ರಾಜ್ಯದಲ್ಲಿ ಮಳೆಯ ಅಬ್ಬರ ಕ್ಷೀಣಿಸುತ್ತಿದ್ದಂತೆ ಚಳಿ ತನ್ನ ಪ್ರತಾಪ ತೋರಲಾರಂಭಿಸಿದ್ದು, ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದೆಡೆ ತಾಪಮಾನದಲ್ಲಿ ಭಾರಿ ಇಳಿಕೆ ದಾಖಲಾಗುತ್ತಿದೆ. ತೇವಾಂಶ ಹೆಚ್ಚಿರುವುದೇ ಚಳಿ ಹೆಚ್ಚಲು ಕಾರಣ.
ಬೆಂಗಳೂರು (ನ.17): ರಾಜ್ಯದಲ್ಲಿ ಮಳೆಯ ಅಬ್ಬರ ಕ್ಷೀಣಿಸುತ್ತಿದ್ದಂತೆ ಚಳಿ ತನ್ನ ಪ್ರತಾಪ ತೋರಲಾರಂಭಿಸಿದ್ದು, ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದೆಡೆ ತಾಪಮಾನದಲ್ಲಿ ಭಾರಿ ಇಳಿಕೆ ದಾಖಲಾಗುತ್ತಿದೆ. ತೇವಾಂಶ ಹೆಚ್ಚಿರುವುದೇ ಚಳಿ ಹೆಚ್ಚಲು ಕಾರಣ. ವಾಡಿಕೆಯ ಪ್ರಕಾರ ನವೆಂಬರ್ ಕೊನೆಯ ವಾರದಿಂದ ಜನವರಿ ಮೊದಲ ವಾರದವರೆಗೆ ರಾಜ್ಯದಲ್ಲಿ ಚಳಿ ಹೆಚ್ಚು ತೀಕ್ಷ್ಣವಾಗಿರುತ್ತದೆ. ಆದರೆ ಈ ಬಾರಿ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ, ಉತ್ತರ ಮತ್ತು ಈಶಾನ್ಯ ದಿಕ್ಕಿನಿಂದ ರಾಜ್ಯದತ್ತ ಬೀಸುತ್ತಿರುವ ಗಾಳಿ ಹಾಗೂ ಗಾಳಿಯಲ್ಲಿನ ತೇವಾಂಶದ ಕಾರಣದಿಂದ ನವೆಂಬರ್ ಎರಡನೇ ವಾರದಿಂದಲೇ ಮೈ ಕೊರೆಯುವ ಚಳಿ ಶುರುವಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲುಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ ರಾಜ್ಯದ ಶೇ.75ರಷ್ಟುಭೂ ಭಾಗದಲ್ಲಿ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದೆ. ಬೀದರ್‌ನಲ್ಲಿ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ರಾಜ್ಯದ ಕನಿಷ್ಠ ತಾಪಮಾನವಾಗಿದೆ. ವಾಡಿಕೆಗಿಂತ 7 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ಬೀದರ್‌ನಲ್ಲಿ ವರದಿಯಾಗಿದೆ.
ಹಿಂದೂ ಹೆಣ್ಮಕ್ಕಳು ಮುಸ್ಲಿಂ ಯುವಕರ ಬೆನ್ನು ಬೀಳಬೇಡಿ: ಪ್ರಮೋದ ಮುತಾಲಿಕ್
ಬಹುತೇಕ ಎಲ್ಲೆಡೆ ಇಳಿಕೆ: ಉತ್ತರ ಒಳನಾಡಿನಲ್ಲಿಯೂ ಸಹ ತಾಪಮಾನದಲ್ಲಿ ಭಾರಿ ಇಳಿಕೆಯಾಗಿದೆ. ರಾಯಚೂರಿನಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ವಾಡಿಕೆಗಿಂತ 6.1 ಡಿ. ಸೆ. ಕಡಿಮೆ ತಾಪಮಾನ ಇದಾಗಿದೆ. ವಿಜಯಪುರದಲ್ಲಿ 14 ಡಿ. ಸೆ. (ವಾಡಿಕೆಗಿಂತ 4.9 ಡಿ. ಸೆ. ಕಡಿಮೆ), ಬಾಗಲಕೋಟೆಯಲ್ಲಿ 13.8 ಡಿ. ಸೆ. (ವಾಡಿಕೆಗಿಂತ 4.7 ಡಿ. ಸೆ. ಕಡಿಮೆ) ದಾಖಲಾಗಿದೆ. ಉಳಿದಂತೆ ಬೆಳಗಾವಿ ನಗರದಲ್ಲಿ 19 ಡಿ. ಸೆ., ಧಾರವಾಡ 16, ಗದಗ 16.1, ಕಲಬುರಗಿ 16.7, ಹಾವೇರಿ 17.4, ಕೊಪ್ಪಳ ಮತ್ತು ಯಾದಗಿರಿ ತಲಾ 16.8 ಮತ್ತು ಕಲಬುರಗಿ ಜಿಲ್ಲೆಯಲ್ಲಿ 13.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ವರದಿಯಾಗಿದೆ. ಉತ್ತರ ಒಳನಾಡಿನಲ್ಲಿ ಯಾದಗಿರಿಯಲ್ಲಿ 32.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದೇ ಗರಿಷ್ಠ ತಾಪಮಾನ.
