
ಬೆಂಗಳೂರು(ಮಾ.15): ಕೊಡಗು, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ಶಿವಮೊಗ್ಗಗಳಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಸುರಿದ ವರ್ಷದ ಮೊದಲ ಮಳೆ ಕಾದ ಇಳೆಗೆ ತಂಪನ್ನೆರೆಯಿತು.
ಕೊಡಗಿನ ನಾಪೋಕ್ಲು, ಮರಗೋಡು, ಕತ್ತಲೆಕಾಡು ಮತ್ತಿತರ ಕಡೆ ಮಧ್ಯಾಹ್ನದ ನಂತರ ದಿಢೀರ್ ಮಳೆಯಾಗಿದ್ದು, ಸುಂಟಿಕೊಪ್ಪದ ಪನ್ಯದಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಇದೇ ವೇಳೆ, ಮೂಡಿಗೆರೆ, ಎನ್.ಆರ್.ಪುರ, ಹೊರನಾಡು, ಬಾಳೆಹೊನ್ನೂರು, ಕಳಸ, ಕೊಪ್ಪ ತಾಲೂಕು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಧ್ಯಾಹ್ನ 2.30ರಿಂದ 4 ಗಂಟೆಯವರೆಗೆ ಆಲಿಕಲ್ಲು, ಗುಡುಗು ಸಹಿತ ಮಳೆಯಾಗಿದೆ. ಗಾಳಿ, ಮಳೆಗೆ ರಂಭಾಪುರಿ ಪೀಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ 300ಕ್ಕೂ ಅಧಿಕ ಹೆಂಚುಗಳು ಹಾರಿಹೋಗಿವೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ. ಬಾಳೆಹೊನ್ನೂರಿನ ವೀರಭದ್ರಸ್ವಾಮಿ ದೇವಾಲಯದ ಹೆಂಚುಗಳಿಗೂ ಹಾನಿಯಾಗಿದೆ. ಕಳಸದಲ್ಲಿ ಬುಧವಾರ ಮಳೆಗಾಗಿ ಪ್ರಾರ್ಥಿಸಿ ಕಳಸೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದ್ದು, ಇದಕ್ಕೂ ಒಂದು ದಿನ ಮೊದಲೇ ಮಳೆಯಾಗಿದೆ.
ಬಿಸಿಲಿನ ಬೇಗೆಯಿಂದ ಬಳಲುತ್ತಿರುವವರಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ ಇಂದಿನಿಂದ 5 ದಿನ ಮಳೆ..!
ಇದೇ ವೇಳೆ, ಶಿವಮೊಗ್ಗ, ಹೊಸನಗರ ಭಾಗದ ಕೆಲವೆಡೆಯೂ ತುಂತುರು ಮಳೆ ಸುರಿಯಿತು. ಉತ್ತರ ಕನ್ನಡ ಜಿಲ್ಲೆ ಶಿರಸಿ ಸುತ್ತಮುತ್ತ ಮಧ್ಯಾಹ್ನದ ನಂತರ ಮಳೆಯಾಗಿದ್ದು, ಇಳೆಗೆ ತಂಪನ್ನೆರೆಯಿತು. ವರ್ಷದ ಮೊದಲ ಮಳೆ ಕಾಫಿ ಫಸಲಿಗೆ ಅನುಕೂಲ. ಅಲ್ಲದೆ, ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಕಾಡ್ಗಿಚ್ಚಿಗೆ ಮಳೆ ಬ್ರೇಕ್ ಹಾಕಬಹುದು ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