ದುಬೈನಿಂದ ಚಿನ್ನ ಅಕ್ರಮ ಸಾಗಣೆ ಮಾಡಿದ ಪ್ರಕರಣದಲ್ಲಿ ರನ್ಯಾರಾವ್ ಅವರನ್ನು ವಶಕ್ಕೆ ಪಡೆದ ಘಟನೆಗೆ ಸಂಬಂಧಿಸಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಭದ್ರಪಡಿಸಲು ಹೈಕೋರ್ಟ್ ಡಿಆರ್‌ಐ ಮತ್ತು ಕೆಐಎಎಲ್ಗೆ ಸೂಚನೆ ನೀಡಿದೆ. ರನ್ಯಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು (ಏ.2): ದುಬೈನಿಂದ ಚಿನ್ನ ಅಕ್ರಮ ಸಾಗಣೆ ಮಾಡಿದ ಪ್ರಕರಣದಲ್ಲಿ ರನ್ಯಾರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಕ್ಕೆ ಪಡೆದ ಮಾ.3ರ ಸಂಜೆಯಿಂದ ಮಾ.4ರ ಮುಂಜಾನೆ ವರೆಗಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಭದ್ರಪಡಿಸಲು ಸೂಚಿಸುವಂತೆ ಕೋರಿರುವ ಅರ್ಜಿ ಸಂಬಂಧ ಡಿಆರ್‌ಐ ಮತ್ತು ಕೆಐಎಎಲ್ಗೆ ಹೈಕೋರ್ಟ್ ನೋಟಿಸ್ ನೀಡಿದೆ.
ಈ ಕುರಿತು ರನ್ಯಾ ತಾಯಿ ರೋಹಿಣಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಕೆಐಎಎಲ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕಸ್ಟಮ್ಸ್ ಇಲಾಖೆ, ಡಿಆರ್‌ಐಗೆ ನೋಟಿಸ್ ಜಾರಿ ಮಾಡಿತು. ಅಲ್ಲದೆ, ಬುಧವಾರ ಸಂಜೆಗೆ ದತ್ತಾಂಶ ಡಿಲೀಟ್ ಆಗಲಿದ್ದು, ಬೆಳಗ್ಗೆ ಈ ಆದೇಶ ಮಾಡಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಚಿನ್ನ ಅಕ್ರಮ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಬೇಲ್ ಇಲ್ಲ, ಕಾರಣವೇನು?
ಅರ್ಜಿದಾರ ರೋಹಿಣಿ ಪರ ವಕೀಲರು, ಮಾ.3ರಂದು ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದೆ. ಅಂದು ಸಂಜೆ 4.30ಕ್ಕೆ ಎಮಿರೇಟ್ಸ್ ವಿಮಾನದಿಂದ ರನ್ಯಾ ಹೊರ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಬಂಧಿಸಿ, ಅವರ ಬಳಿಯಿಂದ ಚಿನ್ನ ಜಪ್ತಿ ಹಾಗೂ ಮಹಜರು ಮಾಡಿರುವ ದೃಶ್ಯಗಳು ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ಸೆರೆಯಾಗಿದೆ. ಸಾಮಾನ್ಯವಾಗಿ 30 ದಿನಗಳಾದ ತಕ್ಷಣ ಸ್ವಯಂಚಾಲಿತವಾಗಿ ಸಿಸಿಟಿವಿ ದತ್ತಾಂಶ ಡಿಲೀಟ್ ಆಗಲಿದೆ. ಆದ್ದರಿಂದ ರನ್ಯಾ ಬಂಧನಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿಡಬೇಕು. ಈಗಾಗಲೇ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ನಾಶವಾಗಿದ್ದರೆ, ಅದನ್ನು ಪುನರ್ ಪಡೆಯುವುದಕ್ಕೆ ಸೂಚಿಸಬೇಕು ಎಂದು ಕೋರಿದರು.
ಇದನ್ನೂ ಓದಿ: ನಟಿ ರನ್ಯಾ ರಾವ್ ಪ್ರೋಟೋಕಾಲ್ ಬಗ್ಗೆ ತಂದೆಗೆ ಗೊತ್ತಿತ್ತು: ಸರ್ಕಾರಕ್ಕೆ ಗೌರವ್ ಗುಪ್ತಾ ವರದಿ
ಜಾಮೀನು ಕೋರಿ ರನ್ಯಾ ಹೈಕೋರ್ಟ್‌ಗೆ
ಚಿನ್ನ ಕಳ್ಳ ಸಾಗಣೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ರಾವ್ ಇದೀಗ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣ ಸಂಬಂಧ ಮೊದಲಿಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ ಆರ್ಥಿಕ ಅಪರಾಧಗಳ ಕುರಿತ ವಿಶೇಷ ನ್ಯಾಯಾಲಯ (ಮ್ಯಾಜಿಸ್ಟ್ರೇಟ್) ಮಾ.14ರಂದು ವಜಾಗೊಳಿಸಿತ್ತು. ನಂತರ ರನ್ಯಾ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ರನ್ಯಾ ಅವರ ಜಾಮೀನು ಅರ್ಜಿಯನ್ನು ಮಾ.27ರಂದು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ ಜಾಮೀನು ಕೋರಿ ಇದೀಗ ರನ್ಯಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.