
ಬಸವರಾಜ ಹಿರೇಮಠ
ಬದುಕಿನ ಅನಿವಾರ್ಯತೆ ಧಾರವಾಡದ ಮಂಡಿಹಾಳದ ಲಕ್ಷ್ಮವ್ವ ಅವರನ್ನು ಕೃಷಿಗೆ ದೂಡಿತು. ಆದರೆ ಪಾಲಿಗೆ ಬಂದ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಿ ಯಶಸ್ವಿ ರೈತ ಮಹಿಳೆ ಎಂಬ ಗೌರವಕ್ಕೆ ಅವರಿಂದು ಪಾತ್ರವಾಗಿದ್ದಾರೆ.
ಲಕ್ಷ್ಮವ್ವ ಹಡಪದ ಮಣ್ಣನ್ನೇ ನಂಬಿ ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ. ಕೌಟುಂಬಿಕ ಅನಿವಾರ‍್ಯತೆಯಿಂದ ನೇಗಿಲು ಹಿಡಿದ ಈ ಮಹಿಳೆ ಇಡೀ ಕುಟುಂಬವನ್ನು ಸಲಹುತ್ತಾ, ಸ್ವಾಲವಂಬಿಯಾಗಿ ಮುನ್ನಡೆಯುತ್ತಿದ್ದಾರೆ. ಬದ್ಧತೆ, ನಂಬಿಕೆಯಿಂದ ದುಡಿದರೆ ಕೃಷಿ ಕೈ ಹಿಡಿಯುತ್ತದೆ ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ.
ಹವಾಮಾನ ವೈಪರೀತ್ಯ, ಕೂಲಿ ಕಾರ್ಮಿಕರ ಸಮಸ್ಯೆ, ಬೆಲೆ ಏರಿಳಿತದ ಮಧ್ಯೆಯೂ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಲಕ್ಷ್ಮವ್ವ ಸುಮಾರು 30 ವರ್ಷಗಳ ಕಾಲ ಎತ್ತುಗಳನ್ನು ನೊಗಕ್ಕೆ ಕಟ್ಟಿಹೊಲದ ಕೆಲಸ ಮಾಡಿದವರು. ಈಗ ಇವರಿಗೆ 54 ವರ್ಷ ವಯಸ್ಸು. ಹೀಗಾಗಿ ಎತ್ತುಗಳನ್ನು ಬಿಟ್ಟು ಕೈ ಕೆಲಸದಲ್ಲಿಯೇ ಕೃಷಿ ನಿಭಾಯಿಸುತ್ತಿದ್ದಾರೆ. ತಮ್ಮ ಐದು ಎಕರೆ ಹೊಲದಲ್ಲಿ ಮಾವು, ತೆಂಗು, ಸಾಂಪ್ರದಾಯಿಕ ಬೆಳೆಗಳು, ತರಕಾರಿ ಬೆಳೆಯುತ್ತಾರೆ. ಹೊಲದಲ್ಲಿಯೇ ಮನೆ ಮಾಡಿಕೊಂಡಿದ್ದು ಸ್ವಾವಲಂಬಿ ಜೀವನ ನಡೆಸುತ್ತಿರುವ ಲಕ್ಷ್ಮವ್ವ ಬಿತ್ತನೆಯಿಂದ ಕಟಾವಿನವರೆಗೂ ಶ್ರಮ ಪಡುತ್ತಾರೆ.
ಆರಂಭದಲ್ಲಿ ಕೃಷಿ ಕೆಲಸ ಕಷ್ಟಎನಿಸಿತು. ಆದರೆ, ಕುಟುಂಬ ನಿರ್ವಹಣೆಗೆ ಅನಿವಾರ‍್ಯವಾಗಿತ್ತು. ಮನೆಯಲ್ಲಿದ್ದ ಎರಡು ಎತ್ತುಗಳಿಂದ ಉಳಿಮೆ ಮಾಡಿ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದೇನೆ. ಎರಡು ಆಕಳು ಕಟ್ಟಿಹೈನುಗಾರಿಕೆ, ತರಕಾರಿ, ಮಾವು ಎಲ್ಲ ಬೆಳೆ ಬೆಳೆಯುತ್ತಿದ್ದು ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ.- ಲಕ್ಷ್ಮವ್ವ ಹಡಪದ, ರೈತ ಮಹಿಳೆ ಪ್ರಶಸ್ತಿ ಪುರಸ್ಕೃತರು
ಲಕ್ಷ್ಮವ್ವ ಕೃಷಿಕರಾದದ್ದು ಹೀಗೆ
ಲಕ್ಷ್ಮವ್ವ ಹಡಪದ ಬಡ ಕುಟುಂಬದ ಮಹಿಳೆ. ಚಿಕ್ಕವರಿದ್ದಾಗಲೇ ತಂದೆಯನ್ನು ಕಳೆದುಕೊಂಡವರು. ತಾಯಿ, ತಮ್ಮನ ಜತೆಗೆ ಬೆಳೆದ ಲಕ್ಷ್ಮವ್ವ, ತಾನು ಮದುವೆಯಾದರೆ
ವಯಸ್ಸಾಗುತ್ತಿರುವ ತಾಯಿ, ಸಹೋದರನ ಜೀವನ ಹೇಗೆಂದು ಚಿಂತಿಸಿದರು. ತಾನು ಮದುವೆಯಾಗದೇ ಸಹೋದರನ ಮದುವೆ ಮಾಡಿ ಮನೆಯ ಹಿರಿಯಳ ಜವಾಬ್ದಾರಿ ನಿರ್ವಹಿಸಿದವರು. ಸಹೋದರನ ಮದುವೆ ಆಗಿ ಆರು ವರ್ಷಗಳಾಗಿದ್ದವು. ಈ ವೇಳೆ ಅನಾರೋಗ್ಯ ಕಾಣಿಸಿಕೊಂಡು ಸಹೋದರ ಅಕಾಲಿಕವಾಗಿ ನಿಧನರಾದರು. ಕೃಷಿಯಲ್ಲಿ ಸಣ್ಣಪುಟ್ಟಕೆಲಸ ಮಾಡುತ್ತಿದ್ದ ಲಕ್ಷ್ಮವ್ವ, ಕೃಷಿ ಮಾಡುತ್ತಿದ್ದ ಸಹೋದರನ ಸಾವಿನಿಂದ ಧೃತಿಗೆಟ್ಟರು. ಸಹೋದರನ ಪತ್ನಿ, ಇಬ್ಬರು ಮಕ್ಕಳೊಂದಿಗೆ ವಯಸ್ಸಾದ ತಾಯಿಯನ್ನೂ ಸಾಕುವ ಜವಾಬ್ದಾರಿ ವಹಿಸಿಕೊಂಡಾಗ ಈಕೆಗಿನ್ನೂ 30ರ ಹರೆಯ.
ಲಕ್ಷ್ಮವ್ವ ಶಾಲೆ ಕಲಿತವರಲ್ಲ. ಆದರೆ ಈವರೆಗಿನ ಕೃಷಿ ಅನುಭವವೇ ಅವರಿಗೆ ಸಾಕಷ್ಟನ್ನು ಕಲಿಸಿದೆ. ತಮ್ಮ ನಿಧನ ಹೊಂದಿದಾಗ ಇವರಿಗೆ ಕೃಷಿ ಮಾಡುವ ಆಯ್ಕೆ ಜೊತೆಗೆ ಹೊಲ ಮಾರುವ, ಮಾರಿ ಬಂದ ಹಣವನ್ನು ಬಡ್ಡಿಗೆ ಹಾಕುವ ಆಯ್ಕೆ ಇತ್ತು. ಆದರೆ ಇವರು ಆಯ್ಕೆ ಮಾಡಿಕೊಂಡು ಜಯಿಸಿದ್ದು ಕೃಷಿ ಕ್ಷೇತ್ರದಲ್ಲಿ.
ಮದುವೆಯಾಗಿ ಗಂಡನ ಮನೆಗೆ ಹೋಗುವ ಕನಸಿದ್ದರೂ ಸಹೋದರನ ಸಲುವಾಗಿ ಮದುವೆಯಾಗದೇ ಉಳಿದು ಕೃಷಿಯಲ್ಲಿ ತೊಡಗಿರುವುದು ಇವರ ಮತ್ತೊಂದು ಸಾಧನೆ. ಕೃಷಿ ಮೂಲಕವೇ ಇಡೀ ಕುಟುಂಬ ಸಾಕುತ್ತಿರುವುದು ಹಾಗೂ ಯಾರ ಸಹಾಯವಿಲ್ಲದೇ ಕೃಷಿ ಮಾಡುತ್ತಿರುವ ಲಕ್ಷ್ಮವ್ವ ಗ್ರಾಮಸ್ಥರಿಗೆ ಅಚ್ಚುಮೆಚ್ಚಿನ ಮಹಿಳೆ. ಯುವ ರೈತರು ಈಕೆಯ ಬಳಿ ಕೃಷಿ ಕುರಿತ ಸಲಹೆಗಳನ್ನು ಪಡೆದಿದ್ದಾರೆ.
ಲಕ್ಷ್ಮವ್ವಳ ಸಾಧನೆಗೆ ದೇಶಪಾಂಡೆ ಪ್ರತಿಷ್ಠಾನ ಕೃಷಿ ಸಿಂಚನ ಪ್ರಶಸ್ತಿ, ಕೃಷಿ ವಿವಿಯಿಂದ ಗೌರವ ಸನ್ಮಾನ, ಕೃಷಿ ಇಲಾಖೆ ಅಧಿಕಾರಿಗಳಿಂದ ಪ್ರಶಂಸೆ ದೊರೆತಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