AIR FM Rainbow: ಎಫ್‌ಎಂ ರೇನ್‌ಬೋ ವಿಲೀನಕ್ಕೆ ಕನ್ನಡಿಗರ ಕಿಡಿ

By Kannadaprabha News  |  First Published Jan 30, 2022, 3:15 AM IST

ಹೊಸತನದ ರೂಪದಲ್ಲಿ ‘ರಾಗಂ’ನೊಂದಿಗೆ ವಿಲೀನ ಏಕೆ?
ಇದರಿಂದ ಕನ್ನಡ ಹೋಗಿ ಹಿಂದಿ ಕಾರ್ಯಕ್ರಮ ಪ್ರಸಾರ: ನಾರಾಯಣಗೌಡ
ಕನ್ನಡಿಗ ಕಲಾವಿದರಿಗೆ ಅನ್ಯಾಯ, ನೌಕರಿ ನಷ್ಟಭೀತಿ: ಪ್ರವೀಣ್‌ ಶೆಟ್ಟಿ


ಬೆಂಗಳೂರು (ಜ.29): ಹೊಸತನದ ನೆಪದಲ್ಲಿ ‘ಕನ್ನಡ ಎಫ್‌ಎಂ ರೇನ್‌ಬೋ 101.3’ (FM Rainbow Kannada)ಪ್ರಸಾರಕ್ಕೆ ಕತ್ತರಿ ಹಾಕಲು ಪ್ರಸಾರ ಭಾರತಿ (Prasar Bharathi) ಮುಂದಾಗಿರುವುದಕ್ಕೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೇನ್‌ಬೋ ಕನ್ನಡಿಗರ ಅಚ್ಚುಮೆಚ್ಚಿನ ಬಾನುಲಿಯಾಗಿದ್ದು, ಸಾಂಸ್ಕೃತಿಕವಾಗಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಹಳೆಯ ಕನ್ನಡ ಚಿತ್ರಗೀತೆಗಳು, ಭಾವಗೀತೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ನಿತ್ಯ ಸುಮಾರು 29 ಲಕ್ಷಕ್ಕೂ ಹೆಚ್ಚು ಕೇಳುಗರನ್ನು(ಶ್ರೋತೃಗಳು) ಪಡೆದಿದ್ದು ದೇಶದಲ್ಲೇ ಅಗ್ರ 2ನೇ ಸ್ಥಾನವನ್ನು ‘ಕನ್ನಡದ ಕಾಮನಬಿಲ್ಲು’ ಪಡೆದುಕೊಂಡಿದೆ.

ಇಂತಹ ಅತ್ಯುತ್ತಮ ಚಾನಲ್‌ ಅನ್ನು ‘ರಾಗಂ’ (Ragam) ಹೆಸರಿನೊಂದಿಗೆ ವಿಲೀನ (Merger) ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಈ ಹಿಂದೆ ಕರ್ಣಾಟಕ ಸಂಗೀತ ಪ್ರಸಾರಕ್ಕೆಂದೇ ಇದ್ದ ಅಮೃತವರ್ಷಿಣಿ ಚಾನೆಲ್‌ ಅನ್ನು ರಾಗಂನಲ್ಲಿ ವಿಲೀನ ಮಾಡಲಾಗಿದೆ. ಇದೀಗ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತೇವೆ ಎಂಬ ನೆಪದಲ್ಲಿ ಕನ್ನಡ ಮೂಲ ಸೊಗಡಿನ ಎಫ್‌ಎಂ ರೇನ್‌ಬೋ ಸ್ಟೇಷನ್‌ನನ್ನು ಪ್ರಸಾರ ಭಾರತಿ, ರಾಗಂನೊಂದಿಗೆ ವಿಲೀನಗೊಳಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಆದರೆ, ಆಕಾಶವಾಣಿ ಬೆಂಗಳೂರು (akashvani bangalore) ಕೇಂದ್ರದಿಂದಲೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಆಕಾಶವಾಣಿ ಮೂಲಗಳು ಮಾಹಿತಿ ನೀಡಿವೆ.

ನಾರಾಯಣಗೌಡ ಆಕ್ರೋಶ: ರೇನ್‌ಬೋ 101.3 ರಾಗಂನೊಂದಿಗೆ ವಿಲೀನಗೊಳ್ಳುವುದರಿಂದ ಈ ಚಾನೆಲ್‌ನಲ್ಲಿ ಬರುತ್ತಿದ್ದ ಕನ್ನಡ ಕಾರ್ಯಕ್ರಮಗಳು ಸ್ಥಗಿತಗೊಂಡು ಹಿಂದಿ ಕಾರ್ಯಕ್ರಮಗಳು ಬರಲಿವೆ. ಕರ್ನಾಟಕದಲ್ಲಿ ಕನ್ನಡ ಪರವಾಗಿದ್ದ ಆಕಾಶವಾಣಿಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಲಿದೆ ಎಂಬುದು ಕನ್ನಡಿಗರ ಆತಂಕ. ಈ ಹಿಂದೆ ಅಮೃತವರ್ಷಿಣಿ ಹೆಸರಿನಲ್ಲಿ ಬರುತ್ತಿದ್ದ ಕಾರ್ಯಕ್ರಮವನ್ನು ಎಲ್ಲ ವರ್ಗದ ಜನರು ಕೇಳುತ್ತಿದ್ದರು. ಈಗ ಆ ಕಾರ್ಯಕ್ರಮವೇ ಬರುತ್ತಿಲ್ಲ. ಇಂತಹದ್ದೇ ಸ್ಥಿತಿ ರೇನ್‌ಬೋ 101.3 ಪ್ರಸಾರಕ್ಕೂ ಬರಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಆದೇಶದ ಅನ್ವಯ, ಪ್ರತಿಯೊಂದು ರಾಜ್ಯದ ಮೂಲ ಚಾನೆಲ್‌ನಲ್ಲಿ ವಾರಕ್ಕೊಮ್ಮೆ ರಾತ್ರಿ ವೇಳೆ ಸ್ನೇಹಭಾರತಿ ಹೆಸರಿನಲ್ಲಿ ಇತರೆ ರಾಜ್ಯಗಳ ಪ್ರಾದೇಶಿಕ ಭಾಷೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕೆಂಬ ನಿಯಮವಿದೆ. ಆದರೆ, ಕೇಂದ್ರದ ಆದೇಶವನ್ನು ಉಲ್ಲಂಘಿಸಿ ಎಫ್‌ಎಂ ರೇನ್‌ಬೋನಲ್ಲೂ ಬೇರೆ ಭಾಷೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿರುವುದು ಸರಿಯಲ್ಲ ಎಂದು ಕೇಳುಗರು ಆರೋಪಿಸಿದ್ದಾರೆ.

ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು: ಕೇಂದ್ರದ ವಿರುದ್ಧ HDK ಕೆಂಡಾಮಂಡಲ
ನೌಕರಿ ನಷ್ಟ:
ಎಫ್‌ಎಂ ರೇನ್‌ಬೋ 101.3 ಪ್ರಸಾರ ಸ್ಥಗಿತಗೊಳ್ಳುವುದರಿಂದ ಅನೇಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಜೊತೆಗೆ ಕನ್ನಡದ ಪ್ರಾದೇಶಿಕ ಕಾರ್ಯಕ್ರಮಗಳನ್ನು ಕೇಳುವ ವರ್ಗಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಹಾಗೆಯೇ ಕನ್ನಡದ ಕಲಾವಿದರು, ಸಾಧಕರಿಗೆ ಸಿಗುತ್ತಿದ್ದ ಬಹುದೊಡ್ಡ ವೇದಿಕೆಯೇ ಇಲ್ಲದಂತಾಗುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯದ ಕೇಂದ್ರ ಸರ್ಕಾರದ ಮಂತ್ರಿಗಳು, ಸಂಸದರು ಧ್ವನಿ ಎತ್ತಿ ರಾಗಂನೊಂದಿಗೆ ರೇನ್‌ಬೋ ವಿಲೀನವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ಕುಮಾರ್‌ ಶೆಟ್ಟಿಒತ್ತಾಯಿಸಿದ್ದಾರೆ.


ಎಫ್‌ಎಂ ರೇನ್‌ಬೋವನ್ನು ರಾಗಂನೊಂದಿಗೆ ವಿಲೀನ ಮಾಡುವುದನ್ನು ವಿರೋಧಿಸಿ ಫೆ.1ರಂದು ಬೆಳಗ್ಗೆ 11ಕ್ಕೆ ಆಕಾಶವಾಣಿ ಕೇಂದ್ರದ ಮುಂದೆ ಕರವೇ ಭಾರೀ ಪ್ರತಿಭಟನೆ ನಡೆಸಲಿದೆ. ಕನ್ನಡಿಗರ ಪರ ಧ್ವನಿ ಎತ್ತದಿದ್ದರೆ ಸಂಸದರ ಮನೆ ಮುಂದೆ ಕರವೇ ಕಾರ್ಯಕರ್ತರು ಧರಣಿ ನಡೆಸಿ ಛೀಮಾರಿ ಹಾಕುವಂತ ಕಾರ್ಯಕ್ರಮ ಆಯೋಜಿಸುವ ಬಗ್ಗೆಯೂ ಚಿಂತನೆ ಇದೆ.
- ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರವೇ

Latest Videos

Karnataka Politics ಸಿದ್ದರಾಮಯ್ಯ ಭೇಟಿ ಮಾಡಿದ ಮಂಡ್ಯ ಜೆಡಿಎಸ್ ಶಾಸಕ, ಎಚ್‌ಡಿಕೆ ಪ್ರತಿಕ್ರಿಯಿಸಿದ್ದು ಹೀಗೆ
ಕನ್ನಡ ಕಾಮನ ಬಿಲ್ಲಿನ ಕೇಳುಗರೆಲ್ಲರೂ ಸೇರಿ ಕಾಮನಬಿಲ್ಲಿನ ವರ್ಣರಂಜಿತ ಬಣ್ಣಗಳನ್ನು ಕರಗಲು ಬಿಡುವುದಿಲ್ಲ. ಕನ್ನಡಿಗರನ್ನು ಕೆಣಕುವ ಪ್ರಯತ್ನಗಳನ್ನು ಆಕಾಶವಾಣಿಯ ಅಧಿಕಾರಿಗಳು ಕೈ ಬಿಡಲಿ. ಇಲ್ಲದಿದ್ದರೆ ನಮ್ಮ ಸಂಘಟನೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಿದೆ.
-ಪ್ರವೀಣ್‌ ಕುಮಾರ್‌ ಶೆಟ್ಟಿ, ಅಧ್ಯಕ್ಷ, ಕರವೇ

click me!