ಅನುವಾದಕ್ಕೊಂದು ಚೆಂದದ ಶೈಲಿ ತಂದುಕೊಟ್ಟ ಅಕ್ಷರ ಮಾಂತ್ರಿಕ ರವಿ ಬೆಳಗೆರೆ

By Kannadaprabha NewsFirst Published Nov 13, 2021, 11:52 AM IST
Highlights

ಅದಮ್ಯ ಜೀವನೋತ್ಸಾಹ, ಅಪಾರ ಓದುಗ ವರ್ಗ, ನೂರಕ್ಕೂ ಹೆಚ್ಚು ಪುಸ್ತಕಗಳು, ವರ್ಣರಂಜಿತ ಜೀವನ- ಹೀಗೆ ತುಂಬು ಜೀವನವನ್ನು ಐವತ್ತೇ ವರುಷಗಳಲ್ಲಿ ಅನುಭವಿಸಿದ ರವಿ ಬೆಳಗೆರೆ 62ನೆಯ ವಯಸ್ಸಿಗೆ ಅನಾರೋಗ್ಯದಿಂದ ತುರ್ತು ನಿರ್ಗಮನ ಹೊಂದಿದರು. 

ಅವರು ಕಪ್ಪುಬಿಳುಪು ಸುಂದರಿಯ ಸೃಷ್ಟಿಕರ್ತ. ತನ್ನ ಕಡುಸಂಕಟದ, ಅವಮಾನದ ಸಂಗತಿಗಳನ್ನು ತಾನೇ ಬರೆದು ಓದುಗ ದೊರೆಗೆ ಒಪ್ಪಿಸಿದ ಅಕ್ಷರ ರಾಕ್ಷಸ. ಪ್ರೇಮಿಗಳಿಗೆ ಓದಲು ಸೊಗಸಾದ ವಿರಹೋತ್ಕಟ ಕಾದಂಬರಿಗಳನ್ನು ಕೊಟ್ಟಕಾದಂಬರಿಕಾರ, ಟೆಲಿವಿಷನ್‌ ಲೋಕದಲ್ಲಿ ಪಾಪಿಗಳ ಪರಮ ಪಾತಕದ ಕತೆಗಳನ್ನು ಮರೆಯಲಿಕ್ಕಾಗದ ಸ್ವರದಲ್ಲಿ ಜಗಜ್ಜಾಹೀರು ಮಾಡಿದ ನಿರೂಪಕ, ಎಂದೂ ಮರೆಯದ ಹಾಡುಗಳನ್ನು ರಸಿಕ ಕೇಳುಗರಿಗೆ ಒಪ್ಪಿಸಿದ ಕವಿ ಮನಸ್ಸಿನ ಕತೆಗಾರ, ಸೊಗಸಾದ ಅನುವಾದಕ, ನಿರರ್ಗಳ ವಾಗ್ಮಿ, ಟ್ಯಾಬ್ಲಾಯಿಡ್‌ ಪತ್ರಿಕೋದ್ಯಮಕ್ಕೆ ಹೊಸ ಖದರು ತಂದುಕೊಟ್ಟಸ್ಟಾರ್‌ ಪತ್ರಕರ್ತ. ಕನ್ನಡದ ಓದುಗರ ಪ್ರೀತಿಗೆ, ಸಿಟ್ಟಿಗೆ, ಅಕ್ಕರೆಗೆ, ದ್ವೇಷಕ್ಕೆ ಪಕ್ಕಾದ ಪಕ್ಕಾ ಪ್ರೊಫೆಷನಲ್‌ ಬರಹಗಾರ. ಬರವಣಿಗೆಯಲ್ಲಿ, ಮಾತಲ್ಲಿ, ನಡೆಯಲ್ಲಿ, ನುಡಿಯಲ್ಲಿ ತನ್ನದೇ ಛಾಪು ಉಳಿಸಿ ಹೋದ ಬೆಳಗೆರೆಯ ದಣಿವರಿಯದ ಲೇಖಕ, ರವಿ ಬೆಳಗೆರೆ.

