
ದುಬೈನಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರಾಜ್ಯ ಪೊಲೀಸ್ ಗೃಹ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ಮತ್ತು ಚಲನಚಿತ್ರ ನಟಿ ರನ್ಯಾ ರಾವ್ ಮನೆಯಲ್ಲಿ ಸುಮಾರು 2.50 ಕೋಟಿ ರು. ನಗದು ಪತ್ತೆಯಾಗಿದೆ. ಲ್ಯಾವೆಲ್ಲೆ ರಸ್ತೆಯ ಅಪಾರ್ಟ್‌ಮೆಂಟ್‌ನ ನಟಿ ಫ್ಲ್ಯಾಟ್ ಮೇಲೆ ಮಂಗಳವಾರ ರಾತ್ರಿ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಆಕೆಯ ಫ್ಲ್ಯಾಟ್‌ನಲ್ಲಿ 2.50 ಕೋಟಿ ರು. ನಗದು ಪತ್ತೆಯಾಗಿದೆ. ಹೀಗಾಗಿ ನಟಿ ರನ್ಯಾಗೆ ಜಾರಿ ನಿರ್ದೇಶನಾಲಯ(ಇ.ಡಿ)ದ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ತಮ್ಮ ಪತಿ ಜಿತಿನ್ ಹುಕ್ಕೇರಿ ಜತೆ ದುಬೈನಿಂದ ಕೆಐಎಗೆ ಸೋಮವಾರ ರಾತ್ರಿ 7ರ ಸುಮಾರಿಗೆ ಬಂದಿಳಿದ ರನ್ಯಾ ಅವರನ್ನು ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲೆಜೆನ್ಸಿ (ಡಿಆರ್‌ಇ) ಅಧಿಕಾರಿಗಳು ಬಂಧಿಸಿದ್ದರು. ತಪಾಸಣೆಗೆ ಒಳಪಡಿಸಿದಾಗ ಅವರು ಧರಿಸಿದ್ದ ಲೆದರ್ ಜಾಕೆಟ್‌ನಲ್ಲಿ ₹12 ಕೋಟಿ ಮೌಲ್ಯದ 14.8 ಕೇಜಿ ತೂಕದ ಚಿನ್ನದ ಬಿಸ್ಕೆಟ್ ಹಾಗೂ ಗಟ್ಟಿಗಳು ಪತ್ತೆಯಾಗಿತ್ತು.
ತೀವ್ರ ವಿಚಾರಣೆ ಬಳಿಕ ಅಧಿಕಾರಿಗಳು ಮಂಗಳವಾರ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಸದ್ಯ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿದೆ.
Kannada Entertainment Live: ಕನ್ನಡ ನಟಿ ಮನೆಯಲ್ಲಿ 2.50 ಕೋಟಿ ನಗದು ಪತ್ತೆ
ಡಿಜಿಪಿಗೆ ಮಲಮಗಳು ಹೇಗೆ?
ಆಂಧ್ರಪ್ರದೇಶ ಮೂಲದ ಡಿಜಿಪಿ ರಾಮಚಂದ್ರರಾವ್ ಅವರು, ಚಿಕ್ಕಮಗಳೂರು ಜಿಲ್ಲೆ ಕಾಫಿ ಪ್ಲಾಂಟರ್ ಮಾಲಕಿಯ ಜತೆ 2ನೇ ವಿವಾಹವಾಗಿದ್ದರು. ಐಪಿಎಸ್ ಅಧಿಕಾರಿ ಜತೆ ವಿವಾಹಕ್ಕೂ ಪೂರ್ವದ ದಾಂಪತ್ಯದಲ್ಲಿ ಅವರಿಗೆ ರನ್ಯಾ ಅಲಿಯಾಸ್ ಹರ್ಷವರ್ಧಿನಿ ಹಾಗೂ ರಿಷಬ್ ಹೆಸರಿನ ಮಕ್ಕಳಿದ್ದರು.
ಬಳಿಕ ರನ್ಯಾ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದು ಮುಗಿಸಿ ಚಲನಚಿತ್ರ ರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದರು. ಖ್ಯಾತ ನಟ ಕಿಚ್ಚ ಸುದೀಪ್ ನಟನೆಯ ‘ಮಾಣಿಕ್ಯ’ ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ರನ್ಯಾ ಪರಿಚಯವಾಗಿದ್ದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಪಟಾಕಿ’ ಚಿತ್ರದಲ್ಲೂ ನಾಯಕಿಯಾಗಿ ಮಿಂಚಿದ್ದರು.
ಬಣ್ಣದ ಲೋಕದಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಹೋದ ನಂತರ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಜಿತಿನ್ ಜತೆ ರನ್ಯಾ ಮದುವೆಯಾಗಿತ್ತು. ಮದುವೆ ಬಳಿಕ ತನ್ನ ಪತಿ ಜತೆ ವಿಕ್ಟೋರಿಯಾ ಲೇಔಟ್‌ನಲ್ಲಿ ರನ್ಯಾ ನೆಲೆಸಿದ್ದರು ಎಂಬುದು ಮೂಲಗಳ ಮಾಹಿತಿ.
ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ದುಬೈ ನಂಟು ಬಯಲು, 40 ಬಾರಿ ವಿದೇಶ ಪ್ರವಾಸ!
ಆಫೀಸರ್‌ಗೆ ಆವಾಜ್ ಹಾಕಿ ತಪ್ಪಿಸಿಕೊಳ್ಳುತ್ತಿದ್ದ ರನ್ಯಾ:
ಈ ಬಂಧನಕ್ಕೂ ಎರಡು ವಾರಗಳ ಮುನ್ನ ಸಹ ದುಬೈಗೆ ರನ್ಯಾ ಹೋಗಿ ಬಂದಿದ್ದರು. ತಪಾಸಣೆ ವೇಳೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಜತೆ ರನ್ಯಾ ಜಗಳ ಮಾಡಿಕೊಂಡಿದ್ದರು. ತಾನು ಡಿಜಿಪಿ ಪುತ್ರಿ ಎಂದು ಹೇಳಿಕೊಂಡು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗದೆ ಹೊರ ಬರುತ್ತಿದ್ದರು. ಇಷ್ಟು ಮಾತ್ರವಲ್ಲ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಆಕೆಯನ್ನು ಕರೆತರಲು ಪ್ರತಿ ಬಾರಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಬಸವರಾಜು ಹೋಗುತ್ತಿದ್ದರು. ಈ ಜಗಳವಾದ ಬಳಿಕ ರನ್ಯಾಳ ವಿದೇಶ ಯಾತ್ರೆ ಕುರಿತು ಡಿಆರ್‌ಐ ಅಧಿಕಾರಿಗಳು ಕಣ್ಣಿಟ್ಟಿದ್ದರು.
ಕಳೆದೊಂದು ವರ್ಷದಿಂದ ನಿರಂತರವಾಗಿ ದುಬೈ ಹಾಗೂ ಮಲೇಷ್ಯಾಕ್ಕೆ ರನ್ಯಾ ಪಯಣಿಸಿದ್ದರು. ಅದರಲ್ಲೂ ಹೆಚ್ಚಿನ ಬಾರಿ ದುಬೈಗೆ ಹೋಗಿ ಭೇಟಿ ನೀಡಿದ್ದ ಪ್ರಯಾಣ ಚರಿತ್ರೆ ಸಿಕ್ಕಿದೆ. ಈ ಮಾಹಿತಿ ಹಿನ್ನಲೆಯಲ್ಲಿ ದುಬೈನಲ್ಲಿ ರನ್ಯಾಳ ಸಂಪರ್ಕ ಜಾಲವನ್ನು ಜಾಲಾಡಿದಾಗ ಆ ದೇಶದಲ್ಲಿ ಅವರ ಯಾವುದೇ ಬ್ಯುಸಿನೆಸ್ ಅಥವಾ ರಕ್ತ ಸಂಬಂಧಿಕರಿಲ್ಲದ ಸಂಗತಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ರನ್ಯಾಳ ದುಬೈ ಯಾತ್ರೆ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಶಂಕೆ ಮೂಡಿದೆ. ಹೀಗಿರುವಾಗ ರನ್ಯಾ ಮತ್ತೆ ದುಬೈಗೆ ಹೊರಟಾಗ ಅಧಿಕಾರಿಗಳು ಜಾಗೃತರಾಗಿದ್ದರು. ಅಂತೆಯೇ ದುಬೈನಿಂದ ಸೋಮವಾರ ರಾತ್ರಿ 7ಕ್ಕೆ ತಮ್ಮ ಪತಿ ಜತೆ ಕೆಐಎಗೆ ಬಂದಿಳಿದ ಕೂಡಲೇ ರನ್ಯಾ ಅವರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