ದಿನಕ್ಕೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿರುವ ರಾಜ್ಯ ಸರ್ಕಾರಕ್ಕೆ ಬುಧವಾರ ಮತ್ತೆ ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದೆ. ಖಾಸಗಿ ಶಾಲೆಗಳಲ್ಲಿ ರಾಷ್ಟ್ರಕವಿ ಕುವೆಂಪು ಬರೆದಿರುವ ನಾಡಗೀತೆ ಕಡ್ಡಾಯವಲ್ಲ ಎನ್ನುವ ಆದೇಶ ಹೊರಡಿಸಿದೆ.
ಬೆಂಗಳೂರು (ಫೆ.21): ಶಾಲೆಗಳಲ್ಲಿ ಧಾರ್ಮಿಕ ಹಬ್ಬ ಆಚರಣೆ ನಿಷೇಧ, ಘೋಷವಾಕ್ಯ ಬದಲಾವಣೆ, ಕಾಡಾನೆ ದಾಳಿಯಿಂದ ಮೃತಪಟ್ಟ ಕೇರಳ ವ್ಯಕ್ತಿಗೆ ರಾಜ್ಯದ ಪರಿಹಾರದ ವಿವಾದದ ಬಳಿಕ ರಾಜ್ಯ ಸರ್ಕಾರ ಮತ್ತೊಂದುಉ ಯಡವಟ್ಟು ಮಾಡಿಕೊಂಡಿದೆ. ಖಾಸಗಿ ಶಾಲೆಗಳಲ್ಲಿ ಕುವೆಂಪು ಅವರು ರಚಿಸಿರುವ ನಾಡಗೀತೆ ಕಡ್ಡಾಯವಲ್ಲ ಎನ್ನುವ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದ ಈ ಆದೇಶ ಹೊರಡಿಸಲಾಗಿದೆ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಾಗಿರಲಿದೆ ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ. ಆ ಮೂಲಕ ರಾಜ್ಯ ಸರ್ಕಾರ ತನ್ನ ದಿನಕ್ಕೊಂದು ವಿವಾದದ ಅಡಿಯಲ್ಲಿ ಮತ್ತೊಂದು ಹೊಸ ವಿವಾದ ಸೃಷ್ಟಿಸಿದೆ. ಖಾಸಗಿ ಶಾಲೆಗಳಿಗೆ ಸರ್ಕಾರ ವಿನಾಯಿತಿ ನೀಡಿದ್ದಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಖಾಸಗಿ ಶಾಲೆಗಳಳಲ್ಲಿ ನಾಡಗೀತೆಗೆ ವಿನಾಯಿತಿ ನೀಡಿರುವ ಸರ್ಕಾರ, ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಮಾತ್ರನೇ ನಾಡಗೀತೆ ಹಾಡಬೇಕು ಎಂದು ವಿವಾದಿತ ಆದೇಶವನ್ನು ಹೊರಡಿಸಿದೆ. ಇದಕ್ಕೂ ಮುನ್ನ ಎಲ್ಲಾ ಶಾಲೆಗಳಲ್ಲಿ ದಿನದ ಚಟುವಟಿಕೆ ಆರಂಭಕ್ಕೂ ಮುನ್ನ ನಾಡಗೀತೆ ಹಾಡಬೇಕಿತ್ತು. ಕೆಲ ಸರ್ಕಾರಿ ಇಲಾಖೆ, ಕಚೇರಿ, ಸರ್ಕಾರದ ಅಧಿಕೃತ ಕಾರ್ಯಕ್ರಮ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯೊಂದಿಗೆ ನಾಡಗೀತೆ ಕೂಡ ಹಾಡಬೇಕು ಎನ್ನುವ ಆದೇಶ ನೀಡಲಾಗಿತ್ತು. ಹಿಂದಿನ ಆದೇಶವನ್ನು ಬದಲಾವಣೆ ಮಾಡಿದ ರಾಜ್ಯ ಸರ್ಕಾರ ಈಗ ಎಲ್ಲಾ ಶಾಲೆಗಳು ಎಂಬುದರ ಬದಲಾಗಿ ಸರ್ಕಾರಿ ಶಾಲೆಗಳು ಎಂದು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ಇನ್ನು