ರವಿ ಬೆಳಗೆರೆಯ ಸಾಧನೆಯೇನು ಎಂದು ಕೇಳಿದರೆ ಅನೇಕರು ಅನೇಕ ಉತ್ತರಗಳನ್ನು ಮುಂದಿಡುತ್ತಾರೆ. ಎಂಟು ಸಾವಿರ ಮಕ್ಕಳಿಗೆ ಜಾತಿ ನೋಡದೆ, ಅತಿಯಾದ ಶುಲ್ಕ ತೆಗೆದುಕೊಳ್ಳದೆ, ಯಾವ ವಶೀಲಿಗೂ ಕಿವಿಗೊಡದೆ ಶಿಕ್ಷಣ ಕೊಡುವ ಪ್ರಾರ್ಥನಾ ಎಜುಕೇಷನ್‌ ಸೊಸೈಟಿಯನ್ನು ಕಟ್ಟಿದ್ದು ಅವರ ಜೀವಮಾನದ ಸಾಧನೆ ಎನ್ನಬಹುದು. ಅದರ ಜೊತೆಗೆ, ಕನ್ನಡಕ್ಕೆ ಅತಿ ಹೆಚ್ಚು ಲೇಖಕರನ್ನು ಕೊಟ್ಟದ್ದೂ ಅವರೇ. ರವಿ ಬೆಳಗೆರೆ ಶೈಲಿ ಜನಪ್ರಿಯವಾಗುತ್ತಿದ್ದಂತೆ, ನೂರಾರು ಯುವಕರು ಅವರದೇ ಶೈಲಿಯಲ್ಲಿ ಬರಹ ಆರಂಭಿಸಿದರು. ಪತ್ರಿಕೆ ಮಾಡಿದರು, ಖಾಸ್‌ಬಾತ್‌ ಬರೆದರು, ಪ್ರೇಮಪತ್ರ ಗೀಚಿದರು, ಜೀವನದ ಕತೆಯನ್ನೆಲ್ಲ ಪತ್ರಿಕೆಯ ಪುಟಗಳಿಗೆ ತಂದರು, ರಾಜಕಾರಣಿಗಳನ್ನು ಬೈದರು, ಸ್ವಾಮೀಜಿಗಳ ಗುಟ್ಟುಗಳನ್ನು ಬಯಲು ಮಾಡಿದರು- ಹೀಗೆ ಒಂದು ತಲೆಮಾರಿನ ತರುಣ- ತರುಣಿಯರ ಕೈಯಲ್ಲಿ ಪೆನ್ನು ಹಿಡಿಸಿದವರು ರವಿ ಬೆಳಗೆರೆ.

