ಆತ್ಯಾಚಾರ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಶೇಷ ತನಿಖಾ ತಂಡದ(ಎಸ್‌ಐಟಿ) ವಿಚಾರಣೆ ವೇಳೆ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಗ್ಗೆ ಸರಿಯಾದ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು (ಜೂ.10): ಆತ್ಯಾಚಾರ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಶೇಷ ತನಿಖಾ ತಂಡದ(ಎಸ್‌ಐಟಿ) ವಿಚಾರಣೆ ವೇಳೆ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಗ್ಗೆ ಸರಿಯಾದ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಬಳಸುತ್ತಿದ್ದ ಮೊಬೈಲ್ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಪ್ರಶ್ನಿಸಿದರೆ, ತನ್ನ ಬಳಿ ಯಾವುದೇ ಸ್ವಂತ ಮೊಬೈಲ್ ಅಥವಾ ಸಿಮ್ ಕಾರ್ಡ್ ಇಲ್ಲ, ಕಾರ್ಯಕರ್ತರು, ಆಪ್ತ ಸಹಾಯಕ, ಚಾಲಕರ ಮೊಬೈಲ್ ಬಳಸುತ್ತಿದ್ದೆ ಪ್ರಜ್ವಲ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಪ್ರಜ್ವಲ್ ಈ ಹಿಂದೆ ತಮ್ಮ ಗೆಳತಿಗೆ ಮೊಬೈಲ್ ಹಾಗೂ ಕೆಲ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಕೊಡಿಸಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಶೀಘ್ರದಲ್ಲೇ ಪ್ರಜ್ವಲ್ ಗೆಳತಿಯನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮೇ 31ರಂದು ವಿದೇಶದಿಂದ ಬಂದ ಪ್ರಜ್ವಲ್‌ನನ್ನು ಎಸ್ ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ಆದರೆ ಈ ಆರು ದಿನಗಳ ಪೈಕಿ ಮೂರು ದಿನ ವಿಶ್ರಾಂತಿ, ಲೋಕಸಭಾ ಚುನಾವಣೆ ಫಲಿತಾಂಶ, ವೈದ್ಯ ಕೀಯ ಪರೀಕ್ಷೆ ಕಾರಣದಿಂದ ವಿಚಾರಣೆಗೆ ಒಳಪಟ್ಟಿರಲಿಲ್ಲ. ಮೂರು ದಿನ ಮಾತ್ರ ಎಸ್‌ಐಟಿ ವಿಚಾರಣೆ ಮಾಡಿದೆ.
ವಿದೇಶದಲ್ಲಿದ್ದಾಗ ಪ್ರಜ್ವಲ್ ರೇವಣ್ಣಗೆ ಹಣ ಕಳಿಸಿದ್ದ ಗೆಳತಿಗೆ ಸಂಕಷ್ಟ: ಎಸ್‌ಐಟಿ ನೋಟಿಸ್
ಕಸ್ಟಡಿ ಅವಧಿ ಇಂದು ಅಂತ್ಯ: ಆರು ದಿನಗಳ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಪಡೆದು ಎಸ್‌ಐಟಿ ಅಧಿಕಾರಿಗಳ ವಿಚಾರಣೆಗೆ ಒಳಪಡಿಸಿದ್ದರು. ಈ ನಾಲ್ಕು ದಿನಗಳ ಕಸ್ಟಡಿ ಅವಧಿಯೂ ಸೋಮವಾರ(ಜೂ.10) ಅಂತ್ಯವಾಗಲಿದೆ. ಹೀಗಾಗಿ ಎಸ್‌ಐಟಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಕಸ್ಟಡಿಗೆ ಕೇಳಲಿದೆ ಎಂದು ಮೂಲಗಳು ತಿಳಿಸಿವೆ.