ಆದರೆ ದಕ್ಷಿಣ ಒಳನಾಡಿನ ಹೆಚ್ಚಿನ ಕಡೆಗಳಲ್ಲಿ ವಾಡಿಕೆಗಿಂತ ಕಡಿಮೆ ಉಷ್ಣತೆ ವರದಿಯಾಗಿದೆ. ಮಂಡ್ಯದಲ್ಲಿ ಕನಿಷ್ಠ ತಾಪಮಾನ 20.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಹೊರತು ಪಡಿಸಿದರೆ ಉಳಿದೆಲ್ಲ ಜಿಲ್ಲೆಗಳಲ್ಲಿ 20 ಡಿಗ್ರಿಗಿಂತ ಕಡಿಮೆ ತಾಪಮಾನ ವರದಿಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ದಕ್ಷಿಣ ಒಳನಾಡಿನ ಕನಿಷ್ಠ ತಾಪಮಾನ 16.1 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.
ಕರಾವಳಿಯಲ್ಲಿ ಚಳಿ ಇಲ್ಲ: ಆದರೆ ಕರಾವಳಿಯಲ್ಲಿ ಬೆಚ್ಚನೆಯ ವಾತಾವರಣವೇ ಇದ್ದು ಎಲ್ಲೆಡೆ 30 ಡಿ. ಸೆ. ಗಿಂತ ಹೆಚ್ಚು ಗರಿಷ್ಠ ತಾಪಮಾನ, 20 ಡಿ. ಸೆ. ಗಿಂತ ಹೆಚ್ಚು ಕನಿಷ್ಠ ತಾಪಮಾನ ದಾಖಲಾಗಿದೆ. ಪಣಂಬೂರಿನಲ್ಲಿ ರಾಜ್ಯದಲ್ಲೇ ಗರಿಷ್ಠ 35.3 ಡಿ. ಸೆ. ಮತ್ತು ಕಾರವಾರದಲ್ಲಿ 24 ಡಿ. ಸೆ. ಕನಿಷ್ಠ ತಾಪಮಾನ ವರದಿಯಾಗಿದೆ. ರಾಜ್ಯದ ಶೇ.99ರಷ್ಟು ಭೂ ಭಾಗದಲ್ಲಿ ಶೇ.90ಕ್ಕಿಂತ ಹೆಚ್ಚು ತೇವಾಂಶ ದಾಖಲಾಗಿದೆ.
ತುಮಕೂರು: ತಾಯಿ, ಸೋದರರ ಸಾವಿನಿಂದ ಅನಾಥವಾದ ಬಾಲಕಿಗೆ 10 ಲಕ್ಷ, ಸಚಿವ ಸುಧಾಕರ್
ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು, ಮಂಡ್ಯ, ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ್, ಕಲಬುರಗಿ, ಬೆಳಗಾವಿ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲೆಡೆ ತೇವಾಂಶ ಹೆಚ್ಚಿರುವುದು ಚಳಿ ಹೆಚ್ಚಾಗಲು ಕಾಣವಾಗಿದೆ.
ಚಳಿ ಎಲ್ಲಿ ಎಷ್ಟು?: ಬೀದರ್ 11, ರಾಯಚೂರು 13, ವಿಜಯಪುರ 14, ಬಾಗಲಕೋಟೆ 13.8, ಬೆಳಗಾವಿ 19, ಧಾರವಾಡ 16, ಕಲಬುರಗಿ 16.7, ಕೊಪ್ಪಳ 16.8