ಸ್ಟಾರ್ ಸುವರ್ಣದಲ್ಲಿ ರವಿ ಬೆಳಗೆರೆ ಕಾದಂಬರಿ ಹೇಳಿ ಹೋಗು ಕಾರಣ

ಅವರ ಕಾದಂಬರಿಗಳೂ ಹತ್ತಾರು ಮುದ್ರಣಗಳನ್ನು ಕಾಣುತ್ತಿದ್ದವು. ರವಿ ಬೆಳಗೆರೆ ಇಂಗ್ಲಿಷ್‌ ಕಾದಂಬರಿಗಳನ್ನು, ದೇಶಪ್ರೇಮದ ಕತೆಗಳನ್ನು, ಜೀವನ ಚರಿತ್ರೆಗಳನ್ನು ಅನುವಾದಿಸಿದರು. ಅನುವಾದಕ್ಕೊಂದು ಚೆಂದದ ಶೈಲಿಯನ್ನು ತಂದುಕೊಟ್ಟರು. ಮೂಲಕ್ಕಿಂತ ಅನುವಾದವೇ ರೋಚಕವಾಗಿರುವಂತೆ ಬರೆದರು. ಓದುಗನನ್ನು ಮೆಚ್ಚಿಸುವುದು ಮತ್ತು ಸೆಳೆದು ಇಟ್ಟುಕೊಳ್ಳುವುದು ಅವರಿಗೆ ಸಿದ್ಧಿಸಿತ್ತು. ಅವರಷ್ಟುವೇಗವಾಗಿ ಮತ್ತು ನಿರಂತರವಾಗಿ ಬರೆದ ಮತ್ತೊಬ್ಬ ಲೇಖಕ ಕನ್ನಡದಲ್ಲಿ ಕಳೆದ ಐವತ್ತು ವರುಷಗಳಲ್ಲಿ ಬರಲಿಲ್ಲ. ನಾಲ್ಕೇ ದಿನಗಳಲ್ಲಿ ಒಂದು ಕಾದಂಬರಿ ಬರೆದು ಮುಗಿಸುತ್ತಿದ್ದ ರವಿ ಬೆಳಗೆರೆ, ಇಡೀ ಪತ್ರಿಕೆಯ ಪುಟಗಳಲ್ಲಿ ಅರ್ಧದಷ್ಟನ್ನು ತಾವೇ ಬರೆದು ತುಂಬಿಸುತ್ತಿದ್ದರು.

ಬಳ್ಳಾರಿಯಲ್ಲಿ ಹುಟ್ಟಿದ ರವಿ ಬೆಳಗೆರೆ ಸಂಕಟದ ಬಾಲ್ಯವನ್ನೂ ಬಡತನದ ತಾರುಣ್ಯವನ್ನೂ ಕಂಡವರು. ಚರಿತ್ರೆಯ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಅವರು ನಂತರದ ದಿನಗಳಲ್ಲಿ ಪತ್ರಿಕೋದ್ಯಮದತ್ತ ವಾಲಿದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಕರ್ಮವೀರ ಪತ್ರಿಕೆಯಲ್ಲಿ ‘ಪಾಪಿಗಳ ಲೋಕದಲ್ಲಿ’ ಎಂಬ ಹೆಸರಲ್ಲಿ ಭೂಗತ ಜಗತ್ತಿನ ಕೊಲೆಪಾತಕರ ಚರಿತ್ರೆ ಬರೆದರು. ಕನ್ನಡಪ್ರಭ ಪತ್ರಿಕೆಯಲ್ಲೂ ಕೆಲಕಾಲ ದುಡಿದ ರವಿ ಬೆಳಗೆರೆ, ನಂತರ ಸ್ವಂತ ಪತ್ರಿಕೆ ಆರಂಭಿಸಿದರು. ಕನ್ನಡದ ಮೊದಲ ಕಪ್ಪುಬಿಳುಪು ಟ್ಯಾಬ್ಲಾಯಿಡ್‌ ಪತ್ರಿಕೆಯನ್ನು ಆರಂಭಿಸಿದರು. ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಹಾಯ್‌ ಬೆಂಗಳೂರು, ಕ್ರಮೇಣ ಇಡೀ ಕರ್ನಾಟಕವನ್ನೇ ಹಬ್ಬಿ, ಅತ್ಯಂತ ಹೆಚ್ಚು ಪ್ರಸಾರ ಕಂಡ ಟ್ಯಾಬ್ಲಾಯಿಡ್‌ ಎಂದು ಕರೆಸಿಕೊಂಡಿತು. ದಿಟ್ಟತನದ ವರದಿಗಳಿಂದ ಮೆಚ್ಚುಗೆಯನ್ನೂ ಮೂರ್ತಿಭಂಜನೆಯ ಸುದ್ದಿಗಳಿಂದ ಅನೇಕರ ಆಕ್ರೋಶವನ್ನೂ ಗಳಿಸಿದ ರವಿ ಬೆಳಗೆರೆ, ತನ್ನಿಚ್ಛೆಯಂತೆ ನಡೆದವರು.

