ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ದುಬೈ ನಂಟು ಬಯಲು, 40 ಬಾರಿ ವಿದೇಶ ಪ್ರವಾಸ!

Published : Mar 05, 2025, 11:29 AM ISTUpdated : Mar 05, 2025, 01:27 PM IST
ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ದುಬೈ ನಂಟು ಬಯಲು, 40 ಬಾರಿ ವಿದೇಶ ಪ್ರವಾಸ!

ಸಾರಾಂಶ

ನಟಿ ರನ್ಯಾ ರಾವ್ 14.8 ಕೆ.ಜಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ 40 ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದು ಅನುಮಾನಕ್ಕೆ ಕಾರಣವಾಗಿದೆ. ಮಲೇಷ್ಯಾ-ಬೆಂಗಳೂರು-ದುಬೈ ನಡುವೆ ಹಣದ ಹರಿವಿನ ಶಂಕೆ ಇದ್ದು, ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ನಡೆಯುತ್ತಿದೆ. ರನ್ಯಾ ಮನೆಯಲ್ಲಿ 2.5 ಕೋಟಿ ರೂ. ನಗದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಮತ್ತಷ್ಟು ಗಣ್ಯರ ಮಕ್ಕಳ ಪಾತ್ರವಿರುವ ಸಾಧ್ಯತೆ ಇದೆ.

ಬೆಂಗಳೂರು (ಮಾ.5): ದುಬೈನಿಂದ  ₹12 ಕೋಟಿ ಮೌಲ್ಯದ 14.8 ಕೇಜಿ ತೂಕದ ಚಿನ್ನದ ಬಿಸ್ಕೆಟ್‌ ಹಾಗೂ ಗಟ್ಟಿಗಳ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 14 ದಿನ ನ್ಯಾಯಾಂಗ ಬಂಧನದಲ್ಲಿರುವ ರಾಜ್ಯ ಪೊಲೀಸ್ ಗೃಹ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ಮತ್ತು ಚಲನಚಿತ್ರ ನಟಿ ರನ್ಯಾ ರಾವ್‌ ಟ್ರಾವೆಲ್‌ ಹಿಸ್ಟರಿಯೇ ಕುತೂಹಲ ಮೂಡಿಸಿದೆ. ಕಳೆದೊಂದು ವರ್ಷದಿಂದ 40 ಬಾರಿ ದುಬೈ ಪ್ರವಾಸ ಮಾಡಿದ್ದಾಳೆ.

ಕಳೆದೊಂದು ವರ್ಷದಿಂದ 30 ರಿಂದ 40 ಬಾರಿ ದುಬೈಗೆ ರನ್ಯಾ ಹೋಗಿ ಬಂದಿದ್ದರು. ಅಲ್ಲದೆ ಹದಿನೈದು ದಿನಗಳಿಗೊಮ್ಮೆ ಆಕೆಯ ದುಬೈ ಪ್ರಯಾಣವೇ ಡಿಆರ್‌ಐ ಅಧಿಕಾರಿಗಳ ಅನುಮಾನಕ್ಕೆ ಪ್ರಮುಖ ಕಾರಣವಾಗಿದೆ. ಪ್ರತಿ ಬಾರಿ ದುಬೈಗೆ ಪ್ರಯಾಣಿಸಿದಾಗ ಗೋಲ್ಡ್ ಸ್ಮಗ್ಲಿಂಗ್‌ನಲ್ಲಿ ಆಕೆ ಪಾತ್ರವಹಿಸಿರುವ ಶಂಕೆ ಇದೆ ಎಂದು ಮೂಲಗಳು ಹೇಳಿವೆ.

ಸ್ಮಗ್ಲಿಂಗ್‌ನಲ್ಲಿ ನಟಿ ರನ್ಯಾ ಜೈಲು ಪಾಲು, ಇತ್ತ ನಿವಾಸದಲ್ಲಿ ಅಕ್ರಮ 2.50 ಕೋಟಿ ನಗದು ಪತ್ತೆ!

