* ಮೊದಲೇ ಆತ್ಮಹತ್ಯೆ ಎಚ್ಚರಿಕೆ ನೀಡಿದ್ದ ಗುತ್ತಿಗೆದಾರ
* ಬೋಗಸ್ ಸಹಿ ಮಾಡಿ ಜಿ.ಪಂ. ಟಿಕೆಟ್ ಕೇಳಿದ್ದ, ಸಂತೋಷ್ ಒಬ್ಬ ವಂಚಕ
* ಈಗ ನಡೆದಿರೋ ಘಟನೆಗಳ ಹಿಂದೆ ದೊಡ್ಡ ವ್ಯಕ್ತಿ ಇದ್ದಾರೆ: ಬಿಜೆಪಿ ಮುಖಂಡ
ಬೆಳಗಾವಿ(ಏ.12): ಗುತ್ತಿಗೆದಾರ ಸಂತೋಷ್ ಪಾಟೀಲ್‌ಗೂ(Santos Patil) ಬಿಜೆಪಿಗೂ ಸಂಬಂಧ ಇಲ್ಲ. ಆತನೊಬ್ಬ ವಂಚಕ. ಐದು ವರ್ಷಗಳ ಹಿಂದೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಬೋಗಸ್ ಸಹಿ ಮಾಡಿ ಹಿರೇಬಾಗೇವಾಡಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೇಳಿದ್ದ ಎಂದು ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ್ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ಸಂತೋಷ್ ವರ್ಕ್ ಆರ್ಡರ್ ಇಲ್ಲದೆ 12 ಗುತ್ತಿಗೆದಾರರಿಂದ ಹಿಂಡಲಗಾ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡಿಸಿದ್ದಾನೆ. ನಿಮಗೆ ಬಿಲ್ ಮಂಜೂರು ಮಾಡಿಸಿ ಕೊಡುತ್ತೇನೆ ಎಂದು ಹೇಳಿ ಗುತ್ತಿಗೆದಾರರಿಂದ 92 ಲಕ್ಷ ಹಣ ಪಡೆದಿದ್ದಾನೆ. ಆ ಎಲ್ಲ ಗುತ್ತಿಗೆದಾರರು ನನ್ನ ಬಳಿ ಬಂದಿದ್ದರು. ಅವರಿಗೆ ಪೊಲೀಸರಿಗೆ(Police) ದೂರು ನೀಡಲು ಹೇಳಿದ್ದೆ. ಆತ ಮೂಲತಃ ಬಡಸ ಕೆ.ಎಚ್. ಗ್ರಾಮದವನಾಗಿದ್ದು, ಬೆಳಗಾವಿಯ(Belagavi) ವಿಜಯನಗರದಲ್ಲಿ ಆತನ ಎರಡು ಮನೆಗಳಿವೆ. ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಗಮನಕ್ಕೆ ಈ ಎಲ್ಲ ವಿಷಯವನ್ನು ತಂದಿದ್ದು, ಅವರು ವಿಚಾರಿಸುತ್ತಿದ್ದಾರೆ. ಈಗ ನಡೆದಿರುವ ಘಟನೆಗಳ ಹಿಂದೆ ಯಾರೋ ಒಬ್ಬ ದೊಡ್ಡ ವ್ಯಕ್ತಿ ಇದ್ದಾರೆ ಎಂದು ಧನಂಜಯ ಜಾಧವ್ ಹೇಳಿದರು.
ಈಶ್ವರಪ್ಪ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ದೂರು: ಸರ್ಕಾರದ ವಿರುದ್ಧ ಗುಡುಗಿದ ಸಿದ್ದು
ಪ್ರಧಾನಿಗೆ ಪತ್ರ ಬರೆದಿದ್ದ ಸಂತೋಷ
ಆತ್ಮಹತ್ಯೆ(Suicide) ಮಾಡಿಕೊಂಡಿರುವ ಸಂತೋಷ ಪಾಟೀಲ ಅವರು ಈ ಹಿಂದೆಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕೆಲವು ಆರೋಪಗಳನ್ನು ಮಾಡಿ ಪ್ರಧಾನಿ(PM Narendra Modi), ಸಿಎಂ(Basavaraj Bommai) ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮಾ.13, 2022ರಂದು ಪತ್ರ ಬರೆದಿದ್ದರು. ಅಲ್ಲದೆ, ಸಂತೋಷ ಗೊತ್ತಿಲ್ಲ ಎಂದಿದ್ದ ಈಶ್ವರಪ್ಪ ವಿರುದ್ಧ ಕೂಡ ಕಿಡಿಕಾರಿದ್ದ ವಿಡಿಯೋ ಕೂಡ ಬಿಡುಗಡೆ ಮಾಡಿ ಹರಿಬಿಟ್ಟಿದ್ದರು.
