
ಬೆಂಗಳೂರು (ಮಾ.5): ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಬಂಧನ ಪ್ರಕರಣ ಕರ್ನಾಟಕದಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ಅದಲ್ಲದೆ, ಈಕೆಯ ತಂದೆ ಕರ್ನಾಟಕದ ಡಿಜಿಪಿ ಆಗಿರುವ ಕಾರಣಕ್ಕೆ ಈ ವಿಚಾರ ಮತ್ತಷ್ಟು ಕುತೂಹಲ ಕೆರಳಿಸಿದೆ. 14 ಕೆಜಿ ಚಿನ್ನದ ಬಾರ್‌ಗಳನ್ನು ಬೆಲ್ಟ್‌ನಲ್ಲಿ ಸಿಕ್ಕಿಸಿಕೊಂಡು ಬಂದು ಬಂಧನಕ್ಕೆ ಒಳಗಾಗಿರುವ ರನ್ಯಾ ರಾವ್, ಕರ್ನಾಟಕದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರ ಪುತ್ರಿ. ರನ್ಯಾ ರಾವ್ ಬಂಧನದ ಬೆನ್ನಲ್ಲಿಯೇ ಕೆ.ರಾಮಚಂದ್ರ ರಾವ್ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ಡೈರಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್‌ನ ಅಧಿಕಾರಿಗಳು ಸೋಮವಾರ ರನ್ಯಾ ರಾವ್ ದುಬೈನಿಂದ ಬೆಂಗಳೂರಿಗೆ ವಾಪಸಾಗುವಾಗ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಬಂಧಿಸಿದ್ದಾರೆ. 32 ವರ್ಷದ ನಟಿ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದು, ಕಿಚ್ಚು ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಬಂಧನಕ್ಕೆ ಒಳಗಾದ ರನ್ಯಾ ರಾವ್ ಅವರನ್ನು ಮಂಗಳವಾರ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 14 ಕೆಜಿಯ ಬಂಗಾರ ಸಿಕ್ಕಿರುವ ಕಾರಣ, ಬೆಂಗಳೂರು ಏರ್‌ಪೋರ್ಟ್‌ನಿಂದ ಕಾರ್ಯನಿರ್ವಹಿಸುವ ದೊಡ್ಡ ಮಟ್ಟದ ಸ್ಮಗ್ಲಿಂಗ್ ನೆಟ್‌ವರ್ಕ್‌ನ ಭಾಗವಾಗಿ ಇವರು ಕೆಲಸ ಮಾಡುತ್ತಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಈ ಪ್ರಕರಣ ಸಾರ್ವಜನಿಕರ ನಡುವೆ ಚರ್ಚೆಗೆ ಕಾರಣವಾದ ಬೆನ್ನಲ್ಲಿಯೇ, ಡಿಜಿಪಿ ರಾಮಚಂದ್ರ ರಾವ್ ತಮ್ಮ ಮಗಳ ಚುಟುವಟಿಕೆಯಲ್ಲಿ ತಮ್ಮದು ಯಾವುದೇ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ. 'ನಾಲ್ಕು ತಿಂಗಳ ಹಿಂದೆ ರನ್ಯಾ ರಾವ್ ಮದುವೆಯಾಗಿತ್ತು. ಅಂದಿನಿಂದ ಈಕೆ ಮನೆಗೆ ಭೇಟಿ ನೀಡಿಲ್ಲ. ಆಕೆ ಹಾಗೂ ಆಕೆಯ ಗಂಡನ ವ್ಯವಹಾರಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಇದು ನನಗೆ ಬಹಳ ಶಾಕ್ ನೀಡಿದ್ದು ಅದರೊಂದಿಗೆ ಬೇಸರವೂ ಆಗಿದೆ. ಈಕೆಯ ವಿರುದ್ಧ ಕಾನೂನು ರೀತ್ಯಾ ಕ್ರಮವಾಗಲಿದೆ' ಎಂದು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಿರಂತರವಾಗಿ ವಿದೇಶ ಪ್ರವಾಸ ಮಾಡುತ್ತಿದ್ದ ಕಾರಣಕ್ಕೆ ರನ್ಯಾ ರಾವ್ ಡಿಆರ್‌ಐನ ರಾಡಾರ್‌ನಲ್ಲಿದ್ದರು. 2025ರ ಜನವರಿಯಿಂದ ಇಲ್ಲಿಯವರೆಗೂ ಗಲ್ಫ್ ದೇಶಗಳಿಗೆ 10 ಬಾರಿ ಅವರು ಭೇಟಿ ನೀಡಿದ್ದಾರೆ. ಏರ್‌ಪೋರ್ಟ್ ಹಾಗೂ ಡಿಆರ್‌ಐನ ಅಧಿಕಾರಿಗಳು ಆಕೆಯ ಹಿಂದಿನ ಏರ್‌ಪೋರ್ಟ್ ಅರೈವಲ್‌ನ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಿದ್ದು, ಈ ಹಿಂದೆಯೂ ಅವರು ಚಿನ್ನವನ್ನು ಸ್ಮಗ್ಲಿಂಗ್ ಮಾಡುತ್ತಿದ್ದರೇ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿದೆ.