ಮಲೇಷ್ಯಾ-ಬೆಂಗಳೂರು-ದುಬೈ?
ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೃತ್ಯ ಹಿಂದೆ ಹಣದ ಹರಿವಿನ ಮೂಲವು ಬೆಂಗಳೂರು-ಮಲೇಷ್ಯಾ ಹಾಗೂ ದುಬೈ ನಡುವೆ ಸಂಪರ್ಕ ಹೊಂದಿದೆ ಎಂಬ ಮಾತುಗಳು ಕೇಳಿ ಬಂದಿವೆ. ಮಲೇಷ್ಯಾದಿಂದ ಕೆಲವು ನಿಷೇಧಿತ ವಸ್ತುಗಳು ಬೆಂಗಳೂರಿಗೆ ಅಕ್ರಮವಾಗಿ ಬಂದು ಬಿಕರಿಯಾಗಿವೆ. ಅವುಗಳಿಂದ ಸಂಪಾದಿಸಿದ ಹಣವು ಕ್ರಿಪ್ಟೋ ಕರೆನ್ಸಿ (ಬಿಟ್‌ ಕಾಯಿನ್‌) ವರ್ಗಾವಣೆಯಾಗಿ ಅದರ ಮೂಲಕ ದುಬೈನಲ್ಲಿ ಚಿನ್ನ ಖರೀದಿಯಾಗಿದೆ. ಈ ಚಿನ್ನದ ಸಾಗಾಣಿಕೆಯಲ್ಲಿ ರನ್ಯಾ ಪಾತ್ರವಹಿಸಿದ್ದಾರೆ ಎಂದು ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ಇದೊಂದು ವ್ಯವಸ್ಥಿತ ಜಾಲವಾಗಿದೆ. ರನ್ಯಾ ಸಂಪರ್ಕದಲ್ಲಿದ್ದವರ ಶೋಧನೆ ಮುಂದುವರೆಸಿದರೆ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗುತ್ತವೆ. ಮಲೇಷ್ಯಾದಿಂದ ಬಂದ ‘ನಿಷೇಧಿತ ವಸ್ತು’ ಮಾರಾಟದಲ್ಲಿ ಪಾತ್ರವಹಿಸಿದ್ದವರು ಸಿಕ್ಕಿ ಬೀಳುತ್ತಾರೆ ಎಂದು ಮೂಲಗಳು ತಿಳಿಸಿವೆ.

ದುಬೈನಿಂದ 15ಕೆಜಿ ಚಿನ್ನ ಸಾಗಿಸಿ ಸಿಕ್ಕಿಬಿದ್ದ ಕನ್ನಡ ನಟಿ, ಕಿಚ್ಚನಿಗೆ ನಾಯಕಿಯಾಗಿದ್ದ ರನ್ಯಾ ರಾವ್ ಬಂಧನ!

ಮತ್ತಷ್ಟು ಗಣ್ಯರ ಮಕ್ಕಳ ಪಾತ್ರ ಶಂಕೆ?
ನಟಿ ರನ್ಯಾ ಬಳಿ ಪತ್ತೆಯಾದ ಬಂಗಾರ ಮೂಲದ ಶೋಧಿಸಿದರೆ ಮತ್ತಷ್ಟು ಗಣ್ಯರ ಮಕ್ಕಳು ಸಿಕ್ಕಿಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರಲ್ಲಿ ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಉದ್ಯಮಿಗಳ ಮಕ್ಕಳು ಸೇರಿದ್ದಾರೆ. ಇದು ಶ್ರೀಮಂತರ ಮಕ್ಕಳ ‘ಹೈಟೆಕ್‌’ ವ್ಯವಹಾರವಾಗಿದೆ ಎಂದು ಮೂಲಗಳು ಹೇಳಿವೆ.