ಅಪಾರ ಮಿತ್ರರನ್ನು ಹೊಂದಿದ್ದ ರವಿ ಬೆಳಗರೆ, ಅನೇಕ ಶತ್ರುಗಳನ್ನೂ ಸಂಪಾದಿಸಿಕೊಂಡಿದ್ದರು. ಅದನ್ನು ಅವರೇ ಖುಷಿಯಾಗಿ ಬರೆದುಕೊಳ್ಳುತ್ತಿದ್ದರು. ಸಾಹಿತ್ಯ, ಸಂಗೀತ ಮತ್ತು ಅಧ್ಯಾತ್ಮದ ಕುರಿತು ಸಾಕಷ್ಟುಬರೆದ ರವಿ, ಕೆಲವು ಸಿನಿಮಾಗಳಲ್ಲಿ ನಟಿಸಿದರು. ಚಿತ್ರಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆದರು. ಸಿನಿಮಾ ನಿರ್ದೇಶನಕ್ಕಿಳಿದರು. ಟೆಲಿವಿಷನ್‌ ಧಾರಾವಾಹಿಗಳನ್ನು ನಿರ್ಮಿಸಿದರು. ಸರ್ಕಾರದ ವಿರುದ್ಧ ನಿರಂತರವಾಗಿ ಬರೆದರು.

ಅದಮ್ಯ ಜೀವನೋತ್ಸಾಹ, ಅಪಾರ ಓದುಗ ವರ್ಗ, ನೂರಕ್ಕೂ ಹೆಚ್ಚು ಪುಸ್ತಕಗಳು, ವರ್ಣರಂಜಿತ ಜೀವನ- ಹೀಗೆ ತುಂಬು ಜೀವನವನ್ನು ಐವತ್ತೇ ವರುಷಗಳಲ್ಲಿ ಅನುಭವಿಸಿದ ರವಿ ಬೆಳಗೆರೆ 62ನೆಯ ವಯಸ್ಸಿಗೆ ಅನಾರೋಗ್ಯದಿಂದ ತುರ್ತು ನಿರ್ಗಮನ ಹೊಂದಿದರು. ಇಂದಿಗೆ ಅವರು ಕಣ್ಮರೆಯಾಗಿ ಒಂದು ವರುಷ. ಅವರ ಪುಸ್ತಕಗಳು, ಪತ್ರಿಕೆಯ ಹಳೆಯ ಸಂಚಿಕೆ, ಫೇಸ್‌ಬುಕ್‌ ಪುಟ, ಧ್ವನಿಸುರುಳಿ ಮತ್ತು ವಿಡಿಯೋ ಕ್ಲಿಪಿಂಗುಗಳು ಈಗಲೂ ಜನಪ್ರಿಯ. ಪ್ರಾರ್ಥನಾ ಸ್ಕೂಲ್‌ ಈಗ ಪದ್ಮನಾಭನಗರದ ಪ್ರತಿಷ್ಠಿತ ಹಾಗೂ ಮಕ್ಕಳ ಪ್ರೀತಿಯ ಶಾಲೆಯಾಗಿ ಅವರ ಬಹುದೊಡ್ಡ ಕನಸಿಗೆ ಸಾಕ್ಷಿಯಾಗಿದೆ. ಅವರ ಪುಸ್ತಕದ ಜಗತ್ತನ್ನು ಮಗಳು ಭಾವನಾ ಹಾಗೂ ಚೇತನಾ, ಶಾಲೆಯನ್ನು ಮಗ ಕರ್ಣ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ತಾನು ಕಂಡ ಬಹುತೇಕ ಕನಸುಗಳನ್ನು ನನಸು ಮಾಡಿಕೊಂಡ ವಿಕ್ಷಿಪ್ತ ಪ್ರತಿಭಾವಂತ ರವಿ ಬೆಳಗೆರೆ ಅವರ ಅಭಿಮಾನಿಗಳ ಮನದಲ್ಲಿ ಇಂದಿಗೂ ಜೀವಂತ.

- ಜೋಗಿ

click me!