ಸರ್ಕಾರದ ಈ ನಿರ್ಧಾರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾಕೆ ಈ ನಿರ್ಧಾರ ತೆಗೆದುಕೊಂಡಿದೆ ಎನ್ನುವುದಕ್ಕೆ ಅವರೇ ಉತ್ತರ ಕೊಡಬೇಕಾಗುತ್ತದೆ. ಎಲ್ಲಾ ಶಾಲೆಯಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ ಮಾಡಿದ್ದೇವೆ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹೇಳಿದರೆ ಒಳ್ಳೆಯದು. ಕುವೆಂಪು ಅವರ ನಾಡಗೀತೆ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಒಂದು ಭಾವನಾತ್ಮಕ ನೇಚರ್ ಕನೆಕ್ಟಿವಿಟಿ ಇದೆ. ನಾಡಗೀತೆ ಇದ್ದರೆ ಒಳ್ಳೆಯದು ಚರ್ಚೆ ಮಾಡಿ ಹೇಳುತ್ತೇನೆ. ನಾಡಗೀತೆ ಕಡ್ಡಾಯವಲ್ಲ ಎಂದು ಮಾಡಿದ್ದರೆ ನಾನು ಮಾರ್ಪಾಡು ಮಾಡಿಸುತ್ತೇನೆ. ಯಾವುದಾದರೂ ಕಾರಣದಿಂದ ಹೀಗೆ ಮಾಡಿರುತ್ತಾರೆ. ನಾನು ನಮ್ಮ ಇಲಾಖೆಯಲ್ಲಿ ನಾಡಗೀತೆ ಕಡ್ಡಾಯ ಅಂತ ಮಾಡಿಸುತ್ತೇನೆ. ಇದರ ಜೊತೆಗೆ ಸಂವಿಧಾನದ ಪೀಠಿಕೆ ಕಡ್ಡಾಯ ಮಾಡಲಾಗಿದೆ. ಮಕ್ಕಳು ಅದನ್ನು ಸಹ ಓದುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾಡಗೀತೆ ನಿಯಮ ಖಾಸಗಿ ಶಾಲೆಗೂ ಅನ್ವಯವೇ? ಸ್ಪಷ್ಟನೆ ಕೇಳಿದ ಹೈಕೋರ್ಟ್
ಪ್ರಿಂಟ್ ಮಿಸ್ಟೇಕ್ ಎಂದ ಸಚಿವ: ಇನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಇದು ಪ್ರಿಂಟ್ ಮಿಸ್ಟೇಕ್ ಎನ್ನುವ ಮೂಲಕ ತಿಪ್ಪೇ ಸಾರಿಸುವ ಪ್ರಯತ್ನ ಮಾಡಿದ್ದಾರೆ. ಒಂದು ಸಣ್ಣ ಪ್ರಿಂಟ್ ಸಮಸ್ಯೆಯಿಂದ ಈ ರೀತಿ ಆಗಿದೆ. ನಮಗೆ ಎಲ್ಲಾ ಶಾಲೆಗಳು ಒಂದೇ . ಆದೇಶ ಮಾಡಬೇಕಾದರೆ ಸರ್ಕಾರಿ ಶಾಲೆ, ಅನುದಾನಿತ ಶಾಲೆ ಅಂತಾ ಹಾಕಿದ್ದಾರೆ. ಅದು ಎಲ್ಲಾ ಶಾಲೆಗಳು ಅಂತಾ ಹಾಕಿಸುತ್ತೇವೆ. ನಮ್ಮ ಸರ್ಕಾರ ಕನ್ನಡ ಬಗ್ಗೆ ಕಾಳಜಿ ಇಟ್ಟಿದೆ. ನಾವು ಬಹಳ ಸ್ಪಷ್ಟವಾಗಿ ಇದ್ದೇವೆ. ಆದೇಶ ಪ್ರತಿಯ ಸಾಧಕ ಭಾದಕ ಹೇಳಬೇಕು. ಮಾಧ್ಯಮ ಮಿತ್ರರಿಗೆ ಇದರ ಬಗ್ಗೆ ತಿಳಿಸಬೇಕು ಅಂತಾನೇ ಬಂದೆ. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ.
ಧೈರ್ಯವಾಗಿ ಪ್ರಶ್ನಿಸಿದ ಬಳಿಕ ಎಚ್ಚೆತ್ತ ಸರ್ಕಾರ, ಇಲಾಖೆ; ಮರಳಿ ಬಂದ 'ಕೈ ಮುಗಿದು ಒಳಗೆ ಬಾ' ಸಾಲು!