ರನ್ಯಾಗೆ ₹1.20 ಕೋಟಿ ಲಾಭ!
ರನ್ಯಾ ರಾವ್‌ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ 14.8 ಕೆ.ಜಿ. ಚಿನ್ನ ಸಾಗಿಸಿದ್ದಾರೆ. ದುಬೈನಲ್ಲಿ 1 ಕೆ.ಜಿ. ಚಿನ್ನದ ದರ ₹81 ಲಕ್ಷ ಇದ್ದರೆ, ಬೆಂಗಳೂರಿನಲ್ಲಿ ₹89 ಲಕ್ಷ ಇದೆ. ಅಂದರೆ, ರನ್ಯಾ ರಾವ್‌ಗೆ ₹1.20 ಕೋಟಿ ಲಾಭವಾಗಿದೆ. ವಿದೇಶದಿಂದ ಚಿನ್ನ ಅಮದು ಮಾಡಿಕೊಳ್ಳಲು ಅವಕಾಶವಿದೆ. ಶೇ.6ರಷ್ಟು ತೆರಿಗೆ ಪಾವತಿಸಬೇಕು. ರನ್ಯಾ ರಾವ್‌ ಇಲ್ಲಿ ತೆರಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ.

ಇಡಿ ತನಿಖೆಗೆ ಸಾಧ್ಯತೆ:
ರನ್ಯಾ ರಾವ್‌ ದುಬೈನಿಂದ ಸುಮಾರು ₹12 ಕೋಟಿ ಮೌಲ್ಯದ 14.8 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಿದ್ದಾರೆ. ಇಷ್ಟು ಪ್ರಮಾಣದ ಚಿನ್ನದ ಖರೀದಿಗೆ ಆಕೆಯ ಬಳಿ ಭಾರೀ ಪ್ರಮಾಣದ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಎದುರಾಗಿದೆ. ಇದರ ಹಿಂದೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಜಾರಿ ನಿರ್ದೇಶನಾಲಯ(ಇ.ಡಿ.)ವು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆಯಿದೆ.

ಈ ನಡುವೆ ರನ್ಯಾ ರಾವ್‌ ಮನೆಯಲ್ಲಿ ಸುಮಾರು 2.50 ಕೋಟಿ ರು. ಅಕ್ರಮ ನಗದು ಪತ್ತೆಯಾಗಿದೆ. ಲ್ಯಾವೆಲ್ಲೆ ರಸ್ತೆಯ ಅಪಾರ್ಟ್‌ಮೆಂಟ್‌ನ ನಟಿ ಫ್ಲ್ಯಾಟ್‌ ಮೇಲೆ ಮಂಗಳವಾರ ರಾತ್ರಿ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಆಕೆಯ ಫ್ಲ್ಯಾಟ್‌ನಲ್ಲಿ 2.50 ಕೋಟಿ ರು. ನಗದು ಪತ್ತೆಯಾಗಿದೆ. ಹೀಗಾಗಿ ನಟಿ ರನ್ಯಾಗೆ ಜಾರಿ ನಿರ್ದೇಶನಾಲಯ(ಇ.ಡಿ)ದ ಸಂಕಷ್ಟ  ತಪ್ಪಿದ್ದಲ್ಲ.

ತಮ್ಮ ಪತಿ ಜಿತಿನ್ ಹುಕ್ಕೇರಿ ಜತೆ ದುಬೈನಿಂದ ಕೆಐಎಗೆ ಸೋಮವಾರ ರಾತ್ರಿ 7ರ ಸುಮಾರಿಗೆ ಬಂದಿಳಿದ ರನ್ಯಾ ಅವರನ್ನು ಡಿಆರ್‌ಇ  ಅಧಿಕಾರಿಗಳು ಬಂಧಿಸಿದ್ದರು. ಆಗ ಆಕೆ ಧರಿಸಿದ್ದ ಬಟ್ಟೆಯಲ್ಲಿಯೇ ಮುಕ್ಕಾಲು ಪಾಲು ಚಿನ್ನ ಪತ್ತೆಯಾಗಿತ್ತು. ಸದ್ಯ ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ರನ್ಯಾಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