Latest Videos

37 ಬದಲು 107 ಕೇಸ್‌ ವಿಚಾರಣೆ: ಡಾನ್‌ ರವಿ ಪೂಜಾರಿ ಆಕ್ಷೇಪ

By Kannadaprabha NewsFirst Published Jul 27, 2023, 3:40 AM IST
Highlights

ಸೆನೆಗಲ್‌ ದೇಶದಿಂದ ಹಸ್ತಾಂತರದ ವೇಳೆ ಉಲ್ಲೇಖಿಸಿದ್ದ ಪ್ರಕರಣಗಳನ್ನಲ್ಲದೇ ಹೆಚ್ಚಿನ ಪ್ರಕರಣಗಳ ವಿಚಾರಣೆಯನ್ನೂ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿರುವ ಭೂಗತ ಪಾತಕಿ ರವಿ ಪೂಜಾರಿ, ನ್ಯಾಯಾಲಯ ಉಲ್ಲೇಖಿಸಿದ್ದ ಪ್ರಕರಣವನ್ನು ಮಾತ್ರ ವಿಚಾರಣೆಗೊಳಪಡಿಸಿ ಇತ್ಯರ್ಥಪಡಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. 

ಬೆಂಗಳೂರು (ಜು.27): ಸೆನೆಗಲ್‌ ದೇಶದಿಂದ ಹಸ್ತಾಂತರದ ವೇಳೆ ಉಲ್ಲೇಖಿಸಿದ್ದ ಪ್ರಕರಣಗಳನ್ನಲ್ಲದೇ ಹೆಚ್ಚಿನ ಪ್ರಕರಣಗಳ ವಿಚಾರಣೆಯನ್ನೂ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿರುವ ಭೂಗತ ಪಾತಕಿ ರವಿ ಪೂಜಾರಿ, ನ್ಯಾಯಾಲಯ ಉಲ್ಲೇಖಿಸಿದ್ದ ಪ್ರಕರಣವನ್ನು ಮಾತ್ರ ವಿಚಾರಣೆಗೊಳಪಡಿಸಿ ಇತ್ಯರ್ಥಪಡಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌, ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸದೇ ಇರುವ ಪ್ರಕರಣಗಳ ವಿಚಾರಣೆ ಮಾಡಬಹುದೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿದರು. 

ಮಹಾರಾಷ್ಟ್ರದ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ (ರವಿಪ್ರಕಾಶ್‌) ಅರ್ಜಿ ಸಲ್ಲಿಸಿದ್ದು, ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಹಸ್ತಾಂತರ ಕಾಯಿದೆ ಪ್ರಕಾರ, ವಿದೇಶದಿಂದ ಹಸ್ತಾಂತರಿಸಲ್ಪಟ್ಟ ವ್ಯಕ್ತಿಯನ್ನು ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸಿರುವ ಪ್ರಕರಣಗಳಲ್ಲಿ ಮಾತ್ರ ವಿಚಾರಣೆಗೆ ಒಳಪಡಿಸಬಹುದು. ಅದನ್ನು ಹೊರತುಪಡಿಸಿ ಪೂಜಾರಿ ಅವರನ್ನು ಬೇರೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಿದರೆ ಹಸ್ತಾಂತರ ಕಾಯಿದೆಯನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದರು. ‘ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್‌ ಮತ್ತು ರಾಜಸ್ಥಾನದಲ್ಲಿ 107 ಪ್ರಕರಣಗಳಲ್ಲಿ ರವಿ ಪೂಜಾರಿ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಹಸ್ತಾಂತರದ ವೇಳೆ ಕೇವಲ 37 ಪ್ರಕರಣಗಳ ವಿಚಾರಣೆಗೆ ಅರ್ಜಿದಾರರು ಬೇಕಾಗಿತ್ತು ಎಂದು ಹೇಳಲಾಗಿತ್ತು. 

ಮಹದಾಯಿ ವಿಷಯದಲ್ಲಿ ರಾಜ್ಯದ ರೈತರಿಗೆ ಅನ್ಯಾಯವಾಗಲು ಬಿಡಲ್ಲ​​​​​: ಸಿದ್ದರಾಮಯ್ಯ

ರವಿ ಪೂಜಾರಿ ಕಳೆದ ಮೂರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಹಸ್ತಾಂತರಕ್ಕೆ ಕಾರಣವಾಗಿರುವ ಪ್ರಕರಣಗಳ ತನಿಖೆ ನಡೆಸಿ ಆರೋಪ ಪಟ್ಟಿಸಲ್ಲಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಇದೇ ರೀತಿ ಮುಂದುವರಿದರೆ ಅವರ ಹಕ್ಕುಗಳಿಗೆ ಚ್ಯುತಿಯಾಗುತ್ತದೆ. ಸೆರೆವಾಸದಿಂದ ಹೊರಬರುವ ಭರವಸೆ ಕಳೆದುಕೊಂಡು, ಮಾನಸಿಕ ನೋವು, ಅವಮಾನ ಎದುರಿಸುವಂತಾಗುತ್ತದೆ’ ಎಂದರು. ಅಲ್ಲದೆ, ಹಸ್ತಾಂತರಿಸಿದ ದೇಶದ ಭರವಸೆ ಮೀರಿದಂತಾಗುತ್ತದೆ. ಹೀಗಾಗಿ ರವಿ ಪೂಜಾರಿ ವಿರುದ್ಧ ದಾಖಲಾಗಿರುವ ಇತರೆ ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ ಪ್ರತಿವಾದಿಗಳಿಗೆ ಸೂಚಿಸಬೇಕು ಎಂದು ಕೋರಿದ್ದಾರೆ.

ಶೀಘ್ರ ಹೊಸ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌: ಸಚಿವ ದಿನೇಶ್‌ ಗುಂಡೂರಾವ್‌

ಪ್ರಕರಣದ ಹಿನ್ನೆಲೆ: ನಗರದ 1ನೇ ಎಸಿಎಂಎಂ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಆರೋಪಿ ರವಿ ಪೂಜಾರಿಯನ್ನು ಸೆನೆಗಲ್‌ನಿಂದ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. ಬಳಿಕ ತಿಲಕ್‌ನಗರ ಪೊಲೀಸ್‌ ಠಾಣೆ ಸೇರಿ ಇತರೆ ಠಾಣೆಗಳಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ ಬಳಿಕ ಆರೋಪಿ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇವುಗಳಲ್ಲಿ ಕೆಲವು ಪ್ರಕರಣಗಳ ವಿಚಾರಣೆ ನಡೆದಿದ್ದು, ಆದೇಶಗಳು ಬಂದಿವೆ. ಇನ್ನೂ ಹಲವು ಪ್ರಕರಣಗಳ ವಿಚಾರಣೆ ಬಾಕಿ ಇದೆ.

click me!