾಡಿದ್ದರೂ ಎಂತಹುದೇ ಶಿಕ್ಷೆಗೆ ನಾನು ಬದ್ಧ ಎಂದು ತಿರುಗೇಟು ನೀಡಿದರು.
ಜನರ ಸಂಕಲ್ಪದಿಂದ ಕಾಂಗ್ರೆಸ್‌ಗೆ ಅಧಿಕಾರ: ಡಿ.ಕೆ.ಶಿವಕುಮಾರ್
ನಾನು ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ ಉತ್ಪಾದನೆ ಎಷ್ಟಿತ್ತು? ಜವಾಬ್ದಾರಿ ಬಿಡುವಾಗ ಉತ್ಪಾದನೆ ಎಷ್ಟಕ್ಕೆ ಏರಿಕೆಯಾಗಿತ್ತು ಎಂದು ಈಗ ಮಾತನಾಡುವುದಿಲ್ಲ. ಎಲ್ಲ ದಾಖಲೆಗಳು ನನ್ನ ಬಳಿಯೇ ಇವೆ. ಇದನ್ನು ಅವರು ಮುಚ್ಚಿ ಹಾಕಲು ಸಾಧ್ಯವಿಲ್ಲ. ಈಗ ಇಡೀ ರಾಜ್ಯದಲ್ಲಿ ಯಾವ್ಯಾವ ಹಗರಣ ನಡೆದಿವೆ, ಬಿಟ್ ಕಾಯಿನ್ ಪ್ರಕರಣದಿಂದ ಹಿಡಿದು ಏನೆಲ್ಲ ಪ್ರಕರಣಗಳನ್ನು ಅವರು ಹೇಗೆಲ್ಲಾ ಮುಚ್ಚಿ ಹಾಕಿದ್ದಾರೆ ಎಂಬುದು ಗೊತ್ತಿದೆ. ಅವರು ಏನು ಮಾಡುತ್ತಾರೋ ಮಾಡಲಿ, ಸಮಯ ಬಂದಾಗ ನಾನು ಮಾತನಾಡುತ್ತೇನೆ ಎಂದು ಹೇಳಿದರು.