Bengaluru Tech Summit- 2021| ಮೇಕ್‌ ಇನ್‌ ಇಂಡಿಯಾ ರೀತಿ ಮೇಕ್‌ ಇನ್‌ ಕರ್ನಾಟಕ: ಅಶ್ವತ್ಥ್!

By Kannadaprabha NewsFirst Published Nov 13, 2021, 6:26 AM IST
Highlights

* ಉತ್ಪಾದನೆಗೆ ಉತ್ತೇಜನ ನೀಡಲು ಶೀಘ್ರವೇ ಯೋಜನೆ

* ಮೇಕ್‌ ಇನ್‌ ಇಂಡಿಯಾ ರೀತಿ ಮೇಕ್‌ ಇನ್‌ ಕರ್ನಾಟಕ: ಅಶ್ವತ್ಥ್

* ಬೆಂಗಳೂರಿನಿಂದ ಹೊರಗೆ ಕಂಪನಿ ಸ್ಥಾಪಿಸುವವರಿಗಷ್ಟೇ ರಿಯಾಯ್ತಿ

* ರಾಜ್ಯದಲ್ಲಿ ಉದ್ದಿಮೆಗಳನ್ನು 6 ಪಟ್ಟು ಹೆಚ್ಚಳ ಮಾಡುವ ಗುರಿ

* ಬೆಂಗಳೂರು ಟೆಕ್‌ ಶೃಂಗದ ರೂಪರೇಷೆ ಬಿಚ್ಚಿಟ್ಟಐಟಿ ಸಚಿವ

ಬೆಂಗಳೂರು(ನ.13): ಕೇಂದ್ರ ಸರ್ಕಾರದ ‘ಮೇಕ್‌ ಇನ್‌ ಇಂಡಿಯಾ’ (Make In india) ಯೋಜನೆ ಮಾದರಿಯಲ್ಲೇ ರಾಜ್ಯದಲ್ಲೂ ‘ಮೇಕ್‌ ಇನ್‌ ಕರ್ನಾಟಕ’ (Make In karnataka) ಘೋಷವಾಕ್ಯದಡಿ ಸ್ಥಳೀಯ ಉತ್ಪಾದನಾ ಕ್ಷೇತ್ರ ಬಲಪಡಿಸಲು ಮಹತ್ವದ ಯೋಜನೆ ರೂಪಿಸಲಿದ್ದೇವೆ. ಅಲ್ಲದೆ, ಬಿಯಾಂಡ್‌ ಬೆಂಗಳೂರಿನಂತಹ ಯೋಜನೆಗಳ ಮೂಲಕ ರಾಜ್ಯದಲ್ಲಿ ಉದ್ದಿಮೆಗಳು ಆರು ಪಟ್ಟು ಹೆಚ್ಚಾಗುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದು ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ (Minister Dr CN Ashwath Narayan) ಹೇಳಿದರು.

"

ಉದ್ಯಾನನಗರಿ ಬೆಂಗಳೂರಿನಲ್ಲಿ (Bengaluru) ನವೆಂಬರ್‌ 17ರಿಂದ ಮೂರು ದಿನಗಳ ಕಾಲ ನಡೆಯಲಿರುವ ‘ಬೆಂಗಳೂರು ಟೆಕ್‌ ಶೃಂಗಸಭೆ -2021’(Bengaluru Tech Summit- 2021) ಯ ಅಂಗವಾಗಿ ಕನ್ನಡಪ್ರಭ (Kannada Prabha)ಕಚೇರಿಯಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಲೆಕ್ಟ್ರಾನಿಕ್ಸ್‌ ವಿನ್ಯಾಸ ವಿಭಾಗದಲ್ಲಿ ದೇಶದ ಒಟ್ಟು ಮಾರುಕಟ್ಟೆಯ ಶೇ.70ರಷ್ಟುಪಾಲನ್ನು ರಾಜ್ಯ ಹೊಂದಿದೆ. ಆದರೆ, ಉತ್ಪಾದನೆ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದ್ದು, ಕೇವಲ ಶೇ.10ರಷ್ಟುಉತ್ಪಾದನೆ ಮಾತ್ರ ಇಲ್ಲಿ ನಡೆಯುತ್ತಿದೆ. ಹೀಗಾಗಿ ರಾಜ್ಯದಲ್ಲಿ ‘ಮೇಕ್‌ ಇನ್‌ ಕರ್ನಾಟಕ’ ಯೋಜನೆ ರೂಪಿಸಿ ಉತ್ಪಾದನೆಗೆ ಉತ್ತೇಜನ ನೀಡಲು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev Chandrasekhar) ಅವರೊಂದಿಗೆ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಬೆಂಗಳೂರಿನಿಂದ ಹೊರಗೆ ಉದ್ದಿಮೆ ಸ್ಥಾಪನೆ:

ರಾಜ್ಯದಲ್ಲಿರುವ ಉದ್ದಿಮೆ ವ್ಯವಹಾರ ಆರು ಪಟ್ಟು ಹೆಚ್ಚಳ ಮಾಡುವ ಗುರಿ ಸರ್ಕಾರಕ್ಕೆ ಇದೆ. ಇದಕ್ಕಾಗಿ ಬೆಂಗಳೂರಿನ ಹೊರಗೆ ಉದ್ದಿಮೆ ಸ್ಥಾಪನೆ ಮಾಡಲು ಬಿಯಾಂಡ್‌ ಬೆಂಗಳೂರು ಯೋಜನೆಗೆ ಚಾಲನೆ ನೀಡಲಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಬರುವ ಕಂಪನಿಗಳಿಗೆ ರಾಜ್ಯದ ಇತರೆಡೆ ಹೂಡಿಕೆ ಮಾಡಲು ಮನವೊಲಿಸುತ್ತಿದ್ದೇವೆ. ಅಲ್ಲದೆ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಉದ್ದಿಮೆ ಸ್ಥಾಪಿಸುವವರಿಗೆ ಯಾವುದೇ ರೀತಿಯ ರಿಯಾಯಿತಿ ನೀಡುತ್ತಿಲ್ಲ. ಬದಲಿಗೆ ಬೆಂಗಳೂರಿನ ಹೊರಗೆ ಸ್ಥಾಪಿಸಿದವರಿಗೆ ಹಲವು ರೀತಿಯ ರಿಯಾಯಿತಿ ನೀಡಲಾಗುತ್ತಿದೆ ಎಂದರು.

ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಕ್ಲಸ್ಟರ್‌ ರೂಪಿಸಿದ್ದೇವೆ. ಮೈಸೂರಲ್ಲಿ ಸೈಬರ್‌ ಭದ್ರತೆ, ಮಂಗಳೂರಿನಲ್ಲಿ ಫಿನ್‌ಟೆಕ್‌ (ಹಣಕಾಸು ತಂತ್ರಜ್ಞಾನ), ಹುಬ್ಬಳ್ಳಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಡಾಟಾಗೆ ಸಂಬಂಧಿಸಿದ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಈ ನಗರಗಳನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲಿನ ನಾಲ್ಕೈದು ಜಿಲ್ಲೆಗಳಲ್ಲಿ ಹೂಡಿಕೆಗೆ ಒತ್ತು ನೀಡುತ್ತೇವೆ ಎಂದು ಸಚಿವರು ಹೇಳಿದರು.

3 ಲಕ್ಷ ಉದ್ಯೋಗ ಸೃಷ್ಟಿ:

ಹಲವು ಕ್ಷೇತ್ರಗಳಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ದೇಶಕ್ಕೆ ಬರುವ ತಂತ್ರಜ್ಞಾನ ಹಾಗೂ ನವ್ಯೋದ್ಯಮಗಳ ವಿದೇಶ ಬಂಡವಾಳ ಹೂಡಿಕೆಯಲ್ಲಿ ಶೇ.50ರಷ್ಟುನಮ್ಮ ರಾಜ್ಯಕ್ಕೆ ಬರುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ.12ರಿಂದ 14 ರಷ್ಟುಅಭಿವೃದ್ಧಿ ಹೊಂದಿದೆ. ಈ ಮೂಲಕ ಒಂದು ವರ್ಷದಲ್ಲಿ ಒಂದು ಲಕ್ಷ ನೇರ ಹಾಗೂ 3 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಿದೆ. ಮುಂದಿನ ಆರು ತಿಂಗಳಲ್ಲಿ 3 ಲಕ್ಷ ನೇರ ಉದ್ಯೋಗ ಕಲ್ಪಿಸುವ ಗುರಿ ಹೊಂದಿದ್ದು, ಮನೆಯಿಂದ ಕೆಲಸ ಪರಿಕಲ್ಪನೆ ನಮಗೆ ಪೂರಕವಾಗಿ ನೆರವಾಗುತ್ತಿದೆ ಎಂದು ಹೇಳಿದರು.

ಉತ್ಪಾದನೆ ಹೆಚ್ಚಳಕ್ಕೆ ಆರ್‌ಸಿ ಜತೆ ಚರ್ಚೆ

ಎಲೆಕ್ಟ್ರಾನಿಕ್ಸ್‌ ವಿನ್ಯಾಸ ವಿಭಾಗದಲ್ಲಿ ದೇಶದ ಒಟ್ಟು ಮಾರುಕಟ್ಟೆಯ ಶೇ.70ರಷ್ಟುಪಾಲನ್ನು ರಾಜ್ಯ ಹೊಂದಿದೆ. ಆದರೆ, ಉತ್ಪಾದನೆ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ಕೇವಲ ಶೇ.10ರಷ್ಟುಉತ್ಪಾದನೆ ಮಾತ್ರ ಇಲ್ಲಿ ನಡೆಯುತ್ತಿದೆ. ಹೀಗಾಗಿ ‘ಮೇಕ್‌ ಇನ್‌ ಕರ್ನಾಟಕ’ ಯೋಜನೆ ರೂಪಿಸಲು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರೊಂದಿಗೆ ಚರ್ಚಿಸಲಾಗುವುದು.

- ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಐಟಿ-ಬಿಟಿ ಸಚಿವ

click me!