
ರಾಯಚೂರು (ಏ.2): ಮೊಲಗಳ ಬೇಟೆ ಮತ್ತು ಕೈಯಲ್ಲಿ ಖಡ್ಗ ಇತರ ಮಾರಕಾಸ್ತ್ರ ಹಿಡಿದು ಮೆರವಣಿಗೆ ಮಾಡಿ ವಿಕೃತಿ ಮೆರೆದ ಹಿನ್ನೆಲೆಯಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರ ಪುತ್ರ ಸತೀಶಗೌಡ ತುರ್ವಿಹಾಳ ಹಾಗೂ ತಮ್ಮ ಆರ್. ಸಿದ್ದನಗೌಡ ತುರ್ವಿಹಾಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲೆ ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಸೋಮವಾರ ಪ್ರತಿ ವರ್ಷದಂತೆ ಯುಗಾದಿ ಹಬ್ಬ ಹಾಗೂ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಡೆದ ಮೆರವಣಿಗೆಯಲ್ಲಿ ಶಾಸಕರ ಪುತ್ರ ಸತೀಶಗೌಡ ತುರ್ವಿಹಾಳ ಹಾಗೂ ತಮ್ಮ ಆರ್. ಸಿದ್ದನಗೌಡ ತುರ್ವಿಹಾಳ ಅವರು ಬೇಟಿಯಾಡಿದ ಮೊಲಗಳನ್ನು ಕಟ್ಟಿಗೆಗೆ ನೇತುಹಾಕಿಕೊಂಡು, ಕೈಯಲ್ಲಿ ಖಡ್ಗ ಹಾಗೂ ಇತರೆ ಮಾರಕಾಸ್ತ್ರ ಹಿಡಿದು ಮೆರವಣಿಗೆಯಲ್ಲಿ ಸಾಗುವಾಗ ಕುಣಿದಾಡುತ್ತಾ ವಿಕೃತಿ ಮೆರೆದಿದ್ದರು.
ಇದನ್ನೂ ಓದಿ: ಗಂಧದ ಮರ ಕಡಿದ್ರೆ ಕನಿಷ್ಠ 50 ಸಾವಿರ ದಂಡ: ಹೈಕೋರ್ಟ್ ಆದೇಶ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮೊಲ ಬೇಟೆ ಹಾಗೂ ಇದರ ಜೊತೆ ಮಾರಾಕಾಸ್ತ್ರ ಪ್ರದರ್ಶನ ಆರೋಪದಡಿ ಶಾಸಕರ ಸಹೋದರ 1ನೇ ಆರೋಪಿ ಸಿದ್ದನಗೌಡ, 2ನೇ ಆರೋಪಿ ಶಾಸಕರ ಪುತ್ರ ಸತೀಶ್‌ಗೌಡ, ಸ್ಥಳೀಯ ನಿವಾಸಿ ದುರುಗೇಶ ಸೇರಿದಂತೆ ಇನ್ನಿತರರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, 51 ಅಡಿ ಹಾಗೂ ಸೆಕ್ಷನ್ 9 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾನ್ವಿ ವಲಯ ಅರಣ್ಯಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಮುಂದಿನ ಹಂತದ ತನಿಖೆ ಕೈಗೊಂಡಿರುದಾಗಿ ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ಪ್ರವೀಣ್ ಎಸ್. ತಿಳಿಸಿದ್ದಾರೆ.
ನಮ್ಮ ಕುಟುಂಬಸ್ಥರು ಬೇಟಿಯಾಡಿಲ್ಲ: ಶಾಸಕ
ರಾಯಚೂರು: ಮೊಲಗಳ ಬೇಟೆ ಹಾಗೂ ಮೆರವಣಿಗೆಯಲ್ಲಿ ಮಾರಕಾಸ್ತ್ರ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು, ಯುಗಾದಿ ಮತ್ತು ಶಂಕರಲಿಂಗೇಶ್ವರ ಜಾತ್ರೆ ನಿಮಿತ್ತ ಮೆರವಣಿಗೆ ಮಾಡಲಾಗಿದೆ. ಮೊದಲಿನಿಂದಲೂ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದು ಆಯುಧಗಳಿಗೆ ಪೂಜೆ ಮಾಡುವ ಕಾರ್ಯಕ್ರಮವಾಗಿದ್ದು, ಆಯುಧಗಳನ್ನು ಕೆಟ್ಟದಕ್ಕೆ ಬಳಿಸುವಂಥದ್ದಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಂಪನಾಳ ಸರ್ಕಾರಿ ಆಸ್ಪತ್ರೆಗೆ ಬೀಗ: ವೈದ್ಯರಿಲ್ಲ, ಕಿಡಿಗೇಡಿಗಳ ಅಡ್ಡೆ!
ನಮ್ಮ ಕುಟುಂಬಸ್ಥರು ಮೊಲಗಳ ಬೇಟೆಯಾಡಿಲ್ಲ ಆದರೆ, ಸಾರ್ವಜನಿಕರೇ ಮೊಲಗಳ ಬೇಟಿಯಾಡಿದ್ದು, ಯಾವ ರೀತಿಯಾಗಿ ಬೇಟೆಯನ್ನಾಡಿದ್ದಾರೆಯೋ ಗೊತ್ತಿಲ್ಲ. ಮೆರವಣಿಗೆಯಲ್ಲಿ ಜನರೇ ನಮ್ಮ ಪುತ್ರ ಹಾಗೂ ಸಹೋದರರನ್ನು ಎತ್ತಿಕೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿದ್ದಾಗ ಇಂತಹ ಆಚರಣೆ, ಪದ್ಧತಿಗಳನ್ನು ಕೈಬಿಡಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವವನ್ನು ಮಾಡಲಾಗುವುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