ಅಧಿಕಾರಿಗಳಿಗೆ ಮೀಸಲಾಗಿರುವ ಪ್ರೊಟೋಕಾಲ್ ಸವಲತ್ತುಗಳು ಆಕೆ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದವು ಎಂದು ಮೂಲಗಳು ಬಹಿರಂಗಪಡಿಸಿವೆ. ಪ್ರೊಟೋಕಾಲ್ ಅಧಿಕಾರಿಯೊಬ್ಬರು ಆಕೆಯನ್ನು ವಿಮಾನ ನಿಲ್ದಾಣದಿಂದ ಹೊರಗೆ ಕರೆದೊಯ್ಯುತ್ತಿದ್ದರು, ಆ ಮೂಲಕ ಆಕೆಯ ದೈಹಿಕ ತಪಾಸಣೆಯನ್ನು ತಪ್ಪಿಸುತ್ತಿದ್ದರು, ಅದರೊಂದಿಗೆ ಸರ್ಕಾರಿ ವಾಹನವು ಆಕೆಯನ್ನು ಕರೆದೊಯ್ಯುತ್ತಿತ್ತು ಇದರಿಂದಾಗಿ ಯಾವುದೇ ರಸ್ತೆ ತಪಾಸಣೆಗಳಿಂದ ಅವರು ಬಚಾವ್ ಆಗುತ್ತಿದ್ದರು.
ವಿವಾದಕ್ಕೆ ಮತ್ತೊಂದು ಪದರ ಸೇರಿಸುವುದಾದರೆ, ಡಿಜಿಪಿ ರಾವ್ ಸ್ವತಃ ಹಿಂದಿನ ಹಗರಣದಲ್ಲಿ ಸಿಲುಕಿದ್ದರು. 2014 ರಲ್ಲಿ, ಅವರು ಐಜಿಪಿ (ದಕ್ಷಿಣ ವಲಯ) ಆಗಿದ್ದಾಗ, ಕೇರಳ ಮೂಲದ ಆಭರಣ ವ್ಯಾಪಾರಿಯೊಬ್ಬರು ಮೈಸೂರು ಪೊಲೀಸರು ಖಾಸಗಿ ಬಸ್‌ನಿಂದ ವಶಪಡಿಸಿಕೊಂಡ 2 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ನಂತರ ಸಿಐಡಿ ಪ್ರಕರಣವನ್ನು ತನಿಖೆ ಮಾಡಿತು ಮತ್ತು ರಾವ್ ಅವರ ಗನ್‌ಮ್ಯಾನ್ ಅನ್ನು ಡಕಾಯಿತಿಗಾಗಿ ಬಂಧಿಸಿತು.
ಜೈಲುಪಾಲಾದ ಡಿಜಿಪಿ ಮಲ ಮಗಳು ನಟಿ ರನ್ಯಾಗೂ ಚಿಕ್ಕಮಗಳೂರಿಗೂ ನಂಟೇನು? ಚಿನ್ನ ಎಲ್ಲಿಟ್ಟಿದ್ದಳು ಗೊತ್ತಾ?
ಕಳ್ಳಸಾಗಣೆ ದಂಧೆಯಲ್ಲಿ ರನ್ಯಾ ಅವರ ಪಾತ್ರವನ್ನು ಈಗ ಅನೇಕ ಸಂಸ್ಥೆಗಳು ತನಿಖೆ ನಡೆಸುತ್ತಿರುವುದರಿಂದ, ಆಕೆಯ ಒಳಗೊಳ್ಳುವಿಕೆಯ ಪ್ರಮಾಣ ಮತ್ತು ದೊಡ್ಡ ಸಂಘಟಿತ ಜಾಲಗಳೊಂದಿಗೆ ಸಂಭಾವ್ಯ ಸಂಪರ್ಕವನ್ನು ನಿರ್ಧರಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಚಿನ್ನದಂಥ ಹುಡುಗಿಯಲ್ಲ, ಈಕೆ ಚಿನ್ನದ ಕಳ್ಳಿ, 14.8 KG ಚಿನ್ನ ಬಚ್ಚಿಟ್ಟುಕೊಂಡು ತಂದಿದ್ದೆಲ್ಲಿ ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