ಈ ವಿಡಿಯೋದಲ್ಲಿ ಕಾಮಗಾರಿ ವರ್ಕ್ ಆರ್ಡರ್, ಪೇಮೆಂಟ್ ಮಾಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಸಚಿವ ಈಶ್ವರಪ್ಪನವರೇ ಹೊಣೆ ಎಂದು ಸಂತೋಷ ಮೊದಲೇ ಎಚ್ಚರಿಕೆ ನೀಡಿದ್ದ. ಈ ಕುರಿತು 2022, ಮಾ.29 ರಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ. ಈ ವಿಡಿಯೋ ಜೊತೆಗೆ ಬಿಜೆಪಿ ಮೆಂಬರ್‌ಶಿಪ್ ಕಾರ್ಡ್ ಬಿಡುಗಡೆಗೊಳಿಸಿದ್ದರು. ನಿಮ್ಮ ಮೇಲೆ ವಿಶ್ವಾಸವಿಟ್ಟು ಕಾಮಗಾರಿ ಪೂರ್ಣ ಮಾಡಿದ್ದೇನೆ. ವರ್ಕ್ ಆರ್ಡರ್, ಪೇಮೆಂಟ್ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರಿಂದ ನಾನು ಕಾಮಗಾರಿ ಮಾಡಿದ್ದೇನೆ. ಆದರೆ, ಸುಮ್ಮನೆ ನುಣುಚಿಕೊಳ್ಳುವ ಸಲುವಾಗಿ ಅವನು ಯಾರು ಗೊತ್ತಿಲ್ಲ ಎನ್ನುವುದು ಸರಿಯಲ್ಲ ಎಂದೂ ಸಚಿವ ಈಶ್ವರಪ್ಪ ವಿರುದ್ದ ಅಸಮಾಧಾನ ಹೊರಹಾಕಿದ್ದರು.
108 ಕಾಮಗಾರಿಗಳನ್ನು ಮಾಡಬೇಕಾದರೆ ಯಾರಾದರೂ ಸುಮ್ಮನಿರುತ್ತಾರಾ? ಮೇಲಿಂದ ದೇವರು ಬಂದು ಮಾಡಿಸುತ್ತಾರಾ? ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಪಕ್ಷಕ್ಕೂ ಒಳ್ಳೆಯ ಹೆಸರು ಬಂದಿದೆ. ಸುಮ್ಮನೆ ನುಣುಚಿಕೊಳ್ಳಲು, ಇದರಿಂದ ಪಾರಾಗಬೇಕು ಎಂದು ಏನೇನೋ ಹೇಳಿಕೆ ನೀಡಬೇಡಿ. ತಮ್ಮ ಹಿರಿತನಕ್ಕೆ ಇದು ಒಳ್ಳೆಯದಲ್ಲ. ನಾನು ಕೂಡ ಪಕ್ಷದ ಕಾರ್ಯಕರ್ತನಾಗಿದ್ದು, ನನ್ನ ಮೆಂಬರ್‌ಶಿಪ್ ಕಾರ್ಡ್ ಸಹ ಕಳುಹಿಸಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದರು.
Chikkamagaluru: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಪಾತ್ರ ಕಂಡುಬಂದಿಲ್ಲ: ಸಿ.ಟಿ.ರವಿ
ಪ್ರಧಾನಿಗೆ ಬರೆದಿದ್ದ ಪತ್ರದಲ್ಲೇನಿತ್ತು?:
ಬೆಳಗಾವಿ ತಾಲೂಕಿನ ಹಿಂಡಲಗಾ ರಸ್ತೆ ಸೇರಿದಂತೆ ಕೆಲವು ರಸ್ತೆಗಳನ್ನು ಗುತ್ತಿಗೆದಾರ ಸಂತೋಷ ಪಾಟೀಲ ಅವರು ನಿರ್ಮಾಣ ಮಾಡಿದ್ದಾರೆ. ಇದಕ್ಕೆ .4 ಕೋಟಿ ಬಿಲ್ ಹಣವನ್ನು ಸರ್ಕಾರ ನೀಡಬೇಕಿತ್ತು. ಆದರೆ, ಸಚಿವರ ಬೆಂಬಲಿಗರು ಕಮೀಷನ್ ಕೇಳುತ್ತಿದ್ದಾರೆಂಬ ಆರೋಪ ಸಂತೋಷ ಅವರದ್ದಾಗಿತ್ತು. ವರ್ಕ್ ಆರ್ಡರ್ ಮುಗಿದು ವರ್ಷಕ್ಕಿಂತ ಮೇಲಾದರೂ ಹಣ ಸಂದಾಯವಾಗಿಲ್ಲ. ನಾನು ಬೇರೆ ಕಡೆಯ ಬಡ್ಡಿಗೆ ಹಣ ಪಡೆದುಕೊಂಡಿದ್ದೇನೆ. ಅವರು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಅವರು ಪ್ರಧಾನಿಗೆ ಮತ್ತು ಕೇಂದ್ರ ಸಚಿವರಿಗೆ (RDPR) ಬರೆದಿರುವ ಪತ್ರದಲ್ಲಿ ಆರೋಪಿಸಿದ್ದರು.
ಈಗಾಗಲೇ ತಮ್ಮ ಕುಟುಂಬ ಸಾಕಷ್ಟು ತೊಂದರೆಯಲ್ಲಿದೆ. ಕೈಗಡವಾಗಿ ಮತ್ತು ಬೇರೆ ಕಡೆ ಬಡ್ಡಿಗೆ ಹಣ ಪಡೆದುಕೊಂಡು ರಸ್ತೆ ಕಾಮಗಾರಿ ಮಾಡಿದ್ದೇನೆ. ಈಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ನನಗೆ ಬರಬೇಕಾಗಿರುವ ಹಣವನ್ನು ಕೂಡಲೇ ಕೊಡಿಸಬೇಕು ಎಂದು ಅವರು ಮನವಿ ಮಾಡಿದ್ದರು. ಒಂದು ವೇಳೆ ಹಣ ಕೊಡಿಸದೇ ಇದ್ದರೆ ನಮ್ಮ ಕುಟುಂಬದವರು ಆತ್ಮಹತ್ಯೆಯ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